MP Salary: ಗರಿಷ್ಠ ಪ್ರಮಾಣದಲ್ಲಿ ಮಾಜಿ, ಹಾಲಿ ಸಂಸದರ ವೇತನ, ಪಿಂಚಣಿ ಹೆಚ್ಚಳ!

ಈ ವೇತನ ಹೆಚ್ಚಳವನ್ನು 'ಸಂಸತ್ ಸದಸ್ಯರ ವೇತನ, ಭತ್ಯೆ ಮತ್ತು ಪಿಂಚಣಿ ಶಾಸನ'ದ ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಬಳಸಿಕೊಂಡು ಜಾರಿಗೆ ತರಲಾಗಿದೆ.;

Update: 2025-03-24 13:13 GMT

ಜಿಡಿಪಿ ಕುಸಿತ, ಹಣದುಬ್ಬರ ಹಾಗೂ ಉದ್ಯೋಗ ನಷ್ಟದಂತಹ ಸಮಸ್ಯೆಗಳ ಬಗ್ಗೆ ದೇಶದಲ್ಲಿ ಜೋರು ಚರ್ಚೆ ನಡೆಯುತ್ತಿರುವ ನಡುವೆಯೇ ಸಂಸದರು ಮತ್ತು ಮಾಜಿ ಸಂಸದರ ವೇತನ, ದೈನಂದಿ ಭತ್ಯೆ ಹಾಗೂ ಪಿಂಚಣಿಯನ್ನು ಶೇಕಡಾ 24ರಷ್ಟು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಸೋಮವಾರ (ಮಾರ್ಚ್​ 24ರಂದು) ಅಧಿಸೂಚನೆ ಹೊರಡಿಸಿದೆ. ಸಂಸದೀಯ ವ್ಯವಹಾರಗಳ ಸಚಿವಾಲಯವು ಸೋಮವಾರ ಹೊರಡಿಸಿರುವ ಪ್ರಕಟಣೆ ಪ್ರಕಾರ, ಏರಿಕೆಯಾಗಿರುವ ವೇತನ 2023ರ ಏಪ್ರಿಲ್ 1ರಿಂದ ಪೂರ್ವಾನ್ವಯದಂತೆ ಸಂಸದರಿಗೆ ಲಭಿಸಲಿದೆ.

ಸಂಸತ್​ ಅಧಿವೇಶನದಲ್ಲಿ ನಾನಾ ವಿಚಾರಗಳನ್ನು ಮುಂದಿಟ್ಟುಕೊಂಡು ಗಲಾಟೆ ಮಾಡುವ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರುಗಳು ಈ ಹೆಚ್ಚಳವನ್ನು ಯಾವುದೇ ತಕರಾರು ಇಲ್ಲದೇ ಸಮ್ಮತಿಸಿದ್ದಾರೆ. 

ಹೆಚ್ಚಳದ ಹಿನ್ನೆಲೆಯಲ್ಲಿ ಸದ್ಯ ಸಂಸತ್ತಿನ ಸದಸ್ಯರ ಮಾಸಿಕ ವೇತನ 1 ಲಕ್ಷ ರೂಪಾಯಿಯಿಂದ 1.24 ಲಕ್ಷ ರೂಪಾಯಿಗೆ ಏರಿಕೆಯಾಗಲಿದೆ. ದೈನಂದಿ ಭತ್ಯೆಯನ್ನು ಎರಡು ಸಾವಿರ ರೂಪಾಯಿಯಿಂದ ಎರಡು 2,500 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಮಾಜಿ ಸಂಸದರಿಗೆ ನೀಡಲಾಗುವ ಮೂಲ ಪಿಂಚಣಿಯನ್ನು ಇಪ್ಪತ್ತೈದು ಸಾವಿರ ರೂಪಾಯಿಯಿಂದ ಹೆಚ್ಚಿಸಿ 31  ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದರ ಜೊತೆಗೆ, ಐದು ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರತಿ ಹೆಚ್ಚುವರಿ ವರ್ಷಕ್ಕೆ ನೀಡಲಾಗುವ ಪಿಂಚಣಿಯನ್ನು ಎರಡು ಸಾವಿರ ರೂಪಾಯಿಯಿಂದ 2,500 ರೂಪಾಯಿಗೆ ಹೆಚ್ಚಿಸಲಾಗಿದೆ.

ಈ ವೇತನ ಹೆಚ್ಚಳವನ್ನು 'ಸಂಸತ್ ಸದಸ್ಯರ ವೇತನ, ಭತ್ಯೆ ಮತ್ತು ಪಿಂಚಣಿ ಶಾಸನ'ದ ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಬಳಸಿಕೊಂಡು ಜಾರಿಗೆ ತರಲಾಗಿದೆ. ಇದಕ್ಕೆ 1961ರ ಆದಾಯ ತೆರಿಗೆ ಶಾಸನದಲ್ಲಿ ನಿಗದಿ ಪಡಿಸಲಾದ 'ವೆಚ್ಚ ಹಣದುಬ್ಬರ ಸೂಚ್ಯಂಕ'ವನ್ನು ಆಧಾರವಾಗಿ ತೆಗೆದುಕೊಳ್ಳಲಾಗಿದೆ.

ಈ ನಿರ್ಧಾರದೊಂದಿಗೆ ಸಂಸದರ ಆರ್ಥಿಕ ಸೌಲಭ್ಯಗಳಲ್ಲಿ ಗಣನೀಯ ಹೆಚ್ಚಳ ಕಂಡಿದೆ. 2018ರ ನಂತರ ಇದೇ ಮೊದಲ ಬಾರಿಗೆ ಸಂಸದರ ವೇತನ ಮತ್ತು ಪಿಂಚಣಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ.

ಸಂಸತ್ತಿನ ಎರಡೂ ಸದನಗಳಲ್ಲಿ ಈ ನಿರ್ಧಾರವನ್ನು ಈಗಾಗಲೇ ಅನುಮೋದಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ಹೆಚ್ಚಳವು ಸಂಸತ್ತಿನ ಪ್ರಸ್ತುತ ಮತ್ತು ಹಿಂದಿನ ಎಲ್ಲಾ ಸದಸ್ಯರಿಗೆ ಅನ್ವಯಿಸುತ್ತದೆ.

Tags:    

Similar News