ಬಿಹಾರ ಚುನಾವಣೆ| ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ; ಫಲಿತಾಂಶಕ್ಕೂ ಮುನ್ನವೇ 501 ಕೆ.ಜಿ. ಲಡ್ಡು ಆರ್ಡರ್
ಬಿಜೆಪಿ ಕಾರ್ಯಕರ್ತರು 501 ಕೆ.ಜಿ. ಸಾಂಪ್ರದಾಯಿಕ ಸಿಹಿತಿಂಡಿ ಆರ್ಡರ್ ಮಾಡಿರುವುದನ್ನು ಪಾಟ್ನಾದ ಲಡ್ಡು ತಯಾರಕರೊಬ್ಬರು ದೃಢಪಡಿಸಿದ್ದು, ನ.14 ರಂದು ಬೆಳಿಗ್ಗೆ ತಲುಪಿಸಲಾಗುವುದು ಎಂದಿದ್ದಾರೆ.
ನವೆಂಬರ್ 14 ರಂದು 501 ಕೆಜಿ ಲಡ್ಡನ್ನು ತಲುಪಿಸಲು ಬಿಜೆಪಿ ಬಿಹಾರ ಘಟಕ ಆದೇಶಿಸಿದೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿರುವ ಬಿಜೆಪಿಯು ಸಂಭ್ರಮಾಚರಣೆಗೆ ಸಿದ್ಧತೆ ಆರಂಭಿಸಿದೆ. ಶುಕ್ರವಾರ ನಡೆಯಲಿರುವ ಮತ ಎಣಿಕೆಗೂ ಮುನ್ನವೇ 501 ಕೆ.ಜಿ. ಲಡ್ಡು ಆರ್ಡರ್ ಮಾಡಿದೆ.
ಬಿಹಾರದಲ್ಲಿ ನ.6 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಇದರ ಫಲಿತಾಂಶವು ನ.14 ರಂದು ಪ್ರಕಟವಾಗಲಿದೆ. ಈ ಬಾರಿ 1951 ರಿಂದ ಈಚೆಗೆ ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ ಶೇ. 66.91 ರಷ್ಟು ಮತದಾನ ದಾಖಲಾಗಿದೆ.
ಚುನಾವಣಾ ಪೂರ್ವ ಸಮೀಕ್ಷೆಗಳು ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಜನಾದೇಶ ಇರುವುದಾಗಿ ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಂಭ್ರಮದ ಅಲೆಯಲ್ಲಿ ತೇಲುತ್ತಿದೆ.
ಬಿಜೆಪಿ ಕಾರ್ಯಕರ್ತ ಕೃಷ್ಣಕುಮಾರ್ ಕಲ್ಲು ಅವರು "ಎಣಿಕೆಯ ದಿನದಂದು, ಎನ್‌ಡಿಎ ಮೈತ್ರಿಕೂಟವು ಹೋಳಿ, ದಸರಾ, ದೀಪಾವಳಿ ಮತ್ತು ಈದ್ ಆಚರಿಸುತ್ತದೆ. ಏಕೆಂದರೆ ಜನರು ಎನ್‌ಡಿಎಯ ಅಭಿವೃದ್ಧಿ ಕಾರ್ಯಗಳ ಪರ ಮತ ಚಲಾಯಿಸಿದ್ದಾರೆ. ನಮ್ಮ ಪಕ್ಷವು ಈ ಸಂದರ್ಭದಲ್ಲಿ ಜನರಿಗೆ 'ಪ್ರಸಾದ'ವಾಗಿ ವಿತರಿಸಲು 501 ಕೆ.ಜಿ.ಲಡ್ಡು ಆರ್ಡರ್ ಮಾಡಿದೆ" ಎಂದು ತಿಳಿಸಿದ್ದಾರೆ.
ಪಾಟ್ನಾದ ಲಡ್ಡು ತಯಾರಕರೊಬ್ಬರು ಪ್ರತಿಕ್ರಿಯಿಸಿ, ಬಿಜೆಪಿ ಕಾರ್ಯಕರ್ತರು 501 ಕೆ.ಜಿ. ಸಾಂಪ್ರದಾಯಿಕ ಸಿಹಿತಿಂಡಿ ಆರ್ಡರ್ ಮಾಡಿದ್ದಾರೆ. ನ.14 ರಂದು ಬೆಳಿಗ್ಗೆ ತಲುಪಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರು ಚುನಾವಣಾ ಪೂರ್ವ ಸಮೀಕ್ಷೆಯ ಭವಿಷ್ಯವನ್ನು ತಳ್ಳಿ ಹಾಕಿದ್ದು, ಬಿಜೆಪಿಯ ಉನ್ನತ ನಾಯಕತ್ವದ ನಿರ್ದೇಶನದ ಮೇಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.