Mahatma Gandhi: ಸಬರಮತಿ ಮರುಅಭಿವೃದ್ಧಿ ಯೋಜನೆ ಪ್ರಶ್ನಿಸಿದ್ದ ತುಷಾರ್ ಗಾಂಧಿಗೆ ಸುಪ್ರೀಂ ತರಾಟೆ
ಸಬರಮತಿ ಆಶ್ರಮ ಅಥವಾ ಗಾಂಧಿ ಆಶ್ರಮವನ್ನು ಮಹಾತ್ಮಾ ಗಾಂಧೀಜಿಯವರು 1917ರಲ್ಲಿ ಅಹಮದಾಬಾದ್‌ನಲ್ಲಿ ನಿರ್ಮಿಸಿದ್ದರು. ಅದನ್ನು 1200 ಕೋಟಿ ರೂಪಾಯಿಯಲ್ಲಿ ಅಭಿವೃದ್ಧಿಪಡಿಸಲು ಗುಜರಾತ್ ಸರ್ಕಾರ ಮುಂದಾಗಿದೆ.;
ಗುಜರಾತ್‌ನ ಅಹಮಬಾದ್‌ನಲ್ಲಿರುವ ಗಾಂಧೀಜಿಯ ಸಬರಮತಿ ಆಶ್ರಮವನ್ನು ಅಂದಾಜು 1,200 ಕೋಟಿ ರೂ.ಗಳ ವೆಚ್ಚದಲ್ಲಿ ಮರು ಅಭಿವೃದ್ಧಿ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದ 2022 ರ ಗುಜರಾತ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಹಾತ್ಮ ಗಾಂಧಿಯವರ ಮರಿಮೊಮ್ಮಗ ತುಷಾರ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇದೇ ವೇಳೆ “ನಿಮ್ಮ ಭಾವನೆಗಳನ್ನೆಲ್ಲ ಇಲ್ಲಿಗೆ ತರಬೇಡಿ...” ಎಂದು ತರಾಟೆಗೆ ತೆಗೆದುಕೊಂಡಿದೆ.
ಸಬರಮತಿ ಮರು ಅಭಿವೃದ್ಧಿ ಯೋಜನೆಯನ್ನು ನಿರ್ವಹಿಸುವುದು ಸರ್ಕಾರದ ನೀತಿಯಾಗಿದೆ. ಅದರಲ್ಲಿ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು ರಾಜೇಶ್ ಬಿಂದಾಲ್ ಅವರನ್ನೊಳಗೊಂಡ ವಿಭಾಗೀಯ ಪೀಠ, "ನಿಮ್ಮ ಭಾವನೆಗಳನ್ನೆಲ್ಲ ಇಲ್ಲಿಗೆ ತರಬೇಡಿ. ನಾವು ಮುಂದೆ ಸಾಗುತ್ತಿದ್ದೇವೆ, ದೇಶವೂ ಮುಂದೆ ಸಾಗುತ್ತಿದೆ. ಯಾವುದೇ ವಿಚಾರವನ್ನು ನೋಡುವ ದೃಷ್ಟಿಕೋನ ಬದಲಾಗಿದೆ" ಎಂದು ಹೇಳಿದೆ.
ಗುಜರಾತ್ ಹೈಕೋರ್ಟ್ ಆದೇಶ ಹೊರಡಿಸಿ ಎರಡೂವರೆ ವರ್ಷಗಳ ಬಳಿಕ ಈ ಅರ್ಜಿ ಸಲ್ಲಿಕೆಯಾಗಿದೆ. ಇಷ್ಟೊಂದು ವಿಳಂಬದ ಬಗ್ಗೆಯೂ ಗಮನಸೆಳೆದ ಸುಪ್ರೀಂ ಕೋರ್ಟ್ ನ್ಯಾಯಪೀಠ, "ನಾವು ಎಲ್ಲವನ್ನೂ ಪರಿಶೀಲಿಸಿದ್ದೇವೆ. ಈ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ" ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿತು. ಜೊತೆಗೆ, ಆಶ್ರಮದ ಪ್ರಧಾನ ವಲಯದ ಮೇಲೆ ಈ ಯೋಜನೆ ಪರಿಣಾಮ ಬೀರುತ್ತದೆ ಎಂಬ ಊಹೆಯನ್ನಿಟ್ಟುಕೊಂಡು ಆದೇಶವನ್ನು ಪ್ರಶ್ನಿಸುವುದು ಸಲ್ಲ ಎಂದೂ ಹೇಳಿತು.
ಗುಜರಾತ್ ಸರ್ಕಾರದ ಉದ್ದೇಶಿತ ಯೋಜನೆಯು ಶತಮಾನಗಳಷ್ಟು ಹಳೆಯದಾದ ಆಶ್ರಮದ ಸ್ವರೂಪವನ್ನೇ ಬದಲಾಯಿಸಲಿದೆ. 1,200 ಕೋಟಿ ರೂ. ವೆಚ್ಚದಲ್ಲಿ ಈ ಸ್ಥಳವನ್ನು ಬದಲಾಯಿಸುವುದು ಗಾಂಧಿ ಆಶ್ರಮದ ಮೌಲ್ಯಗಳನ್ನೇ ಭ್ರಷ್ಟಗೊಳಿಸಿದಂತೆ ಎಂದು ತುಷಾರ್ ಗಾಂಧಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು. ರಾಜ್ಯ ಸರ್ಕಾರದ ನವೀಕರಿಸಿದ ಯೋಜನೆಯಲ್ಲಿ "40 ಏಕರೂಪದ ಕಟ್ಟಡಗಳನ್ನು" ಸಂರಕ್ಷಿಸಲಾಗುವುದು ಎಂದು ಸರ್ಕಾರ ಹೇಳುತ್ತಿದ್ದರೂ, ಉಳಿದ 200 ಕಟ್ಟಡಗಳನ್ನು ಧ್ವಂಸಗೊಳಿಸಲಾಗುತ್ತದೆ ಅಥವಾ ಮರುನಿರ್ಮಿಸಲಾಗುತ್ತದೆ. ಇದು ಆಶ್ರಮದ ಮೂಲ ಸ್ವರೂಪವನ್ನು ಬದಲಿಸಲಿದೆ ಎಂದು ತುಷಾರ್ ಆರೋಪಿಸಿದ್ದರು. ಅಲ್ಲದೇ, ಆಶ್ರಮದ ಮರು ಅಭಿವೃದ್ಧಿ ಯೋಜನೆಯನ್ನು ರಾಷ್ಟ್ರೀಯ ಗಾಂಧಿ ಸ್ಮಾರಕ ನಿಧಿ(ಎನ್‌ಜಿಎಸ್‌ಎನ್)ಯ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಎಂದೂ ಪಿಐಎಲ್‌ನಲ್ಲಿ ತುಷಾರ್ ಗಾಂಧಿ ಕೋರಿದ್ದರು.
ಸಬರಮತಿ ಆಶ್ರಮ ಅಥವಾ ಗಾಂಧಿ ಆಶ್ರಮವನ್ನು ಮಹಾತ್ಮಾ ಗಾಂಧೀಜಿಯವರು 1917ರಲ್ಲಿ ಅಹಮದಾಬಾದ್‌ನಲ್ಲಿ ನಿರ್ಮಿಸಿದ್ದರು.