ಗ್ರಾಮೀಣ ಗರ್ಭಿಣಿಯರ ಹೆರಿಗೆ ಸೌಲಭ್ಯ ಬಂದ್‌: 230 ಸಿಎಚ್‌ಸಿಗಳ ಸಾಮರ್ಥ್ಯ ಕುಗ್ಗಿಸಲು ಪ್ಲಾನ್?

ರಾಜ್ಯದಲ್ಲಿನ 230 ಸಿಎಚ್‌ಸಿ ಪ್ರಾಮುಖ್ಯತೆ ಕುಗ್ಗಿಸುವ ಹಿನ್ನೆಲೆಯಲ್ಲಿ ಸಣ್ಣ ಚಿಕಿತ್ಸಾಲಯಗಳನ್ನಾಗಿ ಪರಿವರ್ತಿಸಲು ಸರ್ಕಾರ ಮುಂದಾಗಿರುವುದು ಗ್ರಾಮೀಣ ಗರ್ಭಿಣಿಯರ ಪಾಲಿಗೆ ಮರಣಶಾಸನವಾಗಿ ಪರಿಣಮಿಸುವ ಆತಂಕ ಎದುರಾಗಿದೆ.

Update: 2025-12-24 15:11 GMT
Click the Play button to listen to article

ರಾಜ್ಯದ ಗ್ರಾಮೀಣ ಭಾಗದ ಜನರಿಗೆ 'ಆರೋಗ್ಯ ಭಾಗ್ಯ' ಕಲ್ಪಿಸಬೇಕಾದ ಸರ್ಕಾರವು ಈಗ ಒಂದು ವಿವಾದಾತ್ಮಕ ನಿರ್ಧಾರಕ್ಕೆ ಮುಂದಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಅಥವಾ ಕಡಿಮೆ ಹೆರಿಗೆ ಸೌಲಭ್ಯ ಇರುವ 230 ಸಮುದಾಯ ಆರೋಗ್ಯ ಕೇಂದ್ರಗಳ (ಸಿಎಚ್‌ಸಿ) ಪ್ರಾಮುಖ್ಯತೆ  ಕುಗ್ಗಿಸುವ ಅಥವಾ ಅವುಗಳನ್ನು ಕೇವಲ 'ನಮ್ಮ ಕ್ಲಿನಿಕ್' ಮಾದರಿಯ ಸಣ್ಣ ಚಿಕಿತ್ಸಾಲಯಗಳನ್ನಾಗಿ ಪರಿವರ್ತಿಸಲು ಹೊರಟಿರುವುದು ಗ್ರಾಮೀಣ ಗರ್ಭಿಣಿಯರ ಪಾಲಿಗೆ ಮರಣಶಾಸನವಾಗಿ ಪರಿಣಮಿಸುವ ಆತಂಕ ಎದುರಾಗಿದೆ. 

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಗಿರುವ ಹೆರಿಗೆಗಳ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ಸರ್ಕಾರ ಈ ಕ್ರಮವನ್ನು ಸಮರ್ಥಿಸಿಕೊಳ್ಳಬಹುದು. ಆದರೆ, ಇದು ಗ್ರಾಮೀಣ ಭಾರತದ ಆರೋಗ್ಯ ಹಕ್ಕನ್ನು ಕಸಿದುಕೊಳ್ಳುವ ಮತ್ತು ಸಾರ್ವಜನಿಕ ಶಿಕ್ಷಣದಂತೆ ಸಾರ್ವಜನಿಕ ಆರೋಗ್ಯವನ್ನೂ ಖಾಸಗೀಕರಣಕ್ಕೆ ದೂಡುವ ಹುನ್ನಾರದಂತೆ ಕಾಣುತ್ತಿದೆ ಎಂದು ಮೂಲಗಳು ಹೇಳಿವೆ. 

230 ಕೇಂದ್ರಗಳನ್ನು "ಕಡಿಮೆ ಕಾರ್ಯಕ್ಷಮತೆ ಹೊಂದಿರುವ ಸಿಎಚ್‌ಸಿಗಳು ಎಂದು ವರ್ಗೀಕರಿಸಲಾಗಿದೆ. ಇಲ್ಲಿ 'ಕಾರ್ಯಕ್ಷಮತೆ'ಯನ್ನು ಮಾಸಿಕ ಹೆರಿಗೆಗಳ ಸರಾಸರಿ ಸಂಖ್ಯೆಯ ಆಧಾರದ ಮೇಲೆ ಅಳೆಯಲಾಗಿದೆ. ಹಲವು ಕೇಂದ್ರಗಳಲ್ಲಿ ಮಾಸಿಕ ಹೆರಿಗೆಗಳ ಸಂಖ್ಯೆ ಶೂನ್ಯ ಇದೆ. ಸಿಎಚ್‌ಸಿಗಳಲ್ಲಿ ಗರಿಷ್ಠ ಮಾಸಿಕ ಹೆರಿಗೆ ಸಂಖ್ಯೆ 29 ಮಾತ್ರ ಇದೆ. ಸಮುದಾಯ ಆರೋಗ್ಯ ಕೇಂದ್ರದಂತಹ ಸೌಲಭ್ಯಕ್ಕೆ ಈ ಸಂಖ್ಯೆ ಅತ್ಯಂತ ಕಡಿಮೆ ಎಂದು ಪರಿಗಣಿಸಲಾಗುತ್ತದೆ. ಇದೇ ಕಾರಣವನ್ನು ಸರ್ಕಾರ ಮುಂದಿಟ್ಟುಕೊಂಡು ಇದೀಗ ಪರೋಕ್ಷವಾಗಿ ಮುಚ್ಚುವ ಹುನ್ನಾರ ನಡೆಸಿದೆ ಎಂಬ ಆರೋಪಗಳು ಕೇಳಿಬಂದಿವೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆಯು ಮೇಲ್ನೋಟಕ್ಕೆ 'ವೈಜ್ಞಾನಿಕ ಮರುಹಂಚಿಕೆ'ಯಂತೆ ಕಂಡರೂ, ಅದರ ಒಳಪುಟಗಳನ್ನು ತಿರುವಿ ಹಾಕಿದಾಗ ಗ್ರಾಮೀಣ ಆರೋಗ್ಯ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಆತಂಕಕಾರಿ ಲಕ್ಷಣಗಳು ಕಂಡುಬರುತ್ತಿವೆ. ಕಡಿಮೆ ರೋಗಿಗಳಿರುವ ಅಥವಾ ಕಡಿಮೆ ಹೆರಿಗೆಗಳಾಗುತ್ತಿರುವ ಸಮುದಾಯ ಆರೋಗ್ಯ ಕೇಂದ್ರಗಳಿಂದ ತಜ್ಞ ವೈದ್ಯರನ್ನು ಹಿಂಪಡೆಯುವ ಸರ್ಕಾರದ ನಿರ್ಧಾರವು, ಅಂತಿಮವಾಗಿ ಆ ಕೇಂದ್ರಗಳನ್ನು ಕೇವಲ ನಾಮಫಲಕದ 'ಕ್ಲಿನಿಕ್'ಗಳನ್ನಾಗಿ ಪರಿವರ್ತಿಸಿ, ಹಂತಹಂತವಾಗಿ ಮುಚ್ಚುವ ಹುನ್ನಾರವೇ ಎಂಬ ಪ್ರಶ್ನೆ ಈಗ ಮೂಡಿದೆ.

ರೋಗಿಗಳಿಗೆ ದಾಖಲಾಗಲು ಅವಕಾಶ ಇಲ್ಲ?

ಸಮುದಾಯ ಆರೋಗ್ಯ ಕೇಂದ್ರ ಎಂದರೆ ಅದು ಕೇವಲ ಜ್ವರಕ್ಕೆ ಮಾತ್ರೆ ನೀಡುವ ಸ್ಥಳವಲ್ಲ. ನಿಯಮದ ಪ್ರಕಾರ, ಪ್ರತಿ ಸಿಎಚ್‌ಸಿಯಲ್ಲಿ 30 ಹಾಸಿಗೆಗಳ ಸೌಲಭ್ಯ, ಶಸ್ತ್ರಚಿಕಿತ್ಸಾ ಕೊಠಡಿ, ಹೆರಿಗೆ ಕೊಠಡಿ, ಎಕ್ಸ್-ರೇ ಮತ್ತು ಪ್ರಯೋಗಾಲಯವಿರಬೇಕು. ಇಲ್ಲಿ ಸ್ತ್ರೀರೋಗ ತಜ್ಞರು, ಶಸ್ತ್ರಚಿಕಿತ್ಸಕರು ಮತ್ತು ಮಕ್ಕಳ ತಜ್ಞರಿರಬೇಕು.

ಸರ್ಕಾರವು ಈ ವ್ಯವಸ್ಥೆಯನ್ನು ಕುಗ್ಗಿಸಲು ಹೊರಟಿರುವುದು ಅತ್ಯಂತ ಅಪಾಯಕಾರಿ ನಿರ್ಧಾರ. ಸಿಎಚ್‌ಸಿಯಲ್ಲಿ ಆರೋಗ್ಯ ತಪಾಸಣೆ ಮಾಡುವ ಮೂಲಕ ಪರೋಕ್ಷವಾಗಿ ಕ್ಲಿನಿಕ್‌ನಂತೆ ಮಾಡಿದರೆ ಕೇವಲ ಹೊರರೋಗಿಗಳಿಗೆ ಮಾತ್ರ ಚಿಕಿತ್ಸೆ ಸಿಗುತ್ತದೆ. ಅಲ್ಲಿ ರೋಗಿಗಳು ದಾಖಲಾಗಲು ಅವಕಾಶವಿರುವುದಿಲ್ಲ, ಹೆರಿಗೆ ಮಾಡುವಂತಿಲ್ಲ ಮತ್ತು ತುರ್ತು ಶಸ್ತ್ರಚಿಕಿತ್ಸೆಗಳು ನಡೆಯುವುದಿಲ್ಲ. ಇದು ಹಳ್ಳಿಯ ಜನರಿಗೆ ಸುಸಜ್ಜಿತ ಚಿಕಿತ್ಸೆಯನ್ನು ನಿರಾಕರಿಸುವ ಸ್ಪಷ್ಟ ಕ್ರಮವಾಗಿದೆ.

ಹೆರಿಗೆ ಸಂಖ್ಯೆ ಕಡಿಮೆಯಾಗಲು ಹೊಣೆ ಯಾರು?

ಸರ್ಕಾರ ನೀಡಿರುವ ದತ್ತಾಂಶದ ಪ್ರಕಾರ, ಅನೇಕ ಕೇಂದ್ರಗಳಲ್ಲಿ ಹೆರಿಗೆಗಳ ಸಂಖ್ಯೆ ಶೂನ್ಯ ಅಥವಾ ಅತ್ಯಂತ ಕಡಿಮೆ ಇದೆ. ಆದರೆ, ಈ ವೈಫಲ್ಯಕ್ಕೆ ಅಲ್ಲಿನ ಜನಸಂಖ್ಯೆ ಕಾರಣವಲ್ಲ, ಬದಲಾಗಿ ಸರ್ಕಾರದ ಆಡಳಿತಾತ್ಮಕ ನಿರ್ಲಕ್ಷ್ಯ ಕಾರಣ. ಈ 230 ಕೇಂದ್ರಗಳಲ್ಲಿ ಎಷ್ಟು ಕೇಂದ್ರಗಳಲ್ಲಿ ಪೂರ್ಣಾವಧಿ ಸ್ತ್ರೀರೋಗ ತಜ್ಞರಿದ್ದಾರೆ? ಎಷ್ಟು ಕಡೆ ಅರಿವಳಿಕೆ ತಜ್ಞರಿದ್ದಾರೆ? ವೈದ್ಯರೇ ಇಲ್ಲದ ಮೇಲೆ ಜನರು ಅಲ್ಲಿಗೆ ಹೇಗೆ ತಾನೇ ಹೋಗುತ್ತಾರೆ? ಅನೇಕ ಕಡೆ ರಕ್ತನಿಧಿ ಸೌಲಭ್ಯವಿಲ್ಲ, ಸ್ಕ್ಯಾನಿಂಗ್ ಯಂತ್ರಗಳಿಲ್ಲ. ತುರ್ತು ಸಂದರ್ಭದಲ್ಲಿ ಪ್ರಾಣ ಉಳಿಸುವ ಗ್ಯಾರಂಟಿ ಇಲ್ಲದ ಮೇಲೆ ಜನರು ಸಾಲ ಮಾಡಿಯಾದರೂ ಖಾಸಗಿ ಆಸ್ಪತ್ರೆಗೆ ಹೋಗುವುದು ಅನಿವಾರ್ಯವಾಗಿದೆ. ವ್ಯವಸ್ಥೆಯನ್ನು ಸರಿಪಡಿಸುವ ಬದಲು, "ಜನರು ಬರುತ್ತಿಲ್ಲ" ಎಂಬ ನೆಪವೊಡ್ಡಿ ಆಸ್ಪತ್ರೆ ಮುಚ್ಚುವುದು ಸರಿಯಲ್ಲ ಕ್ರಮವಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿ ಆಕ್ರೋಶವ್ಯಕ್ತವಾಗಿದೆ. 

ಗ್ರಾಮೀಣ ಭಾಗದಲ್ಲಿ ಎದುರಾಗಲಿರುವ ಸವಾಲುಗಳು

ಈ ಆಸ್ಪತ್ರೆಗಳನ್ನು ಮುಚ್ಚುವುದರಿಂದ ಅಥವಾ ಕ್ಲಿನಿಕ್ ಮಾಡುವುದರಿಂದ ಹಳ್ಳಿಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಹತ್ತಿರದ ಸಿಎಚ್‌ಸಿ ಮುಚ್ಚಿದರೆ, ಗರ್ಭಿಣಿಯರು ಅಥವಾ ತುರ್ತು ಚಿಕಿತ್ಸೆ ಬೇಕಾದವರು 50 ರಿಂದ 80 ಕಿ.ಮೀ ದೂರದ ಜಿಲ್ಲಾ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಹಳ್ಳಿ ಪ್ರದೇಶಗಳಲ್ಲಿ ಸಾರಿಗೆ ಸೌಲಭ್ಯ ಕಡಿಮೆಯಿರುವಾಗ, ದಾರಿಯಲ್ಲಿಯೇ ಪ್ರಾಣ ಹೋಗುವ ಅಪಾಯ ಹೆಚ್ಚಾಗುತ್ತದೆ.

ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವುದಾಗಿ ಹೇಳುವ ಸರ್ಕಾರ, ಹೆರಿಗೆ ಆಸ್ಪತ್ರೆಗಳನ್ನೇ ಮುಚ್ಚುತ್ತಿರುವುದು ವಿಪರ್ಯಾಸ.

ಇದರಿಂದ ಗ್ರಾಮೀಣ ಭಾಗದಲ್ಲಿ ತಾಯಿ ಮರಣ ಪ್ರಮಾಣ ಮತ್ತೆ ಏರುವ ಸಾಧ್ಯತೆಯಿದೆ. ಸರ್ಕಾರಿ ಆಸ್ಪತ್ರೆಗಳಿಲ್ಲದ ಕಡೆ ಖಾಸಗಿ ನರ್ಸಿಂಗ್ ಹೋಂಗಳು ಅಣಬೆಗಳಂತೆ ಏಳುತ್ತವೆ. ಉಚಿತವಾಗಿ ಸಿಗಬೇಕಾದ ಚಿಕಿತ್ಸೆಗೆ ಬಡವರು ಸಾವಿರಾರು ರೂಪಾಯಿ ಸುರಿಯಬೇಕಾಗುತ್ತದೆ ಎಂದು ಹೇಳಲಾಗಿದೆ.

ತಪಾಸಣಾ ಕೇಂದ್ರಗಳಾಗಲಿವೆ ಸಿಎಚ್‌ಸಿ

ಸಮುದಾಯ ಆರೋಗ್ಯ ಕೇಂದ್ರಗಳನ್ನು ಮುಚ್ಚಿ ಅವುಗಳನ್ನು 'ಕ್ಲಿನಿಕ್'ಗಳನ್ನಾಗಿ ಪರಿವರ್ತಿಸಲು ಸರ್ಕಾರ ಮುಂದಾಗಿದೆ. ಅಲ್ಲದೇ, ಕೆಲವು ಆರೋಗ್ಯ ಸಮಸ್ಯೆಗಳನ್ನು ತಪಾಸಣೆ ಮಾಡಲಾಗುತ್ತದೆ. ತಜ್ಞ ವೈದ್ಯರು ಇರುವುದಿಲ್ಲ. ಅಲ್ಲಿ ದಾಖಲಾಗಲು ಹಾಸಿಗೆಗಳಿರುವುದಿಲ್ಲ, ಹೆರಿಗೆಯಾಗುವುದಿಲ್ಲ, ಶಸ್ತ್ರಚಿಕಿತ್ಸೆಯೂ ನಡೆಯುವುದಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ಹೇಳಿವೆ. 

ತ್ರಿವಳಿ ತಜ್ಞರ ವರ್ಗಾವಣೆ

ಒಂದು ಸಮುದಾಯ ಆರೋಗ್ಯ ಕೇಂದ್ರ ಅಸ್ತಿತ್ವದಲ್ಲಿರಬೇಕಾದರೆ ಅಲ್ಲಿ 'ತ್ರಿವಳಿ ತಜ್ಞರು' (ಸ್ತ್ರೀರೋಗ, ಅರಿವಳಿಕೆ ಮತ್ತು ಮಕ್ಕಳ ತಜ್ಞರು) ಇರಲೇಬೇಕು. ಸರ್ಕಾರದ ಹೊಸ ಸುತ್ತೋಲೆಯ ಪ್ರಕಾರ, ಹೆರಿಗೆ ಪ್ರಮಾಣ ಕಡಿಮೆ ಇರುವ ಕೇಂದ್ರಗಳಿಂದ ಈ ತಜ್ಞರನ್ನು 'ಹೆಚ್ಚಿನ ಒತ್ತಡವಿರುವ' ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಒಬ್ಬ ಶಸ್ತ್ರಚಿಕಿತ್ಸಕ ಮತ್ತು ಸ್ತ್ರೀರೋಗ ತಜ್ಞನನ್ನು ಒಂದು ಆಸ್ಪತ್ರೆಯಿಂದ ತೆಗೆದುಹಾಕುವುದೆಂದರೆ, ಆ ಆಸ್ಪತ್ರೆಯ 'ತುರ್ತು ಚಿಕಿತ್ಸಾ ಘಟಕ'ವನ್ನುಮುಚ್ಚಿದಂತೆ. ವೈದ್ಯರೇ ಇಲ್ಲದ ಮೇಲೆ ಜನರು ಅಲ್ಲಿಗೆ ಬರುವುದು ನಿಲ್ಲುತ್ತದೆ. ಮುಂದೆ ಒಂದು ವರ್ಷದ ನಂತರ, "ಇಲ್ಲಿ ರೋಗಿಗಳೇ ಬರುತ್ತಿಲ್ಲ" ಎಂಬ ಸುಳ್ಳು ಕಾರಣ ನೀಡಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಮುಚ್ಚಲು ಸರ್ಕಾರಕ್ಕೆ ಹಾದಿ ಸುಗಮವಾಗುತ್ತದೆ. ಇದು ಯೋಜಿತ 'ಡೌನ್‌ಗ್ರೇಡ್' ತಂತ್ರವಲ್ಲದೆ ಮತ್ತೇನು? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. 

ಖಾಸಗಿ ಆಸ್ಪತ್ರೆಗಳಿಗೆ ರತ್ನಗಂಬಳಿ?

ಸರ್ಕಾರದ ಈ ನಿರ್ಧಾರವು ಪರೋಕ್ಷವಾಗಿ ಖಾಸಗಿ ಆರೋಗ್ಯ ಸಂಸ್ಥೆಗಳಿಗೆ ಲಾಭ ಮಾಡಿಕೊಡುವಂತಿದೆ. ಸರ್ಕಾರಿ ವ್ಯವಸ್ಥೆಯನ್ನು ದುರ್ಬಲಗೊಳಿಸಿದಷ್ಟೂ ಜನರು ಖಾಸಗಿ ಆಸ್ಪತ್ರೆಗಳ ಕಡೆಗೆ ಮುಖ ಮಾಡುತ್ತಾರೆ. "ಕಡಿಮೆ ಕಾರ್ಯಕ್ಷಮತೆ" ಎಂಬ ಹಣೆಪಟ್ಟಿ ಹಚ್ಚಿ ಸರ್ಕಾರಿ ಸಂಸ್ಥೆಗಳನ್ನು ಮುಚ್ಚುವುದು ಕಾರ್ಪೊರೇಟ್ ಆರೋಗ್ಯ ಕ್ಷೇತ್ರಕ್ಕೆ ಹಾದಿ ಸುಗಮ ಮಾಡಿಕೊಡುವ ಪ್ರಕ್ರಿಯೆಯಾಗಿದೆ ಎನ್ನಲಾಗಿದೆ. ಈ 230 ಕೇಂದ್ರಗಳ ಪೈಕಿ ಅನೇಕವುಗಳನ್ನು ಇತ್ತೀಚೆಗಷ್ಟೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ "ಮೇಲ್ದರ್ಜೆಗೇರಿಸಿದ ಕೇಂದ್ರಗಳು" ಎಂದು ಘೋಷಿಸಲಾಗಿತ್ತು. ಕಟ್ಟಡ ನಿರ್ಮಾಣಕ್ಕೆ, ಉಪಕರಣಗಳ ಖರೀದಿಗೆ ಜನರ ತೆರಿಗೆ ಹಣವನ್ನು ಸುರಿಯಲಾಗಿತ್ತು. ಈಗ ಅವುಗಳನ್ನು ಮುಚ್ಚುವುದೆಂದರೆ ಅಥವಾ ಕ್ಲಿನಿಕ್ ಮಾಡುವುದೆಂದರೆ, ಈ ಹಿಂದೆ ಮಾಡಿದ ಹೂಡಿಕೆಯೆಲ್ಲವೂ ಬೂದಿಯಲ್ಲಿ ಸುರಿದ ಪನ್ನೀರಾಗುತ್ತದೆ. ಇದು ಸರ್ಕಾರದ ಯೋಜನಾಬದ್ಧ ವೈಫಲ್ಯವಲ್ಲದೆ ಮತ್ತೇನು? ಎಂಬ ಪ್ರಶ್ನೆ ಮೂಡಿದೆ.

ಬೆಳಗಾವಿಯ ಇಟಗಿ, ಬಾಗಲಕೋಟೆಯ ಸುತಗುಂಡರ ಅಥವಾ ಚಾಮರಾಜನಗರದ ಪಾಳ್ಯದಂತಹ ದೂರದ ಪ್ರದೇಶಗಳಿಂದ ವೈದ್ಯರನ್ನು ವರ್ಗಾಯಿಸಿದರೆ, ಆ ಭಾಗದ ಹತ್ತಾರು ಹಳ್ಳಿಗಳ ಜನರು ವೈದ್ಯಕೀಯ ಸೇವೆಗಾಗಿ ಅನಾಥರಾಗುತ್ತಾರೆ. ಕೇವಲ 'ಅಂಕಿ-ಅಂಶ' ಆಧಾರದ ಮೇಲೆ ವರ್ಗಾವಣೆ ಮಾಡುವುದರಿಂದ ಗ್ರಾಮೀಣ ಜನರ ಜೀವನದ ಹಕ್ಕನ್ನು ಕಡೆಗಣಿಸಲಾಗುತ್ತಿದೆ. ಸರ್ಕಾರ ಒಂದು ಕಡೆ "ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆ ಮಾಡುತ್ತೇವೆ" ಎನ್ನುತ್ತದೆ, ಮತ್ತೊಂದು ಕಡೆ ಗ್ರಾಮೀಣ ಭಾಗದಲ್ಲಿ ಹೆರಿಗೆ ಮಾಡಿಸುವ ತಜ್ಞ ವೈದ್ಯರನ್ನೇ ಅಲ್ಲಿಂದ ಓಡಿಸುತ್ತದೆ. ತ್ರಿವಳಿ ತಜ್ಞರನ್ನು ಒಂದೇ ಕಡೆ ಸೇರಿಸುವ ನೆಪದಲ್ಲಿ, ನೂರಾರು ಗ್ರಾಮೀಣ ಕೇಂದ್ರಗಳನ್ನು ತಜ್ಞರಿಲ್ಲದ ಬರಿದಾದ ಕಟ್ಟಡಗಳನ್ನಾಗಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಆರೋಗ್ಯ ಪ್ರತಿಯೊಬ್ಬರ ಹಕ್ಕು

ಸರ್ಕಾರ ನಡೆಯ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಜಯಪ್ರಕಾಶ ನಾರಾಯಣ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಂ.ಶಿವಕುಮಾರ್‌, ಸರ್ಕಾರ ವ್ಯಾಪಾರ ಮಾಡುತ್ತಿದೆಯೇ? ಅಥವಾ ಸಾರ್ವಜನಿಕರ ಸೇವೆ ಮಾಡುತ್ತಿದೆಯೇ? ಎನ್‌ಜಿಇಎಫ್‌ ಮುಚ್ಚಿದರು, ಮೈಸೂರು ಲ್ಯಾಂಪ್‌ ಮುಚ್ಚಿದರು. ಅದು ಉದ್ಯಮ. ಲಾಭ ಬೇಕು ಮುಚ್ಚಿದರು. ಆದರೆ ಆರೋಗ್ಯ ಪ್ರತಿಯೊಬ್ಬರ ಹಕ್ಕು. ಒಂದೇ ಒಂದು ಹೆರಿಗೆಯಾಗುತ್ತದೆ ಎಂಬ ಕಾರಣಕ್ಕಾಗಿ ಮುಚ್ಚುವುದು ಸರಿಯೇ? ಖಾಸಗಿ ಆಸ್ಪತ್ರೆಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಈ ಕೆಲಸ ಮಾಡುತ್ತಿದೆ ಎಂಬ ಅನುಮಾನ ಮೂಡಿದೆ ಎಂದು ಕಿಡಿಕಾರಿದರು. 

ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರಿಲ್ಲದಿದ್ದರೆ, ಜನರು ಅನಿವಾರ್ಯವಾಗಿ ನಗರಗಳಲ್ಲಿರುವ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾಗುತ್ತದೆ. ಸರ್ಕಾರದ ಈ ಪ್ರಕ್ರಿಯೆಯು ಪರೋಕ್ಷವಾಗಿ ಖಾಸಗಿ ನರ್ಸಿಂಗ್ ಹೋಮ್‌ಗಳಿಗೆ ಮತ್ತು ದೊಡ್ಡ ಕಾರ್ಪೊರೇಟ್ ಆಸ್ಪತ್ರೆಗಳಿಗೆ ರೋಗಿಗಳನ್ನು ಪೂರೈಕೆ ಮಾಡುವ ಏಜೆಂಟ್‌ನಂತೆ ಕೆಲಸ ಮಾಡುತ್ತಿದೆ ಎಂಬ ಸಂಶಯವನ್ನು ತಳ್ಳಿಹಾಕುವಂತಿಲ್ಲ ಎಂದರು. 

ಆಸ್ಪತ್ರೆಗಳ ಪ್ರಾಮುಖ್ಯತೆ ಕುಗ್ಗಿಸುವ ಅಥವಾ ವೈದ್ಯರನ್ನು ಕಿತ್ತುಕೊಳ್ಳುವ ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕು. "ಕಡಿಮೆ ಕಾರ್ಯಕ್ಷಮತೆ" ಇರುವ ಕೇಂದ್ರಗಳಿಗೆ ಹೆಚ್ಚಿನ ಅನುದಾನ, ಸಿಬ್ಬಂದಿ ಮತ್ತು ರಕ್ತನಿಧಿಯಂತಹ ಸೌಲಭ್ಯಗಳನ್ನು ನೀಡಿ ಅವುಗಳನ್ನು ಜನರ ನಂಬಿಕೆಯ ಕೇಂದ್ರಗಳನ್ನಾಗಿ ಮಾಡಬೇಕು. ಇಲ್ಲದಿದ್ದರೆ, ಕೇವಲ ಅಂಕಿ-ಅಂಶಗಳ ಆಧಾರದ ಮೇಲೆ ಬಡವರ ಆಸ್ಪತ್ರೆಗಳನ್ನು ಬಲಿ ನೀಡಿದರೆ, ಅದು ರಾಜ್ಯದ ಆರೋಗ್ಯ ಸೂಚ್ಯಂಕದ ಮೇಲೆ ಮಾರಕ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.

Tags:    

Similar News