ಸಂವಿಧಾನ ಪೀಠದ ತೀರ್ಪು ಎಲ್ಲ ಪೀಠಗಳಿಗೂ ಅನ್ವಯ: ಸುಪ್ರೀಂ ಕೋರ್ಟ್

ಹರಿಯಾಣ ಗೋಮಾಳ ಭೂಮಿ (ನಿಯಂತ್ರಣ) ಕಾಯ್ದೆ 1961ರ ಸೆಕ್ಷನ್ 2 (ಜಿ), ಉಪ ವಿಭಾಗ 6 ರ ಕಾನೂನುಬದ್ಧತೆಯನ್ನು ಪರಿಶೀಲಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಪೂರ್ಣ ಪೀಠದ ತೀರ್ಪಿನ ವಿರುದ್ಧದ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

Update: 2024-05-17 08:43 GMT

ಹೊಸದಿಲ್ಲಿ, ಮೇ 17- ಸಂವಿಧಾನ ಪೀಠದ ತೀರ್ಪುಗಳು ಕಡಿಮೆ ಸಾಮರ್ಥ್ಯದ ಪೀಠಗಳಿಗೂ ಅನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

ಹರಿಯಾಣದ ಭೂ ಕಾಯಿದೆಯಡಿ ನಿಗದಿಗೊಳಿಸಿದ ಮಿತಿಯಷ್ಟು ಜಮೀನು ಇರುವವರಿಂದ ತೆಗೆದುಕೊಂಡ ಭೂಮಿ ಮೇಲೆ ಪಂಚಾಯಿತಿ ಮಾಲೀಕತ್ವದ ಹಕ್ಕು ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ 2022 ರ ಏಪ್ರಿಲ್‌ 7ರಂದು ಆದೇಶ ನೀಡಿತ್ತು. ಇಂಥ ಭೂಮಿಯನ್ನು ಪಂಚಾಯತಿಗಳು ನಿರ್ವಹಿಸಬಹುದು ಮತ್ತು ನಿಯಂತ್ರಿಸಬಹುದು; ಆದರೆ, ಹಕ್ಕು ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. 

ಏಪ್ರಿಲ್ 2022 ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ಪೀಠ, ʻ1966 ರಲ್ಲಿ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠ ರೂಪಿಸಿದ ಕಾನೂನನ್ನು ಆಧರಿಸಿ ಹೈಕೋರ್ಟ್ ತೀರ್ಪು ನೀಡಿರುವುದರಿಂದ, ಆ ತೀರ್ಪಿನಲ್ಲಿ ಏನು ತಪ್ಪಿದೆ ಎಂಬುದನ್ನು ನ್ಯಾಯಾಲಯ ವಿವರಿಸಬೇಕಾದ್ದು ಅಗತ್ಯʼ ಎಂದು ಹೇಳಿದೆ. 

ʻಸಂವಿಧಾನ  ಪೀಠದ ತೀರ್ಪುಗಳು ಕಡಿಮೆ ಸಂಖ್ಯೆಯ ನ್ಯಾಯಮೂರ್ತಿಗಳಿರುವ ಪೀಠಗಳಿಗೂ ಅನ್ವಯವಾಗುತ್ತದೆ ಎಂದು ಹೇಳಲು ಯಾವುದೇ ಕಾನೂನು ಅಗತ್ಯವಿಲ್ಲ. ಭಗತ್ ರಾಮ್ ಪ್ರಕರಣ (1966 ತೀರ್ಪು)ವು ಐವರು ನ್ಯಾಯಾಧೀ ಶರ ಪೀಠದಿಂದ ನಿರ್ಧರಿಸಲ್ಪಟ್ಟಿದೆ. ನಮ್ಮದು ಇಬ್ಬರು ನ್ಯಾಯಾಧೀಶರ ಪೀಠ. ಸಂವಿಧಾನ ಪೀಠದ ಆದೇಶದ ಪ್ಯಾರಾಗ್ರಾಫ್ 5 ರಲ್ಲಿ ರೂಪಿಸಿದ ಕಾನೂನನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ,ʼ ಎಂದು ಪೀಠ ಹೇಳಿತು. ʻಸಂವಿಧಾನ ಪೀಠ ರೂಪಿಸಿರುವ ಕಾನೂನಿನ ನಿರ್ಲಕ್ಷ್ಯ ಮತ್ತು ಅದಕ್ಕೆ ಸಂಪೂರ್ಣ ತದ್ವಿರುದ್ಧ ನಿಲುವು ಹೊಂದುವುದು ಲೋಪಕ್ಕೆ ಕಾರಣವಾಗುತ್ತದೆ; ಸದೃಢತೆಯನ್ನು ಹಾಳು ಮಾಡುತ್ತದೆʼ ಎಂದಿದೆ.

ಹರಿಯಾಣ ಗೋಮಾಳ ಭೂಮಿ (ನಿಯಂತ್ರಣ) ಕಾಯ್ದೆ 1961ರ ಸೆಕ್ಷನ್ 2 (ಜಿ), ಉಪ ವಿಭಾಗ 6 ರ ಕಾನೂನುಬದ್ಧತೆಯನ್ನು ಪರಿಶೀಲಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಪೂರ್ಣ ಪೀಠದ ತೀರ್ಪಿನ ವಿರುದ್ಧದ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಮೇಲ್ಮನವಿಯನ್ನು ಆಗಸ್ಟ್ 7ರಂದು ವಿಚಾರಣೆಗೆ ಪಟ್ಟಿ ಮಾಡುವಂತೆ ಪೀಠ ಸೂಚಿಸಿದೆ. 

Tags:    

Similar News