ಸಂವಿಧಾನ, ನೆಹರೂ, ಅದಾನಿ: 32 ನಿಮಿಷಗಳ ಚೊಚ್ಚಲ ಭಾಷಣದಲ್ಲೇ ಸರ್ಕಾರದ ವಿರುದ್ಧ ಗುಡುಗಿದ ಪ್ರಿಯಾಂಕ

ಸಂವಿಧಾನವನ್ನು ಬದಲಾಯಿಸುವ ಬಿಜೆಪಿಯ ಪ್ರಯತ್ನಗಳು, ಅದಾನಿಯ ಏಕಸ್ವಾಮ್ಯ, ಮಹಿಳೆಯರ ಮೇಲಿನ ಅಪರಾಧಗಳು ಮತ್ತು ಜಾತಿ ಜನಗಣತಿಯ ಬೇಡಿಕೆಯ ಬಗ್ಗೆ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಮಾತನಾಡಿದ್ದಾರೆ.

Update: 2024-12-13 15:23 GMT
ಪ್ರಿಯಾಂಕ ಗಾಂಧಿ

ವಯನಾಡ್​ನಿಂದ ಲೋಕಸಭೆಗೆ ಆಯ್ಕೆಯಾಗಿರುವ ಗಾಂಧಿ ಕುಟುಂಬದ ಕುಡಿ ಪ್ರಿಯಾಂಕ ಗಾಂಧಿ ಶುಕ್ರವಾರ (ಡಿಸೆಂಬರ್ 13) ತಮ್ಮ ಚೊಚ್ಚಲ ಸಂಸತ್ ಭಾಷಣದಲ್ಲೇ ಮೋದಿ ಸರ್ಕಾರದ ವಿರುದ್ಧ ನೇರಾನೇರಾ ವಾಗ್ದಾಳಿ ನಡೆಸಿದ್ದಾರೆ. ಪ್ರಮುಖವಾಗಿ ಅವರು ಸಂವಿಧಾನ, ನೆಹರೂ ಮತ್ತು ಅದಾನಿಯ ವಿಚಾರವನ್ನು ಎತ್ತಿಕೊಂಡು ಕೇಂದ್ರ ಸರ್ಕಾರದ ವಿರುದ್ದ 30 ನಿಮಿಷಗಳ ಕಾಲ ಮಾತನಾಡಿದ್ದಾರೆ. ಈ ಮೂಲಕ ಅವರು ತಮ್ಮ ಸಹೋದರ ರಾಹುಲ್ ಗಾಂಧಿಗೆ ಸಂಸತ್​ನಲ್ಲಿ ಭರ್ಜರಿ ಸಾಥ್ ಕೊಡುವ ಎಲ್ಲ ಲಕ್ಷಣ ತೋರಿದ್ದಾರೆ.


ಸಂವಿಧಾನವನ್ನು ಬದಲಾಯಿಸುವ ಬಿಜೆಪಿಯ ಪ್ರಯತ್ನಗಳು ಎಂದು ಹೇಳಿದ ವಯನಾಡ್ ಸಂಸದೆ, ಅದಾನಿ ಗ್ರೂಪ್​ನ ಏಕಸ್ವಾಮ್ಯದ ಸಮಸ್ಯೆ ಕಾಡುತ್ತಿದೆ ಎಂಬುದಾಗಿಯೂ ಹೇಳಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯಗಳು, ಸಂಭಾಲ್ ಘರ್ಷಣೆ ಮತ್ತು ಮಣಿಪುರದಲ್ಲಿ ಹಿಂಸಾಚಾರದ ಘಟನೆಗಳು ಮತ್ತು ರಾಷ್ಟ್ರವ್ಯಾಪಿ ಜಾತಿ ಜನಗಣತಿಯ ಬೇಡಿಕೆಯ ವಿಚಾರಗಳು ಲೋಕಸಭೆಯಲ್ಲಿ ಮಾರ್ದನಿಸುವಂತೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದು 'ಭಾರತ್ ಕಾ ಸಂವಿಧಾನ್' ಅಲ್ಲ 'ಸಂಘ ಕಾ ವಿಧಾನ್' ಎಂದು ಅರ್ಥವಾಗಿಲ್ಲ ಎಂದು ತೋರುತ್ತದೆ ಎಂದು ಪ್ರಿಯಾಂಕಾ ಗಾಂಧಿ ಕುಟುಕಿದರು. ಲೋಕಸಭಾ ಚುನಾವಣಾ ಫಲಿತಾಂಶಗಳು ಈ ರೀತಿ ಬರದೇ ಹೋಗಿದ್ದರೆ ಬಿಜೆಪಿ ಸಂವಿಧಾನ ಬದಲಾಯಿಸಲು ಪ್ರಾರಂಭಿಸುತ್ತಿತ್ತು ಎಂದು ಆರೋಪಿಸಿದರು.

ನೆಹರೂ ಜವಾಬ್ದಾರರೇ?"

ಹಿಂದಿಯಲ್ಲಿ ತಮ್ಮ 32 ನಿಮಿಷಗಳ ಭಾಷಣದಲ್ಲಿ, ಪ್ರಿಯಾಂಕಾ ಸಂವಿಧಾನವನ್ನು ನ್ಯಾಯ, ಏಕತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣಾ ಕವಚ ಎಂದು ಹೇಳಿದರು. ಕಳೆದ 10 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಈ ರಕ್ಷಣೆಯನ್ನು ಮುರಿಯಲು ಯತ್ನಿಸಿದೆ ಎಂದು ಆರೋಪಿಸಿದರು.

ಕೇಂದ್ರ ಸಚಿವ ರಾಜನಾಥ್ ಸಿಂಗ್ ವಿರುದ್ಧವೂ ವಾಗ್ದಾಳಿ ನಡೆಸಿದ ಪ್ರಿಯಾಂಕ, ಆಡಳಿತ ಪಕ್ಷದಲ್ಲಿ ಕುಳಿತವರು ಬರೇ ಗತಕಾಲದ ಬಗ್ಗೆ ಮಾತನಾಡುತ್ತಾರೆ. ಅವರು ಈಗ ಏನು ಮಾಡುತ್ತಿದ್ದಾರೆಂದು ದೇಶಕ್ಕೆ ತಿಳಿಸುವುದು ಯಾವಾಗ ಎಂದು ಪ್ರಶ್ನಿಸಿದರು.

"ಹಾಗಾದರೆ ನಿಮ್ಮ ಜವಾಬ್ದಾರಿಗಳೇನು? ಎಲ್ಲವೂ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರದ್ದೇ?" ಎಂದ ಪ್ರಿಯಾಂಕ, ಭಾರತದ ಮೊದಲ ಪ್ರಧಾನಿಯನ್ನು ಪದೇ ಪದೇ ಟೀಕಿಸುತ್ತಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನೆಹರೂ ಕೊಡುಗೆ ಸ್ಮರಣೆ

"ನಮ್ಮ ಸಂವಿಧಾನವು ಆರ್ಥಿಕ ನ್ಯಾಯಕ್ಕೆ ಅಡಿಪಾಯ ಹಾಕಿದೆ. ರೈತರು, ಬಡವರು ಮತ್ತು ನಿರ್ಗತಿಕರಿಗೆ ಭೂಮಿಯನ್ನು ಕೊಟ್ಟಿದೆ. ಆದರೆ ಎಲ್ಲದಕ್ಖೂ ನೆಹರೂ ಹೆಸರನ್ನೇ ಹೇಳಲಾಗುತ್ತಿದೆ. ಆದರೆ ಜವಾಹರಲಾಲ್ ನೆಹರು ಅವರು ಎಚ್ಎಎಲ್, ಬಿಎಚ್ಇಎಲ್, ಎಸ್ಎಐಎಲ್, ಗೇಲ್, ಒಎನ್​ಜಿಸಿ, ಎನ್​ಟಿಪಿಸಿ, ಆರ್​ಎ ಮುಂತಾದ ಅನೇಕ ಸಾರ್ವನಿಕ ಸಂಸ್ಥೆಗಳನ್ನು ಹುಟ್ಟುಹಾಕಿದ್ದರು. ಅವರ ಹೆಸರನ್ನು ಪುಸ್ತಕಗಳಿಂದ ಅಳಿಸಿಹಾಕಬಹುದು. ಆದರೆ., ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರವನ್ನು ಈ ದೇಶದಿಂದ ಅಳಿಸಲು ಸಾಧ್ಯವಿಲ್ಲ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಯಾಗಿರುವ ಪ್ರಿಯಾಂಕ ಹೇಳಿದರು.

ಪಾಠ ಕಲಿಯಿರಿ ಮತ್ತು ಕ್ಷಮೆಯಾಚಿಸಿ

ತುರ್ತು ಪರಿಸ್ಥಿತಿಯ ಬಗ್ಗೆ ಟೀಕೆಗಳನ್ನು ಮಾಡುತ್ತಿರುವುದನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕ, , ಬಿಜೆಪಿ ಅದರಿಂದ ಕಲಿಯಬೇಕು ಮತ್ತು ತನ್ನ ತಪ್ಪುಗಳಿಗೆ ಕ್ಷಮೆಯಾಚಿಸಬೇಕು ಎಂದು ಹೇಳಿದರು..

''ನೀವು ರಾಜಕೀಯ ನ್ಯಾಯದ ಬಗ್ಗೆ ಮಾತನಾಡುತ್ತೀರಿ. ಆದರೆ, ಹಣದ ಬಲದ ಮೇಲೆ ಸರ್ಕಾರಗಳನ್ನು ಕೆಡವುತ್ತೀರಿ. ಮಹಾರಾಷ್ಟ್ರ ಮತ್ತು ಹಿಮಾಚಲ ಪ್ರದೇಶ ಇದಕ್ಕೆ ಇನ್ನೊಂದು ಉದಾಹರಣೆ. ಹಾಗಾದರೆ ಸಂವಿಧಾನವು ಈ ರಾಜ್ಯಗಳಿಗೆ ಅನ್ವಯಿಸುವುದಿಲ್ಲವೇ" ಎಂದು ಅವರು ಪ್ರಿಯಾಂಕ ಪ್ರಶ್ನಿಸಿದರು. .

ರಾಜ ವೇಷ ಬದಲಾಯಿತ್ತಾನೆ, ಜನರ್ ಬಳಿಗೆ ಹೋಗುವುದಿಲ್ಲ!

ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಸುವಂತೆ ಬಿಜೆಪಿಗೆ ಸವಾಲು ಹಾಕಿದ ಪ್ರಿಯಾಂಕಾ, ಇದು ವಾಸ್ತವವನ್ನು ಬಹಿರಂಗಪಡಿಸುವುದು ಖಚಿತ ಎಂದು ಹೇಳಿದರು.

ಈ ವೇಳೆ ಪ್ರಧಾನಿ ಮೋದಿಯನ್ನು ಕಟುವಾಗಿ ಟೀಕಿಸಿದ ಕಾಂಗ್ರೆಸ್ ನಾಯಕಿ, "ರಾಜಾಡಳಿತದ ಅವಧಿಯಲ್ಲಿ ರಾಜನು ತನ್ನ ಆಡಳಿತದ ಕುರಿತ ಅಭಿಪ್ರಾಯ ಕೇಳಲು ಮಾರುವೇಷದಲ್ಲಿ ಜನರ ನಡುವೆ ಹೋಗುತ್ತಿದ್ದ ಕಥೆ ಕೇಳಿದ್ದೇವೆ. ಇಂದಿನ ರಾಜ ತನ್ನ ವೇಷ ಬದಲಾಯಿಸುವುದನ್ನು ಇಷ್ಟಪಡುತ್ತಾರೆ. ಆದರೆ ಸಾರ್ವಜನಿಕರ ನಡುವೆ ಹೋಗಲು ಅಥವಾ ಟೀಕೆಗಳನ್ನು ಕೇಳಲು ಅವರಿಗೆ ಧೈರ್ಯವಿಲ್ಲ" ಎಂದು ಅವರು ಪರೋಕ್ಷವಾಗಿ ಕುಟುಕಿದರು.

ಬಿಜೆಪಿಯ ವಿಭಜಕ ರಾಜಕೀಯದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಂವಿಧಾನವು ಏಕತೆಯ ರಕ್ಷಣಾ ಕವಚ ನೀಡಿದ ಸ್ಥಳದಲ್ಲಿ ಅನುಮಾನ ಮತ್ತು ದ್ವೇಷದ ಬೀಜಗಳನ್ನು ಬಿತ್ತಲಾಗುತ್ತಿದೆ, "ಏಕತೆಯ ಕವಚ ಮುರಿಯಲಾಗುತ್ತಿದೆ. ಆದರೆ ಸಂಭಾಲ್, ಹತ್ರಾಸ್ ಮತ್ತು ಮಣಿಪುರದಿಂದ ನ್ಯಾಯಕ್ಕಾಗಿ ಕೂಗು ಬಂದಾಗ ಆತಂಕವೇ ಆಗುವುದಿಲ್ಲ' ಎಂದು ಹೇಳಿದರು.

ಬಿಜೆಪಿ ಸಂವಿಧಾನವನ್ನು ಬದಲಾಯಿಸುತ್ತಿತ್ತು

ಖಾಸಗೀಕರಣದ ಮೂಲಕ ಮೀಸಲಾತಿ ನೀತಿ ದುರ್ಬಲಗೊಳಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಪ್ರಿಯಾಂಕ ಆರೋಪಿಸಿದರು. "ಲೋಕಸಭಾ ಚುನಾವಣಾ ಫಲಿತಾಂಶಗಳು ಈ ರೀತಿ ಬರದೇ ಹೋಗಿದ್ದರೆ, ಸರ್ಕಾರವು ಸಂವಿಧಾನ ಬದಲಾಯಿಸುವ ಕೆಲಸ ಈಗಾಗಲೇ ಪ್ರಾರಂಭಿಸುತ್ತಿತ್ತು" ಎಂದು ಪ್ರಿಯಾಂಕಾ ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​​ಡಿಎ 293 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 272 ಸರಳ ಬಹುಮತದ ಪೈಕಿ 240 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದಿದ್ದು, 2019 ಫಲಿತಾಂಶದಿಂದ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ.

ಜಾತಿ ಗಣತಿ ಕುರಿತು

ಜಾತಿ ಗಣತಿಗೆ ಜನರು ಒತ್ತಾಯ ಆರಂಭಿಸಿದ್ದಾರೆ. ಈ ಚುನಾವಣಾ ಫಲಿತಾಂಶಗಳಿಂದಾಗಿ ಆಡಳಿತ ಪಕ್ಷವೂ ಅದರ ಬಗ್ಗೆ ಮಾತನಾಡುತ್ತಿದೆ ಎಂದು ಪ್ರಿಯಾಂಕ ಹೇಳಿದರು.

"ಜಾತಿ ಜನಗಣತಿಯ ಬಗ್ಗೆ ನರೇಂದ್ರ ಮೋದಿಯವರೂ ಗಂಭೀರವಾಗಿದ್ದಾರೆ. ವಿರೋಧ ಪಕ್ಷಗಳು ಚುನಾವಣೆಯಲ್ಲಿ ಜಾತಿ ಜನಗಣತಿಯ ಬಗ್ಗೆ ಮಾತನಾಡುತ್ತಿದ್ದಾಗ ನಿಮ್ಮ ಎಮ್ಮೆ ಮತ್ತು ಮಂಗಳಸೂತ್ರವನ್ನು ನಾವು ಕದಿಯುತ್ತೇವೆ ಎಂದು ನರೇಂದ್ರ ಮೋದಿ ಆರೋಪಿಸುತ್ತಿದ್ದರು ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.

ಅದಾನಿಗೆ ಎಲ್ಲವೂ ಎಂದ ಪ್ರಿಯಾಂಕ 

ಬಿಲಿಯನೇರ್ ಗೌತಮ್ ಅದಾನಿ ಅವರನ್ನು ಉಲ್ಲೇಖಿಸಿದ ಅವರು, ಒಬ್ಬ ವ್ಯಕ್ತಿಯನ್ನು ಉಳಿಸಲು ದೇಶದ ಜನರನ್ನು ಹೇಗೆ ನಿರ್ಲಕ್ಷಿಸಲಾಗುತ್ತಿದೆ ಎಂಬುದನ್ನು ದೇಶ ನೋಡುತ್ತಿದೆ ಎಂದು ಹೇಳಿದರು.

"ಎಲ್ಲಾ ವ್ಯವಹಾರ, ಎಲ್ಲಾ ಸಂಪನ್ಮೂಲಗಳು, ಎಲ್ಲಾ ಸಂಪತ್ತು, ಎಲ್ಲಾ ಅವಕಾಶಗಳನ್ನು ಒಬ್ಬ ವ್ಯಕ್ತಿಗೆ ಹಸ್ತಾಂತರಿಸಲಾಗುತ್ತಿದೆ. ದೇಶದ ಬಂದರುಗಳು, ವಿಮಾನ ನಿಲ್ದಾಣಗಳು, ರಸ್ತೆಗಳು, ರೈಲ್ವೆ ಮತ್ತು ಸರ್ಕಾರಿ ಕಂಪನಿಗಳನ್ನು ಕೇವಲ ಒಬ್ಬ ವ್ಯಕ್ತಿಗೆ ನೀಡಲಾಗುತ್ತಿದೆ. ನಮ್ಮಲ್ಲಿ ಏನೂ ಇಲ್ಲದಿದ್ದರೂ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎಂಬ ನಂಬಿಕೆ ಜನರ ಮನಸ್ಸಿನಲ್ಲಿ ಯಾವಾಗಲೂ ಇತ್ತು. ಆದರೆ ಇಂದು, ಸರ್ಕಾರವು ಅದಾನಿಯ ಲಾಭಕ್ಕಾಗಿ ಮಾತ್ರ ಕೆಲಸ ಮಾಡುತ್ತಿದೆ ಎಂಬ ಗ್ರಹಿಕೆ ಸಾಮಾನ್ಯ ಜನರಲ್ಲಿ ರೂಪುಗೊಳ್ಳುತ್ತಿದೆ" ಎಂದು ಅವರು ಹೇಳಿದರು.

ದೇಶದಲ್ಲಿ ಅಸಮಾನತೆ ವೇಗವಾಗಿ ಹೆಚ್ಚುತ್ತಿದೆ. ಬಡವರು ಬಡವರಾಗುತ್ತಿದ್ದಾರೆ ಮತ್ತು ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ಹೇಳಿದರು.

ಬ್ರಿಟಿಷ್ ಆಡಳಿತಕ್ಕೆ ಹೋಲಿಕೆ

ಈ ಸರ್ಕಾರವು ಆರ್ಥಿಕ ನ್ಯಾಯ ರಕ್ಷಣೆಯ ಗುರಾಣಿಯನ್ನು ಮುರಿದಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದರು. ಬ್ರಿಟಿಷ್ ಆಳ್ವಿಕೆಯಲ್ಲಿ ಇದ್ದಂತೆ ದೇಶದಲ್ಲಿ ಭಯದ ವಾತಾವರಣವಿದೆ ಎಂದು ಅವರು ಆರೋಪಿಸಿದರು.

"ಗಾಂಧೀಜಿಯವರ ಸಿದ್ಧಾಂತವನ್ನು ಹೊಂದಿದ್ದ ಜನರು ಈ ಬದಿಯಲ್ಲಿ ಕುಳಿತು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರೆ, ಇನ್ನೊಂದು ಸಿದ್ಧಾಂತ ಹೊಂದಿದ್ದ ಜನರು ಬ್ರಿಟಿಷರೊಂದಿಗೆ ಶಾಮೀಲಾಗಿದ್ದರು. ಭಯಕ್ಕೂ ತನ್ನದೇ ಆದ ಸ್ವಭಾವವಿದೆ. ಭಯವನ್ನು ಹರಡುವವರು ಸ್ವತಃ ಭಯಕ್ಕೆ ಬಲಿಯಾಗುತ್ತಾರೆ. ಇದು ಪ್ರಕೃತಿಯ ನಿಯಮ" ಎಂದು ಪ್ರಿಯಾಂಕ ಹೇಳಿದರು.

, ಭಯವನ್ನು ಹರಡುವವರು ಸ್ವತಃ ಭಯದಿಂದ ಬದುಕಲು ಪ್ರಾರಂಭಿಸಿದ್ದಾರೆ. ಅವರು ಚರ್ಚೆಗೆ ಹೆದರುತ್ತಾರೆ, ಟೀಕೆಗಳಿಗೆ ಹೆದರುತ್ತಾರೆ" ಎಂದು ಅವರು ಹೇಳಿದರು.

ಈಗ ಅಧಿಕಾರದಲ್ಲಿರುವವರು 75 ವರ್ಷಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ಅಷ್ಟು ವರ್ಷಗಳಲ್ಲಿ ದೇಶದ ಜನರು ಬಹಿರಂಗವಾಗಿ ಟೀಕಿಸಿದರು, ನಿರ್ಭೀತಿಯಿಂದ ಪ್ರತಿಭಟನೆಗಳನ್ನು ನಡೆಸಿದರು ಮತ್ತು ನಾಯಕರಿಂದ ಉತ್ತರಗಳನ್ನು ಕೋರಿದ್ದರು ಪ್ರಿಯಾಂಕಾ ಹೇಳಿದರು .

ಇಂದು ಜನರು ಸತ್ಯವನ್ನು ಮಾತನಾಡಲು ಹೆದರುತ್ತಿದ್ದಾರೆ. ಪತ್ರಕರ್ತನಾಗಿರಲಿ, ವಿರೋಧ ಪಕ್ಷದ ನಾಯಕನಾಗಿರಲಿ ಅಥವಾ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿರಲಿ ಎಲ್ಲರ ಬಾಯಿ ಮುಚ್ಚಿಸಲಾಗುತ್ತದೆ. ವಿರೋಧ ಪಕ್ಷದ ನಾಯಕರನ್ನು ಇಡಿ, ಸಿಬಿಐ, ಐಟಿ ತನಿಖೆ ನಡೆಸಿ ಸುಳ್ಳು ಆರೋಪಗಳನ್ನು ಮಾಡಿ ಜೈಲಿಗೆ ಕಳುಹಿಸಲಾಗುತ್ತಿದೆ ಎಂದು ಅವರು ಹೇಳಿದರು.

ದೇಶವು ಎಂದಿಗೂ ಹೇಡಿಗಳ ಕೈಯಲ್ಲಿ ದೀರ್ಘಕಾಲ ಉಳಿದಿಲ್ಲ ಎಂದು ಹೇಳಿದ ಪ್ರಿಯಾಂಕ, ದೇಶವು ಏಳುತ್ತದೆ, ಹೋರಾಡುತ್ತದೆ ಮತ್ತು ನ್ಯಾಯಕ್ಕಾಗಿ ಶ್ರಮಿಸುತ್ತದೆ ಎಂದು ತಮ್ಮ ಮಾತನ್ನು ಕೊನೆಗೊಳಿಸಿದರು.  

Tags:    

Similar News