Palm Oil Price Hike : ತಾಳೆ ಎಣ್ಣೆ ಬೆಲೆ ಗಗನಕ್ಕೆ, ಸೋಪು, ಬಿಸ್ಕತ್ತು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೂ ಏರಿಕೆ
ಹಿಂದೂಸ್ತಾನ್ ಯುನಿಲೀವರ್ ಲಿಮಿಟೆಡ್ ಹಾಗು ವಿಪ್ರೋದಂತಹ ಪ್ರಮುಖ ಅಗತ್ಯ ವಸ್ತುಗಳ ತಯಾರಕರು ತಾಳೆ ಎಣ್ಣೆ ಬೆಲೆಗಳ ಏರಿಕೆಯ ಪರಿಣಾಮ ಸರಿದೂಗಿಸಲು ಸಾಬೂನು ಬೆಲೆಯನ್ನು ಸುಮಾರು 7-8 ಪ್ರತಿಶತದಷ್ಟು ಹೆಚ್ಚಿಸಿದ್ದಾರೆ.;
ಒಂದು ಕಾಲದಲ್ಲಿ 'ಬಡವರ ಮನೆಯ ಅಡುಗೆ ತೈಲ ಎಂದೇ ಖ್ಯಾತಿ ಪಡೆದಿದ್ದ ತಾಳೆ ಎಣ್ಣೆಯ ಬೆಲೆ ಏಕಾಏಕಿ ಏರಿಕೆಯಾಗಿದೆ. ಇದರ ಪರಿಣಾಮ ಇದೀಗ ಬಡವರ ಮನೆಗೆ ನಾನಾ ರೂಪದಲ್ಲಿ ತಟ್ಟಿದೆ. ತಾಳೆ ಎಣ್ಣೆ ಉದ್ಯಮವನ್ನೇ ನಂಬಿಕೊಂಡಿರುವ ಕೆಲವೊಂದು ಉತ್ಪನ್ನಗಳ ಬೆಲೆ ಸುಮಾರು ಶೇಕಡಾ 8ರಿಂದ 10 ಹೆಚ್ಚಳ ಕಂಡಿದೆ. ಪ್ರಮುಖವಾಗಿ ಸೋಪು, ಶಾಂಪೂ ಹಾಗೂ ಬಿಸ್ಕತ್ತುಗಳಂಥ ಅಗತ್ಯ ವಸ್ತುಗಳ ಬೆಲೆ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.
ಹಿಂದೂಸ್ತಾನ್ ಯುನಿಲೀವರ್ ಲಿಮಿಟೆಡ್ ಹಾಗೂ ವಿಪ್ರೋದಂತಹ ಪ್ರಮುಖ ಅಗತ್ಯ ವಸ್ತುಗಳ ತಯಾರಕರು ತಾಳೆ ಎಣ್ಣೆಯ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಈ ಪರಿಣಾಮವನ್ನು ಸರಿದೂಗಿಸಲು ಸಾಬೂನು ಸೇರಿದತೆ ತ್ವಚೆಯ ರಕ್ಷಣಾ ವಸ್ತುಗಳ ಬೆಲೆಯನ್ನು ಸುಮಾರು 7-8 ಪ್ರತಿಶತ ಹೆಚ್ಚಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕಚ್ಚಾ ತಾಳೆ ಎಣ್ಣೆಯ ಆಮದು ಪ್ರಮಾಣ ಇಳಿಕೆಯಾಗಿರುವ ಕಾರಣ ಅಗತ್ಯ ವಸ್ತುಗಳನ್ನು ತಯಾರಿಸುವ ಕಂಪನಿಗಳು ಕೊರತೆ ಎದುರಿಸುತ್ತಿವೆ. ಶೇಕಡಾ 30ರಷ್ಟು ಬೆಲೆ ಏರಿಕೆಯ ಪರಿಣಾಮ ಅನುಭವಿಸುತ್ತಿವೆ. ಹೀಗಾಗಿ ಇದರ ನೇರ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಕಂಪನಿಗಳು ನಿರ್ಧರಿಸಿವೆ. ಮೂರನೇ ತ್ರೈಮಾಸಿಕದಲ್ಲಿ ಬಿಸ್ಕತ್ತು, ಸೋಪುಗಳ ಬೆಲೆ ಏಕಾಏಕಿ ಶೇಕಡಾ 8ರಿಂದ 10ರಷ್ಟು ಏರಿಕೆ ಕಂಡಿದೆ.
ಎಷ್ಟು ಮತ್ತು ಯಾಕೆ ತಾಳೆ ಎಣ್ಣೆ ಬೆಲೆ ಏರಿಕೆ?
ಭಾರತ ಸರ್ಕಾರವು ತಾಳೆ ಎಣ್ಣೆಯ ಮೇಲಿನ ಆಮದು ಸುಂಕ ಏರಿಕೆ ಮಾಡಿರುವುದೇ ಇದಕ್ಕೆ ಮೂಲ ಕಾರಣ. 2023ರ ಸೆಪ್ಟೆಂಬರ್ನಲ್ಲಿ ಸರ್ಕಾರವು ಕಚ್ಚಾ ತಾಳೆ ಎಣ್ಣೆ ಬೆಲೆಯ ಆಮದು ಸುಂಕವನ್ನು ಶೇಕಡಾ 5.5ರಿಂದ 12.7ಕ್ಕೆ ಏರಿಸಿತ್ತ. ಇದೇ ವೇಳೆ ಸಂಸ್ಕರಿತ ತಾಳೆ ಎಣ್ಣೆಯ ಆಮದು ಸುಂಕ .75ರಿಂದ 35.75ಕ್ಕೆ ಹೆಚ್ಚಿಸಿತ್ತು.
ದೇಶೀಯವಾಗಿ ರೈತರನ್ನು ಬೆಂಬಲಿಸುವ ಸರ್ಕಾರದ ಪ್ರಯತ್ನದ ಭಾಗವಾಗಿ ಆಮದು ಸುಂಕ ಏರಿಕೆ ಮಾಡಲಾಗಿದೆ. ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನೀಡುವುದೇ ಅದರ ಉದ್ದೇಶ ಎಂದು ಸರ್ಕಾರ ಹೇಳಿತ್ತು. ಆಮದು ಸುಂಕದ ಹೆಚ್ಚಳವು ದೇಶೀಯ ತೈಲ ಬೆಲೆಗಳು ಮತ್ತು ಆಮದು ಪ್ರಮಾಣದ ಮೇಲೆ ಪರಿಣಾಮ ಬೀರಿದೆ. ಬ್ರಿಟಾನಿಯಾ, ನೆಸ್ಲೆ ಮತ್ತು ತಿಂಡಿ ಕಂಪನಿಗಳನ್ನು ಬಳಸುವ ಕಾರಣ ಬೆಲೆ ಏರಿಕೆ ಹೊರೆ ಅನಿವಾರ್ಯವಾಗಿತ್ತು.
ಇಂಡೋನೇಷ್ಯಾ ಹಾಗೂ ಮಲೇಷ್ಯಾ ಜಾಗತಿಕವಾಗಿ ತಾಳೆ ಎಣ್ಣೆಯ ಪ್ರಮುಖ ಪೂರೈಕೆದಾರ ದೇಶ. ಪರಿಸರಕ್ಕೆ ಹಾನಿಯಾಗುತ್ತಿದೆ ಎಂಬ ಕಾರಣಕ್ಕೆ ತಾಳೆ ಎಣ್ಣೆಯ ಉತ್ಪಾದನೆ ಕಡಿಮೆ ಮಾಡಲು ಆ ಎರಡೂ ದೇಶಗಳು ನಿರ್ಧರಿಸಿವೆ. ಇನ್ನು ಪ್ರಾಕೃತಿಕ ವಿಕೋಪದ ಕಾರಣಕ್ಕೆ ಬೆಳೆಯೂ ನಷ್ಟವಾಗಿದೆ. ಹೀಗಾಗಿ ತಾಳೆ ಎಣ್ಣೆ ಬೆಲೆಗಳು ಸೆಪ್ಟೆಂಬರ್ ಮಧ್ಯದಿಂದ ಸುಮಾರು ಶೇಕಡಾ 35-40 ಹೆಚ್ಚಾಗಿದೆ. 10 ಕೆ.ಜಿಗೆ 1,000 ರೂಪಾಯಿ ಇದ್ದದ್ದು ಮೂರನೇ ತ್ರೈಮಾಸಿಕದ ವೇಳೆಗೆ 1,370 ರೂಪಾಯಿಗೆ ಏರಿಕೆಯಾಗಿದೆ.
ಇಂಡೋನೇಷ್ಯಾ ಹಾಗೂ ಮಲೇಷ್ಯಾ ತಾಳೆ ಎಣ್ಣೆಯ ರಫ್ತು ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶವನ್ನೂ ಹೊಂದಿದೆ. ಹೀಗಾಗಿ ರಫ್ತು ಮೇಲಿನ ಸುಂಕವನ್ನೂ ಹೆಚ್ಚಿಸಿದೆ. ಜತೆಗೆ ಡೀಸೆಲ್ ಜತೆಗೆ ತಾಳೆ ಎಣ್ಣೆ ಮಿಶ್ರಣ ಮಾಡುವ ಮೂಲಕ ತಮ್ಮ ದೇಶಗಳ ಇಂಧನ ಬೇಡಿಕೆಯನ್ನು ಪೂರೈಸಲು ಮುಂದಾಗಿದೆ.
ಉತ್ಪನ್ನಗಳ ಬೆಲೆ ಎಷ್ಟು ಹೆಚ್ಚಳ?
ಲಕ್ಸ್ ಸೋಪ್ (5 ಸಾಬೂನುಗಳ ಪ್ಯಾಕ್) ಬೆಲೆ 145 ರೂ.ಗಳಿಂದ 155 ರೂ.ಗೆ ಮತ್ತು ಲೈಫ್ಬಾಯ್ (5 ಸಾಬೂನುಗಳ ಪ್ಯಾಕ್) ಬೆಲೆ 155 ರೂ.ಗಳಿಂದ 165 ರೂ.ಗೆ ಏರಿದೆ. ಅಂತೆಯೇ, ಪಿಯರ್ಸ್ (4 ಸಾಬೂನುಗಳ ಪ್ಯಾಕ್) ಬೆಲೆ ಹಿಂದಿನ 149 ರೂ.ಗಳಿಂದ 162 ರೂ.ಗೆ ಏರಿಸಲಾಗಿದೆ. ಇನ್ನೂ ಅನೇಕ ಅಗತ್ಯ ವಸ್ತುಗಳ ಬೆಲೆ ಇದೇ ಮಾದರಿಯಲ್ಲಿ ಏರಿಕೆ ಕಂಡಿದೆ.
ವಿಪ್ರೋ ಎಂಟರ್ ಪ್ರೈಸಸ್ನ ಕನ್ಸ್ಯೂಮರ್ ಕೇರ್ ಪ್ರಮುಖವಾಗಿ ಸಂತೂರ್ ಮತ್ತು ಚಂದ್ರಿಕಾ ಬ್ರಾಂಡ್ಗಳನ್ನು ಹೊಂದಿದೆ. ಇವುಗಳ ಬೆಲೆಯೂ ಏರಿಕೆಕಂಡಿದೆ. ಮಾರುಕಟ್ಟೆಯ ಅಗ್ರಗಣ್ಯ ಹಿಂದೂಸ್ತಾನ್ ಯುನಿಲಿವರ್ ತ್ವಚೆ ಶುದ್ಧೀಕರಣ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿದೆ. ಡವ್, ಲಕ್ಸ್, ಲೈಫ್ಬಾಯ್ ಲಿರಿಲ್, ಪಿಯರ್ಸ್, ರೆಕ್ಸೋನಾ ಮುಂತಾದ ಉತ್ಪನ್ನಗಳು ಈ ಕಂಪನಿಯದ್ದು.
ಇನ್ನು ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಟಿಸಿಪಿಎಲ್) , ಗೋದ್ರೆಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಜಿಸಿಪಿಎಲ್) ತಾಳೆ ಎಣ್ಣೆ ಮತ್ತು ಅದರ ಉತ್ಪನ್ನಗಳ ಬೆಲೆ ಏರಿಕೆಯನ್ನು ಒಪ್ಪಿಕೊಂಡಿವೆ. ಆದರೆ ವೆಚ್ಚ ಹೆಚ್ಚಳವನ್ನು ಗ್ರಾಹಕರಿಗೆ ಸದ್ಯಕ್ಕೆ ವರ್ಗಾಯಿಸದಿರಲು ನಿರ್ಧರಿಸಿದೆ.
ಪರಿಹಾರ ಏನು?
ತಾಳೆ ಎಣ್ಣೆಗೆ ಪರ್ಯಾಯ ಉತ್ಪನ್ನಗಳನ್ನು ಕಂಡುಕೊಳ್ಳುವುದೇ ಸೂಕ್ತ ಮಾರ್ಗ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಭಾರತ ಸರ್ಕಾರ ಆಮದು ಸುಂಕ ಮಾಡಿರುವುದು ಕೂಡ ಇದೇ ಕಾರಣಕ್ಕೆ. ದೇಶಿಯ ರೈತರು ಬೆಳೆಯುವ ಎಣ್ಣೆ ಕಾಳುಗಳಿಗೆ ಬೆಲೆ ಏರಿಕೆಯಾಗಲಿ ಎಂಬ ಉದ್ದೇಶವಿತ್ತು. ಆದರೆ, ಪರ್ಯಾಯ ತೈಲಗಳು ಕೂಡ ತಾಳೆ ಎಣ್ಣೆಗಿಂತಲೂ ಅಧಿಕ ದರ ಹೊಂದಿದೆ. ಪ್ರಮುಖವಾಗಿ ಸೂರ್ಯಕಾಂತಿ ಹಾಗೂ ಸಾಸಿವೆ, ಕಡಲೆ ಎಣ್ಣೆ ಹಾಗೂ ಕೊಬ್ಬರಿ ಎಣ್ಣೆಗಳು ತಾಳೆಗಿಂತಲೂ ಅಧಿಕ ಬೆಲೆ ಹೊಂದಿದೆ. ಹೀಗಾಗಿ ಬೆಲೆ ಏರಿಕೆಯ ಬಿಸಿಯನ್ನು ಗ್ರಾಹಕರು ಎದುರಿಸುವುದು ಅನಿವಾರ್ಯವಾಗಿದೆ.