ಭಾರತದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಪ್ರಮಾಣ ವಚನ ಸ್ವೀಕಾರ
ಆರೋಗ್ಯ ಕಾರಣಗಳಿಂದಾಗಿ ಜುಲೈ 21 ರಂದು ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಹುದ್ದೆಗೆ ಹಠಾತ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಚುನಾವಣೆ ನಡೆದಿತ್ತು.;
ಚಂದ್ರಪುರಂ ಪೊನ್ನುಸಾಮಿ ರಾಧಾಕೃಷ್ಣನ್ (ಸಿ.ಪಿ. ರಾಧಾಕೃಷ್ಣನ್) ಅವರು ಶುಕ್ರವಾರ, ಸೆಪ್ಟೆಂಬರ್ 12ರಂದು ಭಾರತದ 15ನೇ ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಕಿರು ಸಮಾರಂಭದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 67 ವರ್ಷದ ರಾಧಾಕೃಷ್ಣನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ದೇವರ ಹೆಸರಿನಲ್ಲಿ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ರಾಧಾಕೃಷ್ಣನ್, ಈ ವೇಳೆ ಕೆಂಪು ಕುರ್ತಾ ಧರಿಸಿದ್ದರು.
ಆರೋಗ್ಯ ಕಾರಣಗಳಿಂದಾಗಿ ಜುಲೈ 21 ರಂದು ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಹುದ್ದೆಗೆ ಹಠಾತ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಚುನಾವಣೆ ನಡೆದಿತ್ತು. ಸೆಪ್ಟೆಂಬರ್ 9 ರಂದು ನಡೆದ ಚುನಾವಣೆಯಲ್ಲಿ, ಎನ್‌ಡಿಎ ಅಭ್ಯರ್ಥಿಯಾಗಿದ್ದ ರಾಧಾಕೃಷ್ಣನ್ ಅವರು, ಜಂಟಿ ವಿರೋಧ ಪಕ್ಷದ ಅಭ್ಯರ್ಥಿ ಬಿ. ಸುದರ್ಶನ್ ರೆಡ್ಡಿ ಅವರನ್ನು 152 ಮತಗಳ ಅಂತರದಿಂದ ಸೋಲಿಸಿ ಜಯಗಳಿಸಿದ್ದರು. ರಾಧಾಕೃಷ್ಣನ್ ಅವರಿಗೆ 452 ಮತಗಳು ಲಭಿಸಿದರೆ, ರೆಡ್ಡಿ ಅವರಿಗೆ 300 ಮತಗಳು ಬಂದಿದ್ದವು.
ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿ
ಈ ಸಮಾರಂಭದಲ್ಲಿ ನಿರ್ಗಮಿತ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಭಾಗವಹಿಸಿದ್ದು ವಿಶೇಷವಾಗಿತ್ತು. ರಾಜೀನಾಮೆ ನಂತರ ಇದೇ ಮೊದಲ ಬಾರಿಗೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಮಾಜಿ ಉಪರಾಷ್ಟ್ರಪತಿಗಳಾದ ಹಮೀದ್ ಅನ್ಸಾರಿ ಮತ್ತು ವೆಂಕಯ್ಯ ನಾಯ್ಡು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸಿ.ಪಿ. ರಾಧಾಕೃಷ್ಣನ್ ಅವರ ಹಿನ್ನೆಲೆ
ತಮಿಳುನಾಡಿನ ತಿರುಪ್ಪೂರ್ ಮೂಲದವರಾದ ರಾಧಾಕೃಷ್ಣನ್, ಈ ಹುದ್ದೆಯನ್ನು ಅಲಂಕರಿಸುತ್ತಿರುವ ತಮಿಳುನಾಡಿನ ಮೂರನೇ ನಾಯಕರಾಗಿದ್ದಾರೆ. ಈ ಹಿಂದೆ ಅವರು ಜಾರ್ಖಂಡ್, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳ ರಾಜ್ಯಪಾಲರಾಗಿ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಕೊಯಮತ್ತೂರು ಕ್ಷೇತ್ರದಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು.