ಕಂಗನಾಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಮಹಿಳಾ ಸಿಬ್ಬಂದಿ; ಕಾರಣ ಏನು?

ಕಂಗನಾ ರನೌತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಮಹಿಳಾ ಸಿಬ್ಬಂದಿಯೊಬ್ಬರು ಗುರುವಾರ ಕಪಾಳಮೋಕ್ಷ ಮಾಡಿದ್ದಾರೆ.;

Update: 2024-06-07 14:20 GMT
ಕಂಗನಾ ರನೌತ್ ಅವರಿಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಮಹಿಳಾ ಸಿಬ್ಬಂದಿ
Click the Play button to listen to article

ʻಸದಾ ವಿವಾದಾತ್ಮಕ ಹೇಳಿಕೆಯಿಂದಲೇ ಗುರುತಿಸಿಕೊಂಡಿರುವ ಬಾಲಿವುಡ್‌ ನಟಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿಯಿಂದ ಗೆದ್ದು ಸಂಸದರಾಗಿ ಆಯ್ಕೆಗೊಂಡಿರುವ ಕಂಗನಾ ರನೌತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಮಹಿಳಾ ಸಿಬ್ಬಂದಿಯೊಬ್ಬರು ಗುರುವಾರ ( ಜೂನ್‌ 6) ಕಪಾಳಮೋಕ್ಷ ಮಾಡಿದ್ದಾರೆ.

ಈ ಘಟನೆ ಗುರುವಾರ ( ಜೂನ್‌ 6) ಮಧ್ಯಾಹ್ನ 3:30ರ ಸುಮಾರಿಗೆ ನಡೆದಿದ್ದು, ಕಂಗನಾ ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ನಡೆದಿದೆ.

ನಟಿ ಈ ಹಿಂದೆ ರೈತ ಸಂಘಟನೆಗಳು ಡೆಲ್ಲಿಯಲ್ಲಿ ಪ್ರತಿಭಟನೆ ನಡೆಸುವಾಗ ಅವರ ವಿರುದ್ಧ ಹೇಳಿಕೆ ನೀಡಿದ್ದರು. ಈ ಕೋಪ ರೈತ ಕುಟುಂಬಕ್ಕೆ ಸೇರಿದ್ದ ಭದ್ರತಾ ಸಿಬ್ಬಂದಿಗೆ ಇತ್ತು. ಹೀಗಾಗಿ ಏರ್​ಪೋರ್ಟ್​ನಲ್ಲಿ ಕಂಗನಾ ಎದುರಾದಾಗ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

 

ಕಂಗಾನ ವಿವಾದಾತ್ಮಕ ಹೇಳಿಕೆ ಏನು?

2020ರಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ಪಂಜಾಬ್ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಕಂಗನಾ ರನೌತ್ ದೆಹಲಿಯ ಗಡಿಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿರುವ ರೈತ ಮಹಿಳೆಯರಿಗೆ 100 ರೂಪಾಯಿ ಹಣ ನೀಡಲಾಗಿದೆ. 100 ಹಣಕ್ಕಾಗಿ ಮಹಿಳೆಯರು ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಹಳಷ್ಟು ವಿವಾದಕ್ಕೂ ಕಾರಣವಾಗಿತ್ತು. ಹಾಗೂ ಈ ಪ್ರತಿಭಟನೆಯಲ್ಲಿ ಆ ಮಹಿಳಾ ಭದ್ರತಾ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರು ತಾಯಿಯೂ ಭಾಗವಹಿಸಿದ್ದರು. ಕಂಗನಾ ಹೇಳಿದ್ದ ರೈತ ವಿರೋಧಿ ಹೇಳಿಕೆಯಿಂದ ಸಿಟ್ಟಿಗೆದ್ದು ಕುಲ್ವಿಂದರ್ ಕೌರ್ ಕಪಾಳ ಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು ಕೋಪದಲ್ಲಿ ಕಪಾಳಕ್ಕೆ ಬಾರಿಸಿದ ತಪ್ಪಿಗೆ ಕುಲ್ವಿಂದರ್ ಕೌರ್ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಲಾಗಿದೆ. ಸಿಐಎಸ್​​ಎಫ್​ ಸಿಬ್ಬಂದಿ ಕುಲ್ವಿಂದರ್​​ ಕೌರ್ ಅವರನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪಂಜಾಬ್‌ನಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತಿದೆ ಎಂದ ಕಂಗನಾ!

ಈ ಘಟನೆಯ ಬಳಿಕ ಕಂಗನಾ ರನೌತ್‌ ವಿಡಿಯೋ ಮೂಲಕ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ನಮಸ್ಕಾರ ಸ್ನೇಹಿತರೇ. ಹಿತೈಷಿಗಳು ಹಾಗೂ ಮಾಧ್ಯಮದವರಿಂದ ನನಗೆ ಅನೇಕ ಕರೆಗಳು ಬರುತ್ತಿವೆ. ನಾನೀಗ ಸುರಕ್ಷಿತವಾಗಿದ್ದೇನೆ. ಚಂಡಿಗಢ ಏರ್​ಪೋರ್ಟ್​ನಲ್ಲಿ ಸೆಕ್ಯುರಿಟಿ ಚೆಕ್​ ಮಾಡುವಾಗ ಈ ಘಟನೆ ನಡೆಯಿತು. ಸೆಕ್ಯುರಿಟಿ ಚೆಕ್​ ಮುಗಿಸಿ ನಾನು ಮುಂದಕ್ಕೆ ಸಾಗುವಾಗ ಪಕ್ಕದ ಕ್ಯಾಬಿನ್​ನಲ್ಲಿ ಇದ್ದ ಸಿಐಎಸ್​ಎಫ್​ ಭದ್ರತಾ ಸಿಬ್ಬಂದಿ ಬಂದು ನನ್ನ ಮುಖಕ್ಕೆ ಹೊಡೆದರು ಹಾಗೂ ನನಗೆ ಬೈಯ್ಯಲು ಶುರುಮಾಡಿದರು. ಯಾಕೆ ಹೀಗೆ ಮಾಡಿದ್ರಿ ಅಂತ ನಾನು ಅವರಿಗೆ ಕೇಳಿದೆ. ರೈತರ ಹೋರಾಟಕ್ಕೆ ತಾವು ಬೆಂಬಲ ನೀಡುವುದಾಗಿ ಅವರು ಹೇಳಿದರು. ನಾನು ಸುರಕ್ಷಿತವಾಗಿದ್ದೇನೆ. ಆದರೆ ಪಂಜಾಬ್​ನಲ್ಲಿ ಹೆಚ್ಚುತ್ತಿರುವ ಉಗ್ರವಾದ ಹಾಗೂ ಆತಂಕವಾದವನ್ನು ನಾವು ಹೇಗೆ ನಿಭಾಯಿಸುವುದು ಎಂಬ ಬಗ್ಗೆ ನನ್ನ ಕಳಕಳಿ ಇರುವುದು. ಧನ್ಯವಾದ’ ಎಂದು ಕಂಗನಾ ವಿಡಿಯೋ ಮೂಲಕ ಹೇಳಿದ್ದರು.

ಬಾಲಿವುಡ್‌ ಮೌನದ ಬಗ್ಗೆ ಕಂಗನಾ ಬೇಸರ

ಇನ್ನು ಈ ಘಟನೆಯ ಬಗ್ಗೆ ಮೌನ ತಾಳಿರುವ ಬಾಲಿವುಡ್ ಮಂದಿ ಬಗ್ಗೆ ಕಂಗನಾ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಕಂಗನಾ "ಪ್ರೀತಿಯ ಚಲನಚಿತ್ರೋದ್ಯಮವೇ, ನೀವೆಲ್ಲರೂ ನನ್ನ ಮೇಲಿನ ವಿಮಾನ ನಿಲ್ದಾಣದ ದಾಳಿಯನ್ನು ಸಂಭ್ರಮಿಸುತ್ತಿದ್ದೀರಿ ಅಥವಾ ಮೌನವಾಗಿದ್ದೀರಿ, ನಾಳೆ ನೀವು ನಿಮ್ಮ ದೇಶದ ಯಾವುದೋ ಬೀದಿಯಲ್ಲಿ ಅಥವಾ ಪ್ರಪಂಚದ ಬೇರೆಲ್ಲಿಯಾದರೂ ನಿಶ್ಯಸ್ತ್ರವಾಗಿ ನಡೆಯುತ್ತಿದ್ದರೆ ಮತ್ತು ಕೆಲವು ಇಸ್ರೇಲಿ / ಪ್ಯಾಲೆಸ್ಟೀನಿಯಾದವರು ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಹೊಡೆದರೆ ಹೇಗೆ ನೆನಪಿಸಿಕೊಳ್ಳಿ" ಎಂದು ಪ್ರಶ್ನಿಸಿದ್ದಾರೆ.

ಕಂಗನಾಗೆ ಹೊಡೆದ ಮಹಿಳೆಗೆ ನಾನು ಕೆಲಸ ಕೊಡ್ತೀನಿ ಎಂದ ಖ್ಯಾತ ಸಂಗೀತ ನಿರ್ದೇಶಕ

ಕಂಗನಾರ ಕೆನ್ನೆಗೆ ಬಾರಿಸಿದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಸಿಬ್ಬಂದಿ ಕುಲ್ವಿಂದರ್​ ಕೌರ್​ ಅವರ ಪರವಾಗಿ ಖ್ಯಾತ ಸಂಗೀತ ನಿರ್ದೇಶಕ ವಿಶಾಲ್‌ ದದ್ಲಾನಿ ಮಾತನಾಡಿದ್ದಾರೆ. "ನಾನು ಹಿಂಸೆಯನ್ನು ಎಂದಿಗೂ ಬೆಂಬಲಿಸುವುದಿಲ್ಲ. ಆದರೆ ಈ ಸಿಐಎಸ್‌ಎಫ್ ಸಿಬ್ಬಂದಿಯ ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಸಿಐಎಸ್‌ಎಫ್ ಆಕೆಯ ವಿರುದ್ಧ ಯಾವುದೇ ಕ್ರಮ ಕೈಗೊಂಡರೆ.. ಆಕೆಗೆ ಕೆಲಸ ನೀಡಲು ನಾನು ಸಿದ್ಧ. ಜೈ ಹಿಂದ್, ಜೈ ಜವಾನ್ ಜೈ ಕಿಸಾನ್" ಎಂದು ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. 

ಯಾರು ಈ ಕುಲ್ವಿಂದರ್ ಕೌರ್?

35 ವರ್ಷದ ಕುಲ್ವಿಂದರ್ ಕೌರ್ ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಕಾನ್‌ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕುಲ್ವಿಂದರ್ ಕೌರ್ ಅವರು ಪಂಜಾಬ್‌ನ ಸುಲ್ತಾನ್‌ಪುರ್‌ ಲೊಧಿ ಮೂಲದವರು. ಕಳೆದ ಎರಡು ವರ್ಷದ ಹಿಂದಷ್ಟೇ ಚಂಡಿಗಢ ಏರ್‌ಪೋರ್ಟ್‌ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು. ಕುಲ್ವಿಂದರ್ ಕೌರ್ ಅವರಿಗೆ ಇಬ್ಬರು ಮಕ್ಕಳಿದ್ದು, ಅವರ ಪತಿ ಕೂಡ CISF ಸಿಬ್ಬಂದಿಯಾಗಿದ್ದಾರೆ. ಕುಲ್ವಿಂದರ್ ಕೌರ್ ಅವರ ಸಹೋದರ ಶೇರ್ ಸಿಂಗ್ ರೈತ ಪರ ಹೋರಾಟಗಾರರು. ಕಿಸಾನ್ ಮಂಜ್ದೂರ್ ಸಂಘರ್ಷ ಕಮಿಟಿಯ ಕಾರ್ಯದರ್ಶಿಯಾಗಿದ್ದರು.

ಕಂಗನಾ ರನೌತ್‌ ಈ ಬಾರಿ ಲೋಕಸಭೆ ಚುನಾವಣೆಗೆ ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ 74,755 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರು ಚುನಾವಣೆಯಲ್ಲಿ ಒಟ್ಟು 5,37,022 ಮತಗಳನ್ನು ಗಳಿಸಿ ಸಂಸತ್ತಿಗೆ ಪ್ರವೇಶ ಪಡೆದಿದ್ದಾರೆ.

Tags:    

Similar News