Tension in Dharavi| ಮಸೀದಿಯ ಅಕ್ರಮ ಭಾಗ ಉರುಳಿಸಲು ಸಮ್ಮತಿ

Update: 2024-09-21 13:12 GMT

ಧಾರಾವಿಯಲ್ಲಿ ಮಸೀದಿಯ ಅಕ್ರಮ ಭಾಗವನ್ನು ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಕೆಡವಲು ಮುಂದಾಗಿದ್ದರಿಂದ, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.ನೂರಾರು ಸ್ಥಳೀಯರು ಕೆಡವುವ ಪ್ರಯತ್ನವನ್ನು ವಿರೋಧಿಸಿ, ಗಲ್ಲಿಗೆ ಪ್ರವೇಶವನ್ನು ನಿರ್ಬಂಧಿಸಿದರು. ಆನಂತರ ಧಾರಾವಿ ಠಾಣೆಯ ಹೊರ ಭಾಗದ ರಸ್ತೆಯಲ್ಲಿ ಧರಣಿ ಕುಳಿತರು. 

ಪೊಲೀಸ್ ಠಾಣೆ ಹೊರಗೆ ಪ್ರತಿಭಟನೆ: ʻಜಿ ಉತ್ತರ ಆಡಳಿತಾತ್ಮಕ ವಾರ್ಡ್‌ನ ಬಿಎಂಸಿ ಅಧಿಕಾರಿಗಳ ತಂಡವು ಮೆಹಬೂಬ್ ಇ ಸುಭಾನಿ ಮಸೀದಿಯ ಅಕ್ರಮ ಭಾಗವನ್ನು ಕೆಡವಲು ಬೆಳಗ್ಗೆ 9 ರ ಸುಮಾರಿಗೆ ಮುಂದಾಯಿತು. ಸ್ಥಳಿಯರು ಸ್ಥಳದಲ್ಲಿ ಜಮಾಯಿಸಿ, ಮಸೀದಿ ಇರುವ ಗಲ್ಲಿಗೆ ಪ್ರವೇಶಿಸದಂತೆ ತಡೆದರು. ಆನಂತರ, ನೂರಾರು ಜನರು ಧಾರಾವಿ ಪೊಲೀಸ್ ಠಾಣೆ ಹೊರಗೆ ಜಮಾಯಿಸಿ, ರಸ್ತೆ ಮೇಲೆ ಕುಳಿತು ಪ್ರತಿಭಟಿಸಿದರು,ʼ ಎಂದು ಹೇಳಿದರು. 

ನೋಟಿಸ್ ನೀಡಲಾಗಿತ್ತು: ಅಕ್ರಮ ನಿರ್ಮಾಣವನ್ನು ತೆಗೆದುಹಾಕುವಂತೆ ಮಸೀದಿ ಅಧಿಕಾರಿಗಳಿಗೆ ನೋಟಿಸ್ ನೀಡಿತ್ತು. ಆನಂತರ, ಮಸೀದಿ ಟ್ರಸ್ಟಿಗಳು ಅಧಿಕಾರಿಗಳು ಮತ್ತು ಧಾರಾವಿ ಪೊಲೀಸರೊಂದಿಗೆ ಸಭೆ ನಡೆಸಿ, ಅಕ್ರಮ ಭಾಗವನ್ನು ತೆಗೆದುಹಾಕಲು ನಾಲ್ಕರಿಂದ ಐದು ದಿನಗಳ ಕಾಲಾವಕಾಶ ಕೋರಿದರು ಎಂದು ಅಧಿಕಾರಿ ಹೇಳಿದರು. 

ಬಿಎಂಸಿ ಉಪ ಆಯುಕ್ತರು ಮತ್ತು ಜಿ ಉತ್ತರ ವಿಭಾಗದ ಸಹಾಯಕ ಆಯುಕ್ತರಿಗೆ ಲಿಖಿತ ಮನವಿ ಸಲ್ಲಿಸಿದ್ದು, ಈ ಅವಧಿಯಲ್ಲಿ ನಿರ್ಮಾಣವನ್ನು ತಾವೇ ತೆಗೆದು ಹಾಕುವುದಾಗಿ ಟ್ರಸ್ಟಿಗಳು ತಿಳಿಸಿದ್ದಾರೆ. 

ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊನೆಯ ಪ್ರಯತ್ನ: ಘಟನೆ ಕುರಿತು ಪ್ರತಿಕ್ರಿಯಿಸಿದ ಶಿವಸೇನಾ (ಯುಬಿಟಿ) ಶಾಸಕ ಆದಿತ್ಯ ಠಾಕ್ರೆ, ʻಮುಂಬರುವ ವಿಧಾನಸಭೆ ಚುನಾವಣೆಗೆ ಮುನ್ನ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಕೋಮುದ್ವೇಷ ಸೃಷ್ಟಿಸಲು ಪ್ರಯತ್ನಿಸುತ್ತಿದೆ,ʼ ಎಂದು ಆರೋಪಿಸಿದರು.

ʻಧಾರಾವಿ ಮಸೀದಿ ವಿವಾದವು ಎರಡು ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸುವ ಪ್ರಯತ್ನ. ಧಾರಾವಿಯ ಜನರು ಪುನರಾ ಭಿವೃದ್ಧಿ ಯೋಜನೆಯ ವಿರುದ್ಧ ನಿಂತಿದ್ದರು,ʼ ಎಂದು ಹೇಳಿದರು.

ʻಒಂದೆಡೆ ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಹೇಳುತ್ತಾರೆ; ಮತ್ತೊಂದೆಡೆ ಅವರು ಬಾಂಗ್ಲಾದೇಶ ತಂಡದೊಂದಿಗೆ ಕ್ರಿಕೆಟ್‌ ಆಡುತ್ತಾರೆ,ʼ ಎಂದು ತಿಳಿಸಿದರು.

ತಿರುಪತಿ ಲಡ್ಡು ವಿಚಾರ: ʻಲಡ್ಡುಗಳನ್ನು ಅಂತಾರಾಷ್ಟ್ರೀಯ ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕು; ಗುಜರಾತ್‌ನಲ್ಲಿ ಅಲ್ಲ. ಇದೊಂದು ಬಹಳ ಸೂಕ್ಷ್ಮ ವಿಷಯ. ಈ ಕುರಿತು ಪರಸ್ಪರ ಟೀಕೆ ಮಾಡುತ್ತಿರುವ ಜಗನ್ ರೆಡ್ಡಿ ಮತ್ತು ಚಂದ್ರಬಾಬು ನಾಯ್ಡು ಇಬ್ಬರೂ ಬಿಜೆಪಿಯ ಮಿತ್ರರು. ಇದಕ್ಕೆ ಬಿಜೆಪಿಯವರು ಉತ್ತರ ನೀಡಬೇಕು,ʼ ಎಂದರು.

Tags:    

Similar News