ಮಾನನಷ್ಟ: ಮೇಧಾ ಪಾಟ್ಕರ್‌ಗೆ 5 ತಿಂಗಳು ಸೆರೆವಾಸ

ಗುಜರಾತ್‌ನಲ್ಲಿ ಎನ್‌ಜಿಒ ಮುಖ್ಯಸ್ಥರಾಗಿದ್ದಾಗ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ದಾಖಲಿಸಿದ 23 ವರ್ಷಗಳ ಮಾನನಷ್ಟ ಮೊಕದ್ದಮೆಯಲ್ಲಿ ಮೇಧಾ ಪಾಟ್ಕರ್ ಅವರಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.

Update: 2024-07-01 13:14 GMT

ಗುಜರಾತಿನಲ್ಲಿ ಎನ್‌ಜಿಒ ಮುಖ್ಯಸ್ಥರಾಗಿದ್ದಾಗ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ದಾಖಲಿಸಿದ 23 ವರ್ಷಗಳ ಹಿಂದಿನ ಮಾನನಷ್ಟ ಮೊಕದ್ದಮೆಯಲ್ಲಿ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರಿಗೆ ಇಲ್ಲಿನ ನ್ಯಾಯಾಲಯ ಸೋಮ ವಾರ ಐದು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿದೆ. 

ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಘವ್ ಶರ್ಮಾ ಅವರು ಪಾಟ್ಕರ್ ಅವರಿಗೆ 10 ಲಕ್ಷ ರೂ. ದಂಡ ವಿಧಿಸಿದರು. 

ನ್ಯಾಯಾಲಯ ತನ್ನ ಮುಂದೆ ಇರುವ ಸಾಕ್ಷ್ಯಗಳನ್ನು ಹಾಗೂ ಪ್ರಕರಣ ಎರಡು ದಶಕಗಳಿಂದ ವಿಚಾರಣೆಯಲ್ಲಿದೆ ಎಂಬುದನ್ನು ಪರಿಗಣಿಸಿ, ಈ ಶಿಕ್ಷೆ ವಿಧಿಸಿದೆ. ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅನುವು ಮಾಡಿಕೊಡಲು ನ್ಯಾಯಾಲಯ ಶಿಕ್ಷೆಯನ್ನು ಒಂದು ತಿಂಗಳ ಕಾಲ ಅಮಾನತುಗೊಳಿಸಿತು. 

ಷರತ್ತಿನ ಮೇಲೆ ತಮ್ಮನ್ನು ಬಿಡುಗಡೆ ಮಾಡಬೇಕೆಂಬ ಪಾಟ್ಕರ್ ಅವರ ಮನವಿಯನ್ನು ತಿರಸ್ಕರಿಸಿದ ನ್ಯಾಯಾಧೀಶ, ʻವಾಸ್ತವಾಂಶಗಳು, ಹಾನಿ, ಆರೋಪಿಯ ವಯಸ್ಸು ಮತ್ತು ಅನಾರೋಗ್ಯವನ್ನು ಪರಿಗಣಿಸಿ, ನಾನು ತೀವ್ರವಾದ ಶಿಕ್ಷೆ ನೀಡಲು ಒಲವು ತೋರುತ್ತಿಲ್ಲ,ʼ ಎಂದು ಹೇಳಿದರು. ಈ ಅಪರಾಧಕ್ಕೆ ಗರಿಷ್ಠ ಎರಡು ವರ್ಷ ಸರಳ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು.

ಮೇ 24ರಂದು ಸಕ್ಸೇನಾ ಅವರನ್ನು ʻಹೇಡಿʼ ಎಂದು ಕರೆದಿದ್ದರು. ಪಾಟ್ಕರ್ ಅವರ ಹೇಳಿಕೆ ಮತ್ತು ಹವಾಲಾ ವಹಿವಾಟಿನಲ್ಲಿ ಸಕ್ಸೇನಾ ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವುದು ಮಾನಹಾನಿಕರ ಮಾತ್ರವಲ್ಲದೆ, ಅವರ ಬಗ್ಗೆ ನಕಾರಾತ್ಮಕ ಭಾವನೆ ಹುಟ್ಟುಹಾಕಿದೆ ಎಂದು ನ್ಯಾಯಾಲಯ ಗಮನಿಸಿತು.

ಸಕ್ಸೇನಾ ಅವರು ಗುಜರಾತ್‌ನ ಜನರು ಮತ್ತು ಅವರ ಸಂಪನ್ಮೂಲಗಳನ್ನು ವಿದೇಶಿ ಹಿತಾಸಕ್ತಿಗಳಿಗೆ ಅಡಮಾನವಿಟ್ಟಿದ್ದಾರೆ ಎಂಬ ಆರೋಪ ವು ಅವರ ಸಮಗ್ರತೆ ಮತ್ತು ಸಾರ್ವಜನಿಕ ಸೇವೆಯ ಮೇಲಿನ ನೇರ ದಾಳಿ ಎಂದು ನ್ಯಾಯಾಲಯ ಹೇಳಿದೆ. 

ವಿಚಾರಣೆ ಮೇ 30 ರಂದು ಪೂರ್ಣಗೊಂಡಿದ್ದು, ಶಿಕ್ಷೆಯ ಪ್ರಮಾಣವನ್ನು ಜೂನ್ 7 ರಂದು ಕಾಯ್ದಿರಿಸಲಾಯಿತು.

ತಮ್ಮ ಮತ್ತು ನರ್ಮದಾ ಬಚಾವೋ ಆಂದೋಲನದ ವಿರುದ್ಧ ಜಾಹೀರಾತು ಪ್ರಕಟಿಸಿದ್ದಕ್ಕಾಗಿ ಪಾಟ್ಕರ್ ಮತ್ತು ಸಕ್ಸೇನಾ 2000 ರಿಂದ ಕಾನೂನು ಹೋರಾಟದಲ್ಲಿ ತೊಡಗಿದ್ದರು.

ಆನಂತರ ಅಹಮದಾಬಾದ್ ಮೂಲದ 'ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟೀಸ್' ಹೆಸರಿನ ಎನ್‌ಜಿಒ ಮುಖ್ಯಸ್ಥರಾಗಿದ್ದ ಸಕ್ಸೇನಾ ಅವರು ಟಿವಿ ಚಾನೆಲ್‌ನಲ್ಲಿ ಹಾಗೂ ಪತ್ರಿಕೆಗಳಲ್ಲಿ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು 2001 ರಲ್ಲಿ ಪಾಟ್ಕರ್ ವಿರುದ್ಧ ಎರಡು ಪ್ರಕರಣ ದಾಖಲಿಸಿದ್ದರು.

Tags:    

Similar News