ಪ್ರಿಯಾಂಕಾ ಸ್ಪರ್ಧೆಗೆ ಕಾಂಗ್ರೆಸ್ ಕೇರಳ ಸ್ವಾಗತ; ವಂಶಪಾರಂಪರ್ಯ ರಾಜಕೀಯ: ಬಿಜೆಪಿ ಟೀಕೆ

ಕಾಂಗ್ರೆಸ್‌ ವಂಶಪಾರಂಪರ್ಯ ರಾಜಕಾರಣ ಮಾಡುತ್ತಿದೆ. ವಯನಾಡ್‌ ಕ್ಷೇತ್ರವನ್ನು ಖಾಲಿ ಮಾಡುವ ರಾಹುಲ್‌ ಅವರ ನಿರ್ಧಾರ ಜನತೆಗೆ ಮಾಡಿದ ದ್ರೋಹ ಎಂದು ಬಿಜೆಪಿ ಬಣ್ಣಿಸಿದೆ.

Update: 2024-06-18 08:14 GMT

ಕಾಂಗ್ರೆಸ್‌ನ ಕೇರಳ ಘಟಕವು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ವಯನಾಡ್‌ಗೆ ಸ್ವಾಗತಿಸಿದೆ. ಆದರೆ, ಇದು ʻವಂಶಪಾರಂಪರ್ಯ ರಾಜಕೀಯʼ ಎಂದು ಬಿಜಿಪಿ ಟೀಕಿಸಿದೆ.

ಕ್ಷೇತ್ರದಲ್ಲಿ ಮುಂಬರುವ ಉಪಚುನಾವಣೆಯಲ್ಲಿ ಪ್ರಿಯಾಂಕಾ ಅವರು ದಾಖಲೆ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಘಟಕ ವಿಶ್ವಾಸ ವ್ಯಕ್ತಪಡಿಸಿದೆ. 

ʻವಯನಾಡಿನಲ್ಲಿ ಹೆಚ್ಚು ಜನಪ್ರಿಯವಾಗಿರುವ ಪ್ರಿಯಾಂಕಾ ಅವರನ್ನು ರಾಹುಲ್ ಮತ್ತು ಅವರ ಪಕ್ಷ ಅಭ್ಯರ್ಥಿಯಾಗಿ ಹೆಸರಿಸಿದೆ,ʼ ಎಂದು ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ʻಉಪ ಚುನಾವಣೆಯಲ್ಲಿ ಅವರು ಐತಿಹಾಸಿಕ ಗೆಲುವಿನ ಅಂತರ ದಾಖಲಿಸುವ ಮೂಲಕ ಇಡೀ ರಾಜ್ಯಕ್ಕೆ ಪ್ರಿಯರಾಗುತ್ತಾರೆ,ʼ ಎಂದು ಹೇಳಿದ್ದಾರೆ.

ರಾಹುಲ್‌ಗೆ ಅಭಿನಂದನೆ: ಕೆಪಿಸಿಸಿ ಮುಖ್ಯಸ್ಥ ಕೆ.ಸುಧಾಕರನ್ ಕೂಡ ಪ್ರಿಯಾಂಕಾ ಅವರನ್ನು ಕೇರಳಕ್ಕೆ ಸ್ವಾಗತಿಸಿದ್ದಾರೆ ಮತ್ತು ವಯನಾಡ್ ಕ್ಷೇತ್ರಕ್ಕೆ ರಾಹುಲ್ ಗಾಂಧಿ ಅವರ ಸೇವೆಗೆ ಹೃತ್ಪೂರ್ವಕ ಧನ್ಯವಾದ ಹೇಳಿದ್ದಾರೆ. 

ʻಹಿಂದಿನ ಎರಡು ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೇರಳದಲ್ಲಿ ಗೆಲುವು ಸಾಧಿಸಲು ರಾಹುಲ್ ಉಪಸ್ಥಿತಿ ಕಾರಣ,ʼ ಎಂದು ಅವರು ಹೇಳಿದರು. ʻಕೇರಳದ ಜನರು ಪಕ್ಷ ರಾಜಕೀಯವನ್ನು ಮೀರಿ ಅವರನ್ನು ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ. ರಾಹುಲ್ ಅವರ ಉತ್ತರಾಧಿಕಾರಿಯಾಗಿ ಪ್ರಿಯಾಂಕಾ ಗಾಂಧಿ ಅವರನ್ನು ಎಐಸಿಸಿ ಆಯ್ಕೆಮಾಡಿದ್ದು, ನಾನು ಸೇರಿದಂತೆ ರಾಜ್ಯದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ ಅತೀವ ಸಂತೋ ಷ ಮತ್ತು ಹೆಮ್ಮೆಯಾಗಿದೆ,ʼ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ವಯನಾಡಿಗೆ ಸಂತೋಷದ ಕ್ಷಣ: ʻರಾಹುಲ್ ಗಾಂಧಿ ಅವರನ್ನು ಒಪ್ಪಿಕೊಂಡಂತೆಯೇ ಕೇರಳದ ಜನ, ಅದರಲ್ಲೂ ವಿಶೇಷವಾಗಿ ವಯನಾಡಿನ ಜನರು, ಪ್ರಿಯಾಂಕಾ ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತಾರೆ. ಅವರು ಕ್ಷೇತ್ರವನ್ನು ಗಮನಾರ್ಹ ಅಂತರದಿಂದ ಗೆಲ್ಲುತ್ತಾರೆ,ʼ ಎಂದು ಸುಧಾಕರನ್‌ ಆಶಿಸಿದರು. 

ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಂಸದ ಕೆ.ಮುರಳೀಧರನ್ ಮಾತನಾಡಿ, ʻಪ್ರಿಯಾಂಕಾ ಆಗಮನ ವಯನಾಡ್ ಜನತೆಗೆ ಸಂತಸದ ಕ್ಷಣ. ಇಂದಿನ ಸನ್ನಿವೇಶದಲ್ಲಿ ರಾಹುಲ್ ಗಾಂಧಿ ರಾಯ್ ಬರೇಲಿ ಬಿಟ್ಟು ಹೋಗುವಂತಿಲ್ಲ. ಅವರ ಕೆಲಸದಿಂದ ಯುಪಿಯಲ್ಲಿ ಪಕ್ಷ ಬಲಗೊಂಡಿದೆ,ʼ ಎಂದು ಅವರು ಹೇಳಿದರು. ಜೂನ್ 4 ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, 14 ದಿನಗಳಲ್ಲಿ ರಾಹುಲ್‌ ಅವರು ಒಂದು ಸ್ಥಾನ ಖಾಲಿ ಮಾಡಬೇಕಿದೆ.

ವಂಶಪಾರಂಪರ್ಯ ರಾಜಕೀಯ: ಬಿಜೆಪಿ ಟೀಕೆ

ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಯನಾಡಿನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ಘೋಷಿಸಿದ ಬೆನ್ನಲ್ಲೇ ಬಿಜೆಪಿ, ವಂಶಪಾರಂಪರ್ಯ ರಾಜಕೀಯ ಎಂದು ಟೀಕಿಸಿದೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಅವರು, ಕಾಂಗ್ರೆಸ್‌ ವಂಶಪಾರಂಪರ್ಯ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ. ವಯನಾಡ್ ಸ್ಥಾನ ತೆರವು ನಿರ್ಧಾರ ಜನರಿಗೆ ಬಗೆದ ದ್ರೋಹ, ಎಂದು ಬಣ್ಣಿಸಿದ್ದಾರೆ. ʻರಾಹುಲ್ ಗಾಂಧಿ ವಯನಾಡ್ ತೆರವು ಮತ್ತು ಅಲ್ಲಿಂದ ಅವರ ಸಹೋದರಿ ಸ್ಪರ್ಧೆಯಿಂದ ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಲ್ಲ; ಬದಲಾಗಿ, ಕುಟುಂಬದ ಕಂಪನಿ ಎಂಬುದು ಸ್ಪಷ್ಟವಾಗಿದೆ,ʼ ಎಂದು ಪೂನಾವಾಲಾ ದೂರಿದ್ದಾರೆ. 

ʻತಾಯಿ (ಸೋನಿಯಾ ಗಾಂಧಿ) ರಾಜ್ಯಸಭೆಯಲ್ಲಿ, ಮಗ (ರಾಹುಲ್ ಗಾಂಧಿ) ಲೋಕಸಭೆಯಲ್ಲಿ ರಾಯಬರೇಲಿಯಿಂದ ಮತ್ತು ಪ್ರಿಯಾಂಕಾ ಇನ್ನೊಂದು ಕ್ಷೇತ್ರದಿಂದ ಲೋಕಸಭೆಯಲ್ಲಿರುತ್ತಾರೆ. ಇದು ವಂಶಪಾರಂಪರ್ಯತೆಯ ಸಂಕೇತ,ʼ ಎಂದು ಹೇಳಿದರು. 

ʻವಯನಾಡ್ ಸ್ಥಾನ ತೆರವುಗೊಳಿಸುವ ರಾಹುಲ್ ಅವರ ನಿರ್ಧಾರ ಕ್ಷೇತ್ರದ ಜನರಿಗೆ ಬಗೆದ ದ್ರೋಹ. ಗಾಂಧಿ ಕುಟುಂಬದ ರಾಜಕೀಯ ಪರಂಪರೆ ಮಗನ ಬಳಿ ಉಳಿಯುತ್ತದೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಮಗ ಮತ್ತು ಮಗಳ ನಡುವೆ ಯಾರು ಮೊದಲು ಎಂಬುದ ನ್ನು ತೋರಿಸುತ್ತದೆ,ʼ ಎಂದು ದೂರಿದರು.

ʻರಾಯ್‌ಬರೇಲಿ ಕ್ಷೇತ್ರ ಬಿಟ್ಟುಕೊಟ್ಟಲ್ಲಿ ಉಪ ಚುನಾವಣೆಯಲ್ಲಿ ಕ್ಷೇತ್ರ ಬಿಜೆಪಿಗೆ ಸೇರುತ್ತದೆ ಎಂಬ ಅರಿವು ಅವರಿಗಿದೆ. ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ರಾಯ್ ಬರೇಲಿ ಕ್ಷೇತ್ರವನ್ನು ರಾಹುಲ್ ಗೆದ್ದಿದ್ದಾರೆ,ʼ ಎಂದು ಹೇಳಿದ್ದಾರೆ.

ʻಓಡಿಹೋದ ವಧುʼ: ಬಿಜೆಪಿ ನಾಯಕ ಅಜಯ್ ಅಲೋಕ್ ಕೂಡ ರಾಹುಲ್ ವಯನಾಡ್ ಕ್ಷೇತ್ರವನ್ನು ತೆರವುಗೊಳಿಸಿದ ಬಗ್ಗೆ ವಾಗ್ದಾಳಿ ನಡೆಸಿದರು. ಪ್ರಿಯಾಂಕಾ ಅವರ ಗೆಲುವು ಸುಲಭವಲ್ಲ ಎಂದು ಹೇಳಿದರು.

ʻಓಡಿಹೋದ ವಧು ವಯನಾಡ್‌ನಿಂದಲೂ ಪಲಾಯನ ಮಾಡಲು ನಿರ್ಧರಿಸಿದ್ದಾರೆ ಎಂಬುದು ಆಸಕ್ತಿದಾಯಕ. ಆದರೆ, ಪ್ರಿಯಾಂಕಾ ಗಾಂಧಿ ಅವರಿಗೆ ಚುನಾವಣೆ ಸುಲಭವಾಗಿರುವುದಿಲ್ಲ. ನಾವು ಕಠಿಣ ಸ್ಪರ್ಧೆ ನೀಡಲಿದ್ಧೇವೆ. ಕಮ್ಯುನಿಸ್ಟ್ ಪಕ್ಷ ಕೂಡ ಸ್ಪರ್ಧೆ ನೀಡಲಿದೆ. ಪ್ರಿಯಾಂಕಾ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದವರು ಯಾರು ಮತ್ತು ಅದರ ಹಿಂದಿನ ಉದ್ದೇಶವೇನು ಎಂದು ಜನ ಪ್ರಶ್ನಿಸುತ್ತಾರೆ. ಇದು ಪರ್ಯಾಯ ನಾಯಕತ್ವವನ್ನು ಸೃಷ್ಟಿಸಲು ನಡೆದ ಪ್ರಯತ್ನ ವೇ?,ʼ ಎಂದು ಕೇಳಿದ್ದಾರೆ.

ವಯನಾ‌ಡ್‌ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕೆ. ಸುರೇಂದ್ರನ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಅವರು ರಾಹುಲ್‌ ವಿರುದ್ಧ ಸ್ಪರ್ಧಿಸಿದ್ದರು.

Tags:    

Similar News