ಉಪರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆಗೆ ಚಾಲನೆ: ಧನಕರ್ ರಾಜೀನಾಮೆ ಬೆನ್ನಲ್ಲೇ ಆಯೋಗದ ಸಿದ್ಧತೆ
ಸಂವಿಧಾನದ 324ನೇ ವಿಧಿಯ ಅಡಿಯಲ್ಲಿ, ಭಾರತದ ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆಯನ್ನು ನಡೆಸುವ ಅಧಿಕಾರವನ್ನು ಚುನಾವಣಾ ಆಯೋಗವು ಹೊಂದಿದೆ ಎಂದು ಅದು ಸ್ಪಷ್ಟಪಡಿಸಿದೆ.;
ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಕೇಂದ್ರ ಚುನಾವಣಾ ಆಯೋಗವು (EC) ಮುಂದಿನ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದೆ. ಸಿದ್ಧತಾ ಕಾರ್ಯಗಳು ಈಗಾಗಲೇ ಆರಂಭವಾಗಿದ್ದು, ಚುನಾವಣಾ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ.
ಈ ಕುರಿತು ಅಧಿಸೂಚನೆ ಹೊರಡಿಸಿರುವ ಚುನಾವಣಾ ಆಯೋಗವು, "ಗೃಹ ಸಚಿವಾಲಯವು ಜುಲೈ 22, 2025 ರಂದು ತನ್ನ ಗೆಜೆಟ್ ಅಧಿಸೂಚನೆ ಸಂಖ್ಯೆ S.0.3354(E) ಮೂಲಕ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ರಾಜೀನಾಮೆಯನ್ನು ಪ್ರಕಟಿಸಿದೆ" ಎಂದು ತಿಳಿಸಿದೆ.
ಸಂವಿಧಾನದ 324ನೇ ವಿಧಿಯ ಅಡಿಯಲ್ಲಿ, ಭಾರತದ ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆಯನ್ನು ನಡೆಸುವ ಅಧಿಕಾರವನ್ನು ಚುನಾವಣಾ ಆಯೋಗವು ಹೊಂದಿದೆ ಎಂದು ಅದು ಸ್ಪಷ್ಟಪಡಿಸಿದೆ. "ಭಾರತದ ಉಪರಾಷ್ಟ್ರಪತಿ ಹುದ್ದೆಯ ಚುನಾವಣೆಯು 'ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ ಕಾಯ್ದೆ, 1952' ಮತ್ತು ಅದರ ಅಡಿಯಲ್ಲಿ ರೂಪಿಸಲಾದ 'ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ ನಿಯಮಗಳು, 1974'ರ ಮೂಲಕ ನಿಯಂತ್ರಿಸಲ್ಪಡುತ್ತದೆ," ಎಂದು ಆಯೋಗ ತನ್ನ ಅಧಿಸೂಚನೆಯಲ್ಲಿ ವಿವರಿಸಿದೆ.
"ಉಪರಾಷ್ಟ್ರಪತಿ ಚುನಾವಣೆ, 2025ಕ್ಕೆ ಸಂಬಂಧಿಸಿದ ಸಿದ್ಧತಾ ಕಾರ್ಯಗಳನ್ನು ಚುನಾವಣಾ ಆಯೋಗವು ಈಗಾಗಲೇ ಆರಂಭಿಸಿದೆ. ಈ ಪೂರ್ವಸಿದ್ಧತಾ ಚಟುವಟಿಕೆಗಳು ಪೂರ್ಣಗೊಂಡ ನಂತರ, ಸಾಧ್ಯವಾದಷ್ಟು ಬೇಗ ಭಾರತದ ಉಪರಾಷ್ಟ್ರಪತಿ ಹುದ್ದೆಯ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು," ಎಂದು ಆಯೋಗವು ತಿಳಿಸಿದೆ.