ದೆಹಲಿ ಕೋಚಿಂಗ್ ಕೇಂದ್ರ ದುರಂತ: ಮಾಲೀಕ ಸೇರಿ ಏಳು ಮಂದಿ ಬಂಧನ

Update: 2024-07-29 08:26 GMT

ದೆಹಲಿ ಕೋಚಿಂಗ್ ಕೇಂದ್ರ ದುರಂತಕ್ಕೆ ಸಂಬಂಧಿಸಿದಂತೆ, ನೆಲಮಾಳಿಗೆಯ ಮಾಲೀಕ ಸೇರಿದಂತೆ ಇನ್ನೂ ಐವರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಸೋಮವಾರ (ಜುಲೈ 29) ತಿಳಿಸಿದ್ದಾರೆ.

ನೆಲಮಾಳಿಗೆಯಲ್ಲಿದ್ದ ಕೋಚಿಂಗ್‌ ಕೇಂದ್ರದಲ್ಲಿ ನೀರು ತುಂಬಿಕೊಂಡು ಮೂವರು ಐಎಎಸ್ ಆಕಾಂಕ್ಷಿಗಳು ಮೃತಪಟ್ಟಿದ್ದರು. ಈವರೆಗೆ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ ಏಳಕ್ಕೆ ಏರಿದೆ. ಹಳೆಯ ರಾಜಿಂದರ್ ನಗರ ಪ್ರದೇಶದ ರಾವ್ಸ್‌ ಐಎಎಸ್ ಸ್ಟಡಿ ಸರ್ಕಲ್‌ನ ಮಾಲೀಕ ಮತ್ತು ಸಂಯೋಜಕನನ್ನು ಈಗಾಗಲೇ ಬಂಧಿಸಲಾಗಿದೆ. ನರಹತ್ಯೆ ಮತ್ತು ಇನ್ನಿತರ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ. 

ʻ ಕಟ್ಟಡದ ಪ್ರತಿಯೊಂದು ಮಹಡಿಯು ಬೇರೆ ಬೇರೆ ವ್ಯಕ್ತಿಯ ಒಡೆತನದಲ್ಲಿದೆ. ನೆಲಮಾಳಿಗೆಯ ಮಾಲೀಕ ಮತ್ತು ವಾಹನ ನುಗ್ಗಿಸಿ ಕಟ್ಟಡದ ಬಾಗಿಲಿಗೆ ಹಾನಿಯುಂಟು ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ,ʼ ಎಂದು ಪೊಲೀಸ್‌ ಉಪ ಕಮೀಷನರ್‌ (ಕೇಂದ್ರ) ಎಂ.ಹರ್ಷವರ್ಧನ್  ಹೇಳಿದರು. ಕಾರು ಮಳೆ ನೀರಿನಲ್ಲಿ ಚಲಿಸಿದ್ದರಿಂದ, ನೀರಿನ ಹರಿವು ಹೆಚ್ಚಿ ನೆಲಮಾಳಿಗೆಗೆ ನುಗ್ಗಿತು ಎಂದು ಪೊಲೀಸರು ತಿಳಿಸಿದ್ದಾರೆ. 

ʻನೆಲಮಾಳಿಗೆಯಲ್ಲಿನ ಗ್ರಂಥಾಲಯ ಕಾನೂನುಬಾಹಿರವಾಗಿ ನಡೆಯುತ್ತಿತ್ತು. ಬಯೋಮೆಟ್ರಿಕ್ ವ್ಯವಸ್ಥೆಯುಳ್ಳ ಒಂದು ಪ್ರವೇಶ ಮತ್ತು ನಿರ್ಗ ಮನ ಬಿಂದು ಮಾತ್ರ ಇದ್ದು, ಬಾಗಿಲು ಪ್ರವಾಹದಿಂದಾಗಿ ತೆರೆದುಕೊಳ್ಳಲಿಲ್ಲ. ಸುರಕ್ಷತಾ ಕ್ರಮ ಕೈಗೊಳ್ಳುವಲ್ಲಿ ಸಂಸ್ಥೆಯ ಮಾಲೀಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ,ʼ ಎಂದು ಎಂಸಿಡಿ ಅಧಿಕಾರಿಯೊಬ್ಬರು ತಿಳಿಸಿದರು.

Tags:    

Similar News