2023 ರ ಕಾನೂನಿನ ಪ್ರಕಾರ, ಹೊಸ ಚುನಾವಣಾ ಆಯುಕ್ತರನ್ನು ನೇಮಕ ಮಾಡದಂತೆ ಕೇಂದ್ರವನ್ನು ನಿರ್ಬಂಧಿಸುವಂತೆ ಕೋರಿ ಕಾಂಗ್ರೆಸ್ ಮುಖಂಡರಾದ ಜಯಾ ಠಾಕೂರ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಚುನಾವಣಾ ಆಯುಕ್ತ ಅರುಣ್ ಗೋಯೆಲ್ ರಾಜೀನಾಮೆ ಮತ್ತು ಅನುಪ್ ಚಂದ್ರ ಪಾಂಡೆ ಅವರ ನಿವೃತ್ತಿ ನಂತರ ಎರಡು ಚುನಾವಣಾ ಆಯುಕ್ತರ ಹುದ್ದೆಗಳು ಖಾಲಿಯಾಗಿವೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕ ಕಾಯಿದೆ, 2023 ರ ನಿಬಂಧನೆಗಳನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕಿ ಜಯ ಠಾಕೂರ್ ಅರ್ಜಿ ಸಲ್ಲಿಸಿದ್ದಾರೆ.
ʻಆಯೋಗದ ಒಬ್ಬ ಸದಸ್ಯ ಅರುಣ್ ಗೋಯೆಲ್ ಅವರು ಮಾರ್ಚ್ 9, 2024 ರಂದು ರಾಜೀನಾಮೆ ನೀಡಿದ್ದು, ರಾಷ್ಟ್ರಪತಿ ಅಂಗೀಕರಿಸಿದ್ದಾರೆ. ಲೋಕಸಭಾ ಚುನಾವಣೆಗೆ ದಿನಾಂಕ ಇಷ್ಟರಲ್ಲೇ ಘೋಷಣೆಯಾಗಬಹುದು. ಆದ್ದರಿಂದ, ಶೀಘ್ರವಾಗಿ ಚುನಾವಣೆ ಆಯುಕ್ತರನ್ನು ನೇಮಿಸಬೇಕಿದೆ. ಅನೂಪ್ ಬರನ್ವಾಲ್ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣ ದಲ್ಲಿ (ಮಾರ್ಚ್ 2, 2023 ತೀರ್ಪು) ನೇಮಕ ಪ್ರಕ್ರಿಯೆ ಬಗ್ಗೆ ಸ್ಪಷ್ಟ ಆದೇಶ ನೀಡಿದೆ,ʼ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ʻಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ಕಾಯಿದೆ 2023 ರ ಸೆಕ್ಷನ್ 7 ಮತ್ತು 8 ರ ಪ್ರಕಾರ ಸದಸ್ಯರನ್ನು ನೇಮಕ ಮಾಡದಂತೆ ಪ್ರತಿವಾದಿಗಳನ್ನು ನಿರ್ಬಂಧಿಸಬೇಕುʼ ಎಂದು ಕೋರಿದ್ದಾರೆ.
ಆಯ್ಕೆ ಸಮಿತಿಯಲ್ಲಿ ಸಿಜೆಐ ಇಲ್ಲ: ಹೊಸ ಕಾನೂನಿನ ಪ್ರಕಾರ, ಪ್ರಧಾನಿ ಅಧ್ಯಕ್ಷತೆ, ವಿರೋಧ ಪಕ್ಷದ ನಾಯಕ ಮತ್ತು ಪ್ರಧಾನಿ ನಾಮನಿರ್ದೇಶನ ಮಾಡಿದ ಕೇಂದ್ರ ಕ್ಯಾಬಿನೆಟ್ ಮಂತ್ರಿ ಇರುವ ಸಮಿತಿ ಸಿಇಸಿ-ಇಸಿಯನ್ನು ಆಯ್ಕೆ ಮಾಡುತ್ತದೆ. ಸಮಿತಿಯಲ್ಲಿ ಸಿಜೆಐ ಅವರನ್ನು ಕೈಬಿಟ್ಟಿರುವ ಸರ್ಕಾರ ಸುಪ್ರೀಂ ಕೋರ್ಟ್‌ನ್ನು ಧಿಕ್ಕರಿಸಿದೆ ʼಎಂದು ಪ್ರತಿಪಕ್ಷಗಳು ಆರೋಪಿಸಿವೆ.