Death Threat to Yogi | ಯುಪಿ ಸಿಎಂ ಯೋಗಿ ಆದಿತ್ಯನಾಥ್‌ಗೆ ಕೊಲೆ ಬೆದರಿಕೆ; ಯುವತಿ ಬಂಧನ
x
Death threat to UP CM Yogi Adityanath in Mumbai

Death Threat to Yogi | ಯುಪಿ ಸಿಎಂ ಯೋಗಿ ಆದಿತ್ಯನಾಥ್‌ಗೆ ಕೊಲೆ ಬೆದರಿಕೆ; ಯುವತಿ ಬಂಧನ

ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಆದಿತ್ಯನಾಥ್ ಮಹಾರಾಷ್ಟ್ರಕ್ಕೆ ಹೋಗುವ ಸಾಧ್ಯತೆ ಇದೆ. ಇದೇ ಉದ್ದೇಶದಿಂದ ದುಷ್ಕರ್ಮಿಗಳು ಅವರಿಗೆ ಬೆದರಿಕೆ ಒಡ್ಡಿದ್ದಾರೆ.


ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೊಲೆ ಬೆದರಿಕೆ ಒಡ್ಡಿರುವ ಯುವತಿಯೊಬ್ಬಳನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ. ೨೪ ವರ್ಷದ ಫಾತಿಮಾ ಖಾನ್‌ ಬಂಧನಕ್ಕೆ ಒಳಗಾದವಳು. ತಕ್ಷಣದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರಂತೆಯೇ ಹತ್ಯೆ ಮಾಡುವುದಾಗಿ ಮುಂಬೈ ಸಂಚಾರ ಪೊಲೀಸರಿಗೆ ಬೆದರಿಕೆ ಸಂದೇಶವನ್ನು ಫಾತಿಮಾ ಕಳುಹಿಸಿದ್ದಳು.

ಮಾಹಿತಿ ತಂತ್ರಜ್ಞಾನದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಫಾತಿಮಾ ಖಾನ್ ತನ್ನ ಕುಟುಂಬ ಸದಸ್ಯರೊಂದಿಗೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್‌ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ಆಕೆಯ ತಂದೆ ಮರದ ವ್ಯಾಪಾರ ನಡೆಸುತ್ತಿದ್ದಾರೆ ಎಂದ ಪೊಲೀಸರು ಹೇಳಿದ್ದಾರೆ. ಯುವತಿ ಉತ್ತಮ ವಿದ್ಯಾರ್ಹತೆ ಹೊಂದಿದ್ದರೂ ಮಾನಸಿಕವಾಗಿ ಅಸ್ಥಿರಳಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಫಾತಿಮಾ ಸಂದೇಶ ಕಳುಹಿಸಿದ ತಕ್ಷಣ ಮುಂಬೈ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಉಲ್ಲಾಸ್‌ನಗರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಆಕೆಯನ್ನು ಪತ್ತೆ ಹಚ್ಚಿ ಬಂಧಿಸಿದೆ

ನವೆಂಬರ್ 20 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಆದಿತ್ಯನಾಥ್ ಮಹಾರಾಷ್ಟ್ರಕ್ಕೆ ಬರುವ ಸಾಧ್ಯತೆ ಇದ್ದ ಕಾರಣ ಬೆದರಿಕೆ ಸಂದೇಶ ತಲ್ಲಣ ಉಂಟು ಮಾಡಿತ್ತು.

ಬೆದರಿಕೆ ಸಂದೇಶದಲ್ಲಿ ಏನಿತ್ತು?

ಮುಂದಿನ 10 ದಿನಗಳಲ್ಲಿ ಆದಿತ್ಯನಾಥ್ ಅವರು ಉತ್ತರ ಪ್ರದೇಶ ಸಿಎಂ ಸ್ಥಾನದಿಂದ ಕೆಳಗಿಳಿಯದಿದ್ದರೆ ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಅವರಿಗಾದ ಗತಿಯೇ ಆಗಲಿದೆ ಎಂದು ಮುಂಬೈ ಪೊಲೀಸ್ ಸಂಚಾರ ನಿಯಂತ್ರಣ ಸೆಲ್‌ಗೆ ಅಜ್ಞಾತ ಸಂಖ್ಯೆಯಿಂದ ಸಂದೇಶ ಕಳುಹಿಸಲಾಗಿತ್ತು

ಬಾಬಾ ಸಿದ್ದಿಕ್ ಹತ್ಯೆಯಾಗಿದ್ದು ಹೇಗೆ?

ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅಕ್ಟೋಬರ್ 12ರಂದು ದಸರಾ ಹಬ್ಬದ ಸಂಭ್ರಮದಲ್ಲಿದ್ದಾಗ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಪುತ್ರ ಜೀಶಾನ್ ಸಿದ್ದಿಕಿ ಕಚೇರಿಯ ಹೊರಗಡೆ ಪಟಾಕಿ ಸದ್ದಿನ ನಡುವೆ ಅವರ ಮೇಲೆ ಸತತವಾಗಿ ಗುಂಡು ಹಾರಿಸಲಾಗಿತ್ತು.

ಇದಾದ ಬಳಿಕ ನಡೆದ ಘಟನೆಗಳಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ 2 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದ ಅಜಂ ಮೊಹಮ್ಮದ್ ಮುಸ್ತಫಾ ಎಂಬಾತನನ್ನು ಬಂಧಿಸಲಾಗಿದೆ. ಸಲ್ಮಾನ್ ಖಾನ್ ಮತ್ತು ಜೀಶಾನ್ ಸಿದ್ದಿಕಿ ಇಬ್ಬರಿಗೂ ಬೆದರಿಕೆ ಹಾಕಿದ ನೋಯ್ಡಾದ 20 ವರ್ಷದ ಮೊಹಮ್ಮದ್ ತಯ್ಯಬ್ ಎಂಬಾತನೂ ಪೊಲೀಸರಿಗೆ ಸೆರೆ ಸಿಕ್ಕಿದ್ದ.

Read More
Next Story