ಛತ್ತೀಸ್‌ಗಢದಲ್ಲಿ 16 ನಕ್ಸಲರ ಹತ್ಯೆ, ಇಬ್ಬರು ಡಿಆರ್‌ಜಿ ಯೋಧರಿಗೆ ಗಾಯ

ಸುಕ್ಮಾ ಜಿಲ್ಲೆಯ ಕೆರ್ಲಪಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಡಿನಲ್ಲಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ಆರಂಭವಾಯಿತು. ಭದ್ರತಾ ಪಡೆಗಳ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.;

Update: 2025-03-29 10:33 GMT

ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಕನಿಷ್ಠ 16 ನಕ್ಸಲೀಯರು ಹತ್ಯೆಗೀಡಾಗಿದ್ದಾರೆ. ಈ ಘಟನೆಯಲ್ಲಿ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ಘಟಕದ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷ ರಾಜ್ಯದಲ್ಲಿ ನಕ್ಸಲೀಯರ ವಿರುದ್ಧ ನಡೆದ ಅತ್ಯಂತ ಪ್ರಖರ ಕಾರ್ಯಾಚರಣೆಗಳಲ್ಲಿ ಇದು ಒಂದಾಗಿದೆ.

ಸುಕ್ಮಾ ಜಿಲ್ಲೆಯ ಕೆರ್ಲಪಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಡಿನಲ್ಲಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ಆರಂಭವಾಯಿತು. ಭದ್ರತಾ ಪಡೆಗಳ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆ  ಮುಂದುವರಿಸುತ್ತಿದ್ದಾರೆ ಎಂದು ಬಸ್ತರ್ ವಲಯದ ಪೊಲೀಸ್ ಮಹಾನಿರೀಕ್ಷಕ (ಐಜಿ) ಸುಂದರ್‌ರಾಜ್ ಪಿ ತಿಳಿಸಿದ್ದಾರೆ.

ಕಾರ್ಯಾಚರಣೆಯ ವಿವರಗಳು

ಈ ಕಾರ್ಯಾಚರಣೆಯಲ್ಲಿ ಛತ್ತೀಸ್‌ಗಢ ರಾಜ್ಯ ಪೊಲೀಸ್‌ನ ವಿಶೇಷ ಘಟಕವಾದ ಡಿಆರ್‌ಜಿ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಭಾಗವಹಿಸಿದ್ದರು. ಶುಕ್ರವಾರ ರಾತ್ರಿ ಕೆರ್ಲಪಾಲ್ ಪ್ರದೇಶದಲ್ಲಿ ಮಾವೋವಾದಿಗಳು ಉಳಿದಿರುವ ಬಗ್ಗೆ ಗುಪ್ತಚರ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ಆರಂಭಿಸಲಾಗಿತ್ತು. ಬೆಳಿಗ್ಗೆ ಭದ್ರತಾ ಪಡೆಗಳು ಮಾವೋವಾದಿಗಳ ಇರುವ ಪ್ರದೇಶವನ್ನು ಸಮೀಪಿಸಿದಾಗ ಗುಂಡಿನ ಚಕಮಕಿ ಆರಂಭವಾಯಿತು ಎಂದು ಐಜಿ ಸುಂದರ್‌ರಾಜ್ ಹೇಳಿದ್ದಾರೆ.

"ಇದುವರೆಗೆ ಘಟನಾ ಸ್ಥಳದಲ್ಲಿ ಮೃತಪಟ್ಟ16 ನಕ್ಸಲೀಯರನ್ನು ಗುರುತಿಸುವ ಕಾರ್ಯ ಮುಗಿದಿದೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ," ಎಂದು ಅವರು ತಿಳಿಸಿದರು.

ಶಸ್ತ್ರಾಸ್ತ್ರ ವಶಕ್ಕೆ

ಗುಂಡಿನ ಚಕಮಕಿಯಲ್ಲಿ ಇಬ್ಬರು ಡಿಆರ್‌ಜಿ ಯೋಧರು ಗಾಯಗೊಂಡಿದ್ದಾರೆ. ಅವರ ಸ್ಥಿತಿ ಸುಧಾರಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ ಭದ್ರತಾ ಪಡೆಗಳು ನಕ್ಸಲೀಯರ ಮೇಲೆ ಪ್ರಾಬಲ್ಯ ಸಾಧಿಸಿವೆ.

ಘಟನಾ ಸ್ಥಳದಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಎಕೆ-47 ರೈಫಲ್, ಸೆಲ್ಫ್-ಲೋಡಿಂಗ್ ರೈಫಲ್ (ಎಸ್‌ಎಲ್‌ಆರ್), ಇನ್ಸಾಸ್ ರೈಫಲ್, .303 ರೈಫಲ್, ರಾಕೆಟ್ ಲಾಂಚರ್, ಬ್ಯಾರೆಲ್ ಗ್ರೆನೇಡ್ ಲಾಂಚರ್ (ಬಿಜಿಎಲ್) ಮತ್ತು ಸ್ಫೋಟಕ ವಸ್ತುಗಳು ಸೇರಿವೆ.  

ಕಾರ್ಯಾಚರಣೆ ಜೋರು

ಸುಕ್ಮಾದ ಈ ಕಾರ್ಯಾಚರಣೆ ಛತ್ತೀಸ್‌ಗಢದಲ್ಲಿ, ವಿಶೇಷವಾಗಿ ಬಸ್ತರ್ ವಿಭಾಗದಲ್ಲಿ ನಕ್ಸಲೀಯ ಚಟುವಟಿಕೆಗಳನ್ನು ತಡೆಗಟ್ಟುವ ಕಾರ್ಯಾಚರಣೆ ಜೋರಾಗಿ ನಡೆಯುತ್ತಿದೆ ಸುಕ್ಮಾ ಮತ್ತು ಬೀಜಾಪುರ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿದೆ. ಈ  ಕಾರ್ಯಾಚರಣೆಯೊಂದಿಗೆ ಈ ವರ್ಷ ರಾಜ್ಯದಲ್ಲಿ ವಿವಿಧ ಗುಂಡಿನ ಚಕಮಕಿಗಳಲ್ಲಿ ಹತ್ಯೆಗೀಡಾದ ನಕ್ಸಲೀಯರ ಸಂಖ್ಯೆ 132ಕ್ಕೆ ಏರಿದೆ. ಇವರಲ್ಲಿ 116 ಮಂದಿ ಬಸ್ತರ್ ವಿಭಾಗ ಒಂದರಲ್ಲೇ ಹತ್ಯೆಯಾಗಿದ್ದಾರೆ.

ಬಸ್ತರ್ ವಲಯವು ಎಡಪಂಥೀಯ ಉಗ್ರವಾದದ ಭದ್ರಕೋಟೆ. 2025ರಲ್ಲಿ ಗುಪ್ತಚರ ಮಾಹಿತಿ ಮತ್ತು ರಾಜ್ಯ ಹಾಗೂ ಕೇಂದ್ರ ಪಡೆಗಳ ಸಂಯೋಜನೆಯೊಂದಿಗೆ ನಕ್ಸಲ್ ವಿರೋಧಿ ಕಾರ್ಯಾಚರಣೆ ಜೋರಾಗಿ ನಡೆಯುತ್ತಿದೆ. ಶನಿವಾರ ಸಂಜೆಯವರೆಗೆ ಶೋಧ ಕಾರ್ಯಾಚರಣೆ ನಡೆಯಲಿದೆ. ಛತ್ತೀಸ್‌ಗಢದಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ.

Tags:    

Similar News