ಕಮರ್ಷಿಯಲ್ ಪೈಲಟ್ ಆಗಲು ವಿಜ್ಞಾನೇತರ ವಿದ್ಯಾರ್ಥಿಗಳಿಗೂ ಅವಕಾಶ: ಡಿಜಿಸಿಎ ಹೊಸ ಶಿಫಾರಸು

ಡಿಜಿಸಿಎ ತನ್ನ ಶಿಫಾರಸನ್ನು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕಳಿಸಿದ್ದು, ಅನುಮೋದನೆ ಪಡೆದ ನಂತರ ಅಧಿಕೃತ ನಿಯಮಗಳು ಜಾರಿಗೆ ಬರಲಿದೆ. ತರಬೇತಿಗೆ ನಿಗದಿಪಡಿಸಿದ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಯಾವುದೇ ವಿಭಾಗದ ವಿದ್ಯಾರ್ಥಿಗಳು ಪೈಲಟ್‌ ಆಗಲು ಅರ್ಹತೆ ಪಡೆಯುತ್ತಾರೆ.;

Update: 2025-05-28 11:32 GMT
ಸಾಂದರ್ಭಿಕ ಚಿತ್ರ.

 ಕಮರ್ಷಿಯಲ್​ ಪೈಲಟ್ ಆಗಬೇಕೆಂಬ ಕನಸು ಕಾಣುವ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಕಲಾ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳೂ ಸಹ ಕಮರ್ಷಿಯಲ್​ ಪೈಲಟ್ ಪರವಾನಗಿಗೆ ತರಬೇತಿ ಪಡೆಯಬಹುದು ಎಂದು ಶಿಫಾರಸು ಮಾಡಿದೆ. ಈ ಹಿಂದೆ, ದ್ವಿತೀಯ ಪಿಯುಸಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯಗಳನ್ನು ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಮಾತ್ರ  ಪೈಲಟ್ ತರಬೇತಿ ಪಡೆಯಲು ಅವಕಾಶವಿತ್ತು. ಡಿಜಿಸಿಎಯ ಈ ಶಿಫಾರಸು ಸಾವಿರಾರು ವಿದ್ಯಾರ್ಥಿಗಳ ಪೈಲಟ್ ಆಗುವ ಕನಸನ್ನು ನನಸು ಮಾಡಲು ನೆರವಾಗಲಿದೆ.

ಡಿಜಿಸಿಎ ತನ್ನ ಶಿಫಾರಸನ್ನು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಿದ್ದು, ಸಚಿವಾಲಯದ ಅನುಮೋದನೆ ಪಡೆದ ನಂತರ ಅಧಿಕೃತ ನಿಯಮಗಳು ಜಾರಿಗೆ ಬರಲಿವೆ. ತರಬೇತಿಗೆ ನಿಗದಿಪಡಿಸಿದ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಯಾವುದೇ ವಿಭಾಗದ ವಿದ್ಯಾರ್ಥಿಗಳು ಪೈಲಟ್ ಆಗಲು ಅರ್ಹತೆ ಪಡೆಯುತ್ತಾರೆ. 1990ರ ದಶಕಕ್ಕಿಂತ ಮೊದಲು, ಪೈಲಟ್ ತರಬೇತಿಗೆ ಹತ್ತನೇ ತರಗತಿ ಉತ್ತೀರ್ಣರಾದವರು ಸಹ ಅರ್ಜಿ ಸಲ್ಲಿಸಬಹುದಾಗಿತ್ತು.

ಅರ್ಹತೆಗಳು 

ಪೈಲಟ್ ಪರವಾನಗಿಯನ್ನು ಪಡೆಯಲು ಅಭ್ಯರ್ಥಿಯು ಕನಿಷ್ಠ 16 ವರ್ಷ ವಯಸ್ಸಿನವರಾಗಿರಬೇಕು, ವೈದ್ಯಕೀಯ ಮತ್ತು ದೃಷ್ಟಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕನಿಷ್ಠ 40 ಗಂಟೆಗಳ ಹಾರಾಟದ ತರಬೇತಿಯನ್ನು ಪೂರ್ಣಗೊಳಿಸಬೇಕು. ಪೈಲಟ್‌ಗಳು ಜ್ಞಾನ ಪರೀಕ್ಷೆ, ಮೌಖಿಕ ಪರೀಕ್ಷೆ ಮತ್ತು ಪ್ರಾಯೋಗಿಕ ಹಾರಾಟ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಕಮರ್ಷಿಯಲ್​ ಪೈಲಟ್ ಪರವಾನಗಿ ನೀಡಲಾಗುತ್ತದೆ. 

Tags:    

Similar News