ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ: ಪ್ರಧಾನಿ ಮೌನಕ್ಕೆ ಕಾಂಗ್ರೆಸ್ ಟೀಕೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ದಿನಗಳಲ್ಲಿ ಮೂರು ಭಯೋತ್ಪಾದಕ ದಾಳಿ ನಡೆದಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಶಾಂತಿ ನೆಲೆಸಿದೆ ಎಂದು ಎದೆ ತಟ್ಟಿಕೊಳ್ಳುತ್ತಿರುವ ಬಿಜೆಪಿ, ಟೊಳ್ಳು ಹೇಳಿಕೆ ನೀಡುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಜಮ್ಮು-ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಗಳು ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬಹಿರಂಗಪಡಿಸಿವೆ. ದೇಶದ ವಿರುದ್ಧ ಸಂಚು ರೂಪಿಸಿದವರನ್ನು ಬಿಜೆಪಿ ಆಡಳಿತದಲ್ಲಿ ಏಕೆ ಹಿಡಿಯಲಾಗುತ್ತಿಲ್ಲ ಎಂದು ದೇಶ ಕೇಳುತ್ತಿದೆ. ಪ್ರಧಾನಿ ಮೋದಿಯವರು ಸಂಭ್ರಮಾಚರಣೆ ಯಲ್ಲಿ ಮುಳುಗಿದ್ದು, ಉಗ್ರರ ದಾಳಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಪ್ರಧಾನಿ ಸಂಭ್ರಮಾಚರಣೆ: ʻಪ್ರಧಾನಿ ಅಭಿನಂದನೆ ಸಂದೇಶಗಳಿಗೆ ಪ್ರತಿಕ್ರಿಯಿಸುವುದರಲ್ಲಿ ನಿರತರಾಗಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಹತ್ಯೆಗೀಡಾದವರ ಕುಟುಂಬಗಳ ಅಳಲು ಅವರಿಗೆ ಕೇಳಿಸುತ್ತಿಲ್ಲ. ಜಮ್ಮು- ಕಾಶ್ಮೀರದ ರಿಯಾಸಿ, ಕಥುವಾ ಮತ್ತು ದೋಡಾದಲ್ಲಿ ಭಯೋತ್ಪಾದಕ ಘಟನೆಗಳು ನಡೆದಿವೆ ,ʼ ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.
ಕಾಂಗ್ರೆಸ್ಸಿನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಉಸ್ತುವಾರಿ ಪವನ್ ಖೇರಾ, ʻಪ್ರಧಾನಿ ಅವರಿಗೆ ಪಾಕಿಸ್ತಾನದ ನಾಯಕರಿಗೆ ಪ್ರತಿಕ್ರಿಯಿಸ ಲು ಸಮಯವಿದೆ. ಆದರೆ, ದಾಳಿಯನ್ನು ಖಂಡಿಸಲು ಸಮಯವಿಲ್ಲ,ʼ ಎಂದು ಟೀಕಿಸಿದ್ದಾರೆ.
ʻಜಮ್ಮು-ಕಾಶ್ಮೀರದಲ್ಲಿ ಶಾಂತಿ ಮತ್ತು ಸಹಜ ಸ್ಥಿತಿ ಮರಳಿದೆ ಎಂದು ಎದೆ ತಟ್ಟಿಕೊಳ್ಳುವ ಬಿಜೆಪಿಯವರ ಪೊಳ್ಳು ಹೇಳಿಕೆಗಳು ಬಯಲಾಗಿವೆ. ಬಿಜೆಪಿ ಕಾಶ್ಮೀರ ಕಣಿವೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸದೆ ಇರುವುದು ಅವರ 'ನಯಾ ಕಾಶ್ಮೀರ' ಹೀನಾಯವಾಗಿ ವಿಫಲವಾಗಿದೆ ಎಂಬುದಕ್ಕೆ ಸಾಕ್ಷಿ,ʼ ಎಂದು ಖೇರಾ ಹೇಳಿದ್ದಾರೆ.
ರಾಷ್ಟ್ರೀಯ ಭದ್ರತೆ: ʻಪ್ರಧಾನಿ ಮತ್ತು ಎನ್‌ಡಿಎ ಸರ್ಕಾರ ಪ್ರಮಾಣವಚನ ಸ್ವೀಕರಿಸುತ್ತಿರುವಾಗ ಮತ್ತು ಹೊರದೇಶಗಳ ಮುಖ್ಯಸ್ಥರು ಭೇಟಿ ನೀಡಿದ್ದಾಗ, ರಿಯಾಸಿ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 9 ಅಮೂಲ್ಯ ಜೀವಗಳು ಹೋದವು. ಶಿವ ಖೋರಿ ದೇವಸ್ಥಾನದಿಂದ ಕತ್ರಾಕ್ಕೆ ತೆರಳುತ್ತಿದ್ದ ಬಸ್ ಮೇಲೆ ಉಗ್ರರು ಗುಂಡು ಹಾರಿಸಿದರು. ಆನಂತರ, ಕಥುವಾದಲ್ಲಿ ಮತ್ತೊಂದು ಭಯೋತ್ಪಾದಕ ದಾಳಿ ನಡೆದಿದ್ದು, ಒಬ್ಬ ನಾಗರಿಕ ಗಾಯಗೊಂಡಿದ್ದಾರೆ. ಜೂನ್ 11 ರಂದು ಜಮ್ಮುವಿನ ದೋಡಾದ ಛತ್ರಕಾಲದಲ್ಲಿ ನಡೆದ ಮುಖಾಮುಖಿಯಲ್ಲಿ ಆರು ಭದ್ರತಾ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಗಾಯಗೊಂಡಿದ್ದಾರೆ,ʼ ಎಂದು ಹೇಳಿದರು.
ʻಪ್ರಧಾನಿ ಅವರು ನವಾಜ್ ಷರೀಫ್ ಮತ್ತು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅವರ ಅಭಿನಂದನೆ ಟ್ವೀಟ್‌ಗಳಿಗೆ ಪ್ರತಿಕ್ರಿಯೆ ಪೋಸ್ಟ್ ಮಾಡುವುದರಲ್ಲಿ ನಿರತರಾಗಿದ್ದಾರೆ. ಕಳೆದ 2 ವರ್ಷಗಳಲ್ಲಿ ರಜೌರಿ ಮತ್ತು ಪೂಂಚ್ ಗಡಿ ಪ್ರದೇಶದಲ್ಲಿ ಉಗ್ರರ ದಾಳಿಯಿಂದ 35 ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದಾರೆ. ಭದ್ರತಾ ಸ್ಥಾವರಗಳ ಮೇಲೆ ಕನಿಷ್ಠ 19 ಭಯೋತ್ಪಾದಕ ದಾಳಿಗಳು ನಡೆದಿವೆ. ಜಮ್ಮು-ಕಾಶ್ಮೀರದಲ್ಲಿ 2,262 ಭಯೋತ್ಪಾದಕ ದಾಳಿಗಳು ನಡೆದಿದ್ದು, 363 ನಾಗರಿಕರು ಮತ್ತು 596 ಯೋಧರು ಹುತಾತ್ಮರಾಗಿದ್ದಾರೆ. ಮೋದಿ ಸರ್ಕಾರ ರಾಷ್ಟ್ರೀಯ ಭದ್ರತೆಗೆ ಅಪಾಯ ಉಂಟುಮಾಡಿರುವುದು ನಿಜವಲ್ಲವೇ?,ʼ ಎಂದು ಪ್ರಶ್ನಿಸಿದರು.