ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ: ಆಧಾರ್ ಕಾರ್ಡ್‌ಗೂ ಮಾನ್ಯತೆ, ಸುಪ್ರೀಂ ಕೋರ್ಟ್‌ಗೆ ಚುನಾವಣಾ ಆಯೋಗ ಮಾಹಿತಿ
ಪರಿಷ್ಕರಣೆಯಡಿ ಈವರೆಗೆ 85,000 ಜನರು ತಮ್ಮ ಹೆಸರುಗಳನ್ನು ಮರುಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಿದ್ದು, 2 ಲಕ್ಷಕ್ಕೂ ಹೆಚ್ಚು ಹೊಸ ಮತದಾರರು ನೋಂದಾಯಿಸಿಕೊಂಡಿದ್ದಾರೆ.;
ಬಿಹಾರ ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಅಡಿಯಲ್ಲಿ, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅಥವಾ ತೆಗೆದುಹಾಕಲು ಆಧಾರ್ ಕಾರ್ಡ್ ಅನ್ನು ಮಾನ್ಯ ದಾಖಲೆಯಾಗಿ ಪರಿಗಣಿಸಲಾಗುವುದು ಎಂದು ಚುನಾವಣಾ ಆಯೋಗವು (ECI) ಸೋಮವಾರ, ಸೆಪ್ಟೆಂಬರ್ 8ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಈ ಹಿಂದೆ, ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಅನ್ನು ಮಾನ್ಯತೆಯಿಂದ ಹೊರಗಿಟ್ಟಿದ್ದ ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಮತದಾರರ ಗುರುತು ದೃಢೀಕರಿಸಲು ಆಧಾರ್ ಕಾರ್ಡ್ ಅನ್ನು ಪರಿಗಣಿಸುವಂತೆ ಆಯೋಗಕ್ಕೆ ನಿರ್ದೇಶನ ನೀಡಿತ್ತು.
ಕಪಿಲ್ ಸಿಬಲ್ ವಾದ
ವಿಚಾರಣೆಯ ಸಂದರ್ಭದಲ್ಲಿ, ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, "ಒಬ್ಬ ವ್ಯಕ್ತಿಯ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ, ಅವರ ಗುರುತಿಗಾಗಿ ಆಧಾರ್ ಕಾರ್ಡ್ ಅನ್ನು ಸ್ವೀಕರಿಸಬೇಕು. ಮತಗಟ್ಟೆ ಮಟ್ಟದ ಅಧಿಕಾರಿಗಳು ಪೌರತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ. 65 ಲಕ್ಷ ಜನರ ವಿಷಯದಲ್ಲೂ ಅವರು ಆಧಾರ್ ಸ್ವೀಕರಿಸುತ್ತಿಲ್ಲ," ಎಂದು ವಾದಿಸಿದರು. ಚುನಾವಣಾ ಆಯೋಗವು ಸೂಚಿಸಿರುವ 11 ದಾಖಲೆಗಳನ್ನು ಹೊರತುಪಡಿಸಿ ಬೇರೆ ದಾಖಲೆಗಳನ್ನು ಸ್ವೀಕರಿಸಿದ ಅಧಿಕಾರಿಗಳಿಗೆ ದಂಡ ವಿಧಿಸಲಾಗುತ್ತಿದೆ ಎಂದೂ ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಸುಪ್ರೀಂ ಕೋರ್ಟ್‌ನಿಂದ ರಾಜಕೀಯ ಪಕ್ಷಗಳಿಗೆ ತರಾಟೆ
ಇದೇ ವೇಳೆ, ಮತದಾರರ ಪಟ್ಟಿಯಿಂದ 65 ಲಕ್ಷಕ್ಕೂ ಹೆಚ್ಚು ಜನರನ್ನು ತೆಗೆದುಹಾಕಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ, ಅವರಿಗೆ ಸಹಾಯ ಮಾಡಲು ವಿಫಲವಾದ ಬಿಹಾರದ ರಾಜಕೀಯ ಪಕ್ಷಗಳನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು. "ರಾಜಕೀಯ ಪಕ್ಷಗಳು ತಮ್ಮ ಕೆಲಸವನ್ನು ಮಾಡುತ್ತಿಲ್ಲ," ಎಂದು ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು.
ವಿಶೇಷ ತೀವ್ರ ಪರಿಷ್ಕರಣೆಯಡಿ ಈವರೆಗೆ 85,000 ಜನರು ತಮ್ಮ ಹೆಸರುಗಳನ್ನು ಮರುಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಿದ್ದಾರೆ ಮತ್ತು 2 ಲಕ್ಷಕ್ಕೂ ಹೆಚ್ಚು ಹೊಸ ಮತದಾರರು ನೋಂದಾಯಿಸಿಕೊಂಡಿದ್ದಾರೆ ಎಂದು ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಯಾವುದೇ ಅಕ್ರಮಗಳು ನಡೆದಿಲ್ಲ ಎಂಬುದನ್ನು ಸಾಬೀತುಪಡಿಸಲು 15 ದಿನಗಳ ಕಾಲಾವಕಾಶ ನೀಡುವಂತೆಯೂ ಆಯೋಗವು ಕೋರಿದೆ.