Haryana Election | ಇವಿಎಂ ಲೋಪ ತನಿಖೆಗೆ ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
ರಾಜ್ಯದ ಹಲವು ವಿಧಾನಸಭಾ ಕ್ಷೇತ್ರಗಳಿಂದ 20 ದೂರುಗಳು ಬಂದಿವೆ. ಇವಿಎಂಗಳಲ್ಲಿ ಕೆಲವು ಶೇ.99 ರಷ್ಟು ಬ್ಯಾಟರಿ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಿದರೆ, ಮತ್ತೆ ಕೆಲವು ಸರಾಸರಿ 60 ರಿಂದ 70 ರ ಷ್ಟು ಬ್ಯಾಟರಿ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಿರುವುದು ಕಂಡುಬಂದಿದೆ. ಈ ಲೋಪಗಳ ಕುರಿತು ಚುನಾವಣಾ ಆಯೋಗ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ನಿಯೋಗ ಒತ್ತಾಯಿಸಿದೆ.;
ಹರ್ಯಾಣ ವಿಧಾನಸಭಾ ಚುನಾವಣೆ ಮತ ಎಣಿಕೆಯ ವೇಳೆ ಕೆಲ ವಿದ್ಯುನ್ಮಾನ ಮತಯಂತ್ರಗಳಲ್ಲಿ ಕಂಡುಬಂದ ದೋಷಗಳ ಕುರಿತು ಕೂಲಂಕಷ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಪಕ್ಷ ದೂರು ಸಲ್ಲಿಸಿದೆ.
ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಅಶೋಕ್ ಗೆಹ್ಲೋಟ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಜೈರಾಮ್ ರಮೇಶ್, ಅಜಯ್ ಮಾಕನ್, ಪವನ್ ಖೇರಾ, ಹರ್ಯಾಣ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನ್ ಅವರನ್ನು ಒಳಗೊಂಡ ಕಾಂಗ್ರೆಸ್ ಉನ್ನತ ನಾಯಕರ ನಿಯೋಗವು ಬುಧವಾರ ನವದೆಹಲಿಯಲ್ಲಿ ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ದೂರು ಸಲ್ಲಿಸಿತು.
ಹರ್ಯಾಣದ ವಿವಿಧ ಮತಕ್ಷೇತ್ರಗಳಿಂದ ಬಂದಿರುವ ನಿರ್ದಿಷ್ಟ ದೂರುಗಳ ಪ್ರತಿಯನ್ನು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ರಾಜ್ಯದ ಹಲವು ವಿಧಾನಸಭಾ ಕ್ಷೇತ್ರಗಳಿಂದ ಲಿಖಿತವಾಗಿ ಏಳು ದೂರುಗಳು ಸೇರಿ ಒಟ್ಟು 20 ದೂರುಗಳು ಬಂದಿವೆ. ಇವಿಎಂಗಳು ಶೇ.99 ರಷ್ಟು ಬ್ಯಾಟರಿ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೆ, ಇವಿಎಂಗಳು ಸರಾಸರಿ 60 ರಿಂದ 70 ರಷ್ಟು ಬ್ಯಾಟರಿ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಿರುವುದು ಕಂಡುಬಂದಿದೆ. ಕೆಲ ಇವಿಎಂಗಳಲ್ಲಿ ಗ್ರೇರಿಂಗ್ ವ್ಯತ್ಯಾಸ ಸಹ ಕಂಡಿದ್ದು, ಇದರ ಬಗ್ಗೆ ಆಯೋಗ ತನಿಖೆ ನಡೆಸಬೇಕು ಎಂದು ನಿಯೋಗ ಒತ್ತಾಯಿಸಿದೆ.
ಹರ್ಯಾಣ ಫಲಿತಾಂಶ ಅಚ್ಚರಿ ಮೂಡಿಸಿರುವ ಕಾರಣ ಮತ ಎಣಿಕೆ ಬಗ್ಗೆ ಅನುಮಾನಗಳಿವೆ. ಕಾಂಗ್ರೆಸ್ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ ಎಂದು ಸಾಕಷ್ಟು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಅಂಚೆ ಮತಗಳ ಎಣಿಕೆಯಲ್ಲಿ ಕಾಂಗ್ರೆಸ್ ಜಯ ಗಳಿಸಿತ್ತು. ಇವಿಎಂಗಳಲ್ಲಿನ ಮತ ಎಣಿಕೆ ಆರಂಭವಾದಾಗ ಫಲಿತಾಂಶ ವ್ಯತಿರಿಕ್ತವಾಗಿದೆ. ಹಾಗಾಗಿ ವಿದ್ಯುನ್ಮಾನ ಮತಯಂತ್ರದ ಮತ ಎಣಿಕೆಯಲ್ಲಿ ಲೋಪವಾಗಿರುವ ಅನುಮಾನವಿದೆ ಎಂದು ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಅವರು ಸುದ್ದಿಗಾರರಿಗೆ ತಿಳಿಸಿದರು.
ತುರ್ತು ಕ್ರಮಕ್ಕೆ ಕಾಂಗ್ರೆಸ್ ಒತ್ತಾಯ
ರಾಜ್ಯದ ವಿವಿಧ ಕ್ಷೇತ್ರಗಳಿಂದ ಬಂದಿರುವ 20 ದೂರುಗಳ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ತಿಳಿಸಿದ್ದೇವೆ. ಏಳು ಕ್ಷೇತ್ರಗಳಿಂದ ಏಳು ಲಿಖಿತ ದೂರುಗಳು ಬಂದಿವೆ. ಕೆಲ ಇವಿಎಂ ಯಂತ್ರಗಳು ಶೇ. 99 ಪ್ರತಿಶತ ಬ್ಯಾಟರಿ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಿದರೆ, ಮತ್ತೆ ಕೆಲ ಇವಿಎಂಗಳು ಶೇ 60-70 ಕ್ಕಿಂತ ಕಡಿಮೆ ಬ್ಯಾಟರಿ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಿವೆ. ಹಾಗಾಗಿ ಇವಿಎಂ ಲೋಪಗಳ ಕುರಿತು ತುರ್ತಾಗಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಇಡೀ ವಿಷಯದ ವಿಚಾರಣೆ ಪೂರ್ಣಗೊಳ್ಳುವವರೆಗೆ ದೂರುಗಳು ಬಂದಿರುವ ಇವಿಎಂಗಳನ್ನು ಸೀಲ್ ಮಾಡಿ ಇಡಬೇಕು. ಮುಂದಿನ 48 ಗಂಟೆಗಳಲ್ಲಿ ನಾವು ಇನ್ನಷ್ಟು ದೂರುಗಳನ್ನು ಸಲ್ಲಿಸಲಿದ್ದೇವೆ ಎಂದು ದೂರಿನಲ್ಲಿ ತಿಳಿಸಿದೆ.