ಮಾನಹಾನಿ ಪ್ರಕರಣ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕೋರ್ಟ್ ನೋಟಿಸ್
ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸೋಮನಾಥ್ ಭಾರ್ತಿ ಅವರ ಪತ್ನಿ ಲಿಪಿಕಾ ಮಿತ್ರಾ ಹೂಡಿರುವ ದೂರಿನಲ್ಲಿ, ತಮ್ಮ ವೈವಾಹಿಕ ಸಂಬಂಧದ ಬಗ್ಗೆ ನಿರ್ಮಲಾ ಅವರು ಸಾರ್ವನಿಕವಾಗಿ ಮಾತನಾಡಿದ್ದಾರೆ ಹೇಳಲಾಗಿದೆ.;
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸೋಮನಾಥ್ ಭಾರ್ತಿ ಮತ್ತು ಪತ್ನಿ ಲಿಪಿಕಾ ಮಿತ್ರಾ ಹೂಡಿರುವ ಈ ದೂರಿನ ಆಧಾರದಲ್ಲಿ ನೋಟಿಸ್ ಜಾರಿಗೊಳಿಸಲಾಗಿದೆ.
2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮತ್ತು ಸೋಮನಾಥ್ ಭಾರ್ತಿ ನಡುವಿನ ವೈವಾಹಿಕ ಭಿನ್ನಾಭಿಪ್ರಾಯದ ಕುರಿತು ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಲಿಪಿಕಾ ಮಿತ್ರಾ ಅವರ ಪ್ರಕಾರ, ನಿರ್ಮಲಾ ಸೀತಾರಾಮನ್ ಅವರು ರಾಜಕೀಯ ಲಾಭಕ್ಕಾಗಿ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಮಾನಹಾನಿಕರವೂ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಈ ಪ್ರಕರಣವನ್ನು ದೆಹಲಿ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ಪರಾಸ್ ದಲಾಲ್ ಅವರು ವಿಚಾರಣೆ ನಡೆಸುತ್ತಿದ್ದಾರೆ. ಅಂತೆಯೇ ಮೇ 19ರಂದು ನೋಟಿಸ್ ನೀಡಲು ಸೂಚಿಸಿದ್ದಾರೆ.
"ಪ್ರಕರಣವು ವಿಚಾರಣಾ ಹಂತದಲ್ಲಿದ್ದು, ಬಿಎನ್‌ಎಸ್‌ಎಸ್‌ನ ಸೆಕ್ಷನ್ 223 ರ ಮೊದಲ ನಿಬಂಧನೆಯ ಅಡಿ ಪ್ರಸ್ತಾವಿತ ಆರೋಪಿಗೆ ತಮ್ಮ ವಾದವನ್ನು ಮಂಡಿಸಲು ಅವಕಾಶ ನೀಡಬೇಕಿದೆ. ಅದರಂತೆ, ಇಂದಿನಿಂದ 3 ದಿನಗಳಲ್ಲಿ ಪಿಎಫ್ ಪಾವತಿ ನಂತರ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಬೇಕು" ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಜೂನ್ 12 ರಂದು ನಡೆಯಲಿದೆ.
ನಿರ್ಮಲಾ ಸೀತಾರಾಮನ್ ಅವರು 2024ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೋಮನಾಥ್ ಭಾರ್ತಿ ಹಾಗೂ ಅವರ ತಮ್ಮ ವೈವಾಹಿಕ ಭಿನ್ನಾಭಿಪ್ರಾಯದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು. ಆ ಮೂಲಕ ನಮ್ಮ ಸಾರ್ವಜನಿಕ ವ್ಯಕ್ತಿತ್ವಕ್ಕೆ ಕಳಂಕ ಹಚ್ಚಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಪೂರಕವಾಗುವಂತೆ ನಡೆದುಕೊಂಡಿದ್ದರು ಎಂದು ಮಿತ್ರಾ ದೂರಿದ್ದಾರೆ.
ಎಲ್ಲ ವೈವಾಹಿಕ ಸಂಬಂಧಗಳಲ್ಲಿ ಉಂಟಾಗುವಂತೆ ಕೆಲವೊಂದು ಸಮಸ್ಯೆಗಳು ತಮ್ಮ ನಡುವೆಯೂ ಮೂಡಿದ್ದವು. ಅದನ್ನು ಅತಿಯಾಗಿ ವೈಭವೀಕರಿಸುವ ಮೂಲಕ ಮಾಧ್ಯಮ ವಿಚಾರಣೆಯ ಸ್ವರೂಪ ಪಡೆಯುವಂತೆ ಮಾಡಲಾಯಿತು. ಆದರೆ, ಹಿತೈಷಿಗಳು, ಸ್ನೇಹಿತರ ಒತ್ತಾಸೆಯಿಂದ ಸಮಸ್ಯೆ ಪರಿಹಾರವಾಗಿದ್ದು ಪತಿ ಸೋಮನಾಥ್ ಭಾರ್ತಿಯವರೊಂದಿಗೆ ಸಂತಸದಿಂದ ವೈವಾಹಿಕ ಜೀವನದಲ್ಲಿ ಮುಂದುವರಿದೆ. ಆದರೆ, ನಾವು ಜೊತೆಯಾದ ಈ ವಿಚಾರವನ್ನು ತಿಳಿಸದೆ ಮುಚ್ಚಿಟ್ಟು, ತಮ್ಮ ವೈವಾಹಿಕ ಭಿನ್ನಾಭಿಪ್ರಾಯದ ಬಗ್ಗೆ ಮಾತ್ರವೇ ಒತ್ತು ನೀಡಿ ನಿರ್ಮಲಾ ಸೀತಾರಾಮನ್ ಪ್ರಚಾರದ ವೇಳೆ ಮತ್ತು ಸುದ್ದಿಗೋಷ್ಠಿಗಳಲ್ಲಿ ಮಾತನಾಡಿದ್ದರು ಎಂದು ಮಿತ್ರಾ ದೂರಿದ್ದರು.