ಕೇಂದ್ರದಿಂದ 16ನೇ ಜನಗಣತಿಗೆ ಅಧಿಸೂಚನೆ: 2027ರಲ್ಲಿ ಜಾತಿ ಗಣತಿಯೂ ಸೇರ್ಪಡೆ
ಈ ಬೃಹತ್ ಜನಗಣತಿ ಕಾರ್ಯವನ್ನು ದೇಶಾದ್ಯಂತ ಸುಮಾರು 34 ಲಕ್ಷ ಗಣತಿದಾರರು ಮತ್ತು ಮೇಲ್ವಿಚಾರಕರು, ಹಾಗೂ 1.3 ಲಕ್ಷ ಜನಗಣತಿ ಕಾರ್ಯಕರ್ತರು ಡಿಜಿಟಲ್ ಉಪಕರಣಗಳನ್ನು ಬಳಸಿ ನಿರ್ವಹಿಸಲಿದ್ದಾರೆ.;
ಕೇಂದ್ರ ಸರ್ಕಾರವು ಸೋಮವಾರ (ಜೂನ್ 16) ಭಾರತದ 16ನೇ ಜನಗಣತಿಗೆ ಅಧಿಸೂಚನೆ ಹೊರಡಿಸಿದೆ. ಈ ಮಹತ್ವದ ಜನಗಣತಿ 2027ರಲ್ಲಿ ಜಾತಿ ಗಣತಿಯೊಂದಿಗೆ ನಡೆಯಲಿದೆ. 2011ರಲ್ಲಿ ಕೊನೆ ಬಾರಿ ಜಾತಿ ಗಣತಿ ನಡೆದಿದ್ದು, 16 ವರ್ಷಗಳ ಬಳಿಕ ಬೃಹತ್ ಪ್ರಕ್ರಿಯೆ ನಡೆಯುಲಿದೆ.
ಜನಗಣತಿಯು ಎರಡು ಹಂತಗಳಲ್ಲಿ ನಡೆಯಲಿದೆ. ಲಡಾಖ್, ಜಮ್ಮು ಮತ್ತು ಕಾಶ್ಮೀರದ ಹಿಮಾಚ್ಛಾದಿತ ಪ್ರದೇಶಗಳು, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಈ ಪ್ರಕ್ರಿಯೆಯು 2026ರ ಅಕ್ಟೋಬರ್ 1ರಂದು ಆರಂಭವಾಗಲಿದೆ. ದೇಶದ ಉಳಿದ ಭಾಗಗಳಲ್ಲಿ 2027ರಂದು ಮಾರ್ಚ್ 1ರಂದು ಆರಂಭವಾಗಲಿದೆ.
ಬೃಹತ್ ಕಾರ್ಯಾಚರಣೆ ಮತ್ತು ಡಿಜಿಟಲ್ ವಿಧಾನ:
ಈ ಬೃಹತ್ ಜನಗಣತಿ ಕಾರ್ಯವನ್ನು ದೇಶಾದ್ಯಂತ ಸುಮಾರು 34 ಲಕ್ಷ ಗಣತಿದಾರರು ಮತ್ತು ಮೇಲ್ವಿಚಾರಕರು, ಹಾಗೂ 1.3 ಲಕ್ಷ ಜನಗಣತಿ ಕಾರ್ಯಕರ್ತರು ಡಿಜಿಟಲ್ ಉಪಕರಣಗಳನ್ನು ಬಳಸಿ ನಿರ್ವಹಿಸಲಿದ್ದಾರೆ. ಈ ಬಾರಿಯ ಜನಗಣತಿಯಲ್ಲಿ ಜಾತಿ ಗಣತಿಯನ್ನೂ ಸೇರಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸಾರ್ವಜನಿಕರಿಗೆ ಸ್ವಯಂ-ಗಣತಿಯ ಸೌಲಭ್ಯವನ್ನೂ ಒದಗಿಸಲಾಗುತ್ತದೆ.
ಸಿದ್ಧತೆಗಳ ಪರಿಶೀಲನೆ:
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ (ಜೂನ್ 15) ದೆಹಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ, ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತ ಶ್ರೀ ಮೃತುಂಜಯ ಕುಮಾರ್ ನಾರಾಯಣ್ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಜನಗಣತಿಯ ಸಿದ್ಧತೆಗಳನ್ನು ಪರಿಶೀಲಿಸಿದರು.
ಜನಗಣತಿ ಪ್ರಕ್ರಿಯೆಯು ಎರಡು ಪ್ರಮುಖ ಹಂತಗಳನ್ನು ಒಳಗೊಂಡಿದೆ
* ಮನೆಗಳ ಪಟ್ಟಿ (House-listing Operations - HLO): ಈ ಹಂತದಲ್ಲಿ, ಪ್ರತಿ ಮನೆಯ ಪರಿಸ್ಥಿತಿಗಳು, ಆಸ್ತಿಗಳು ಮತ್ತು ಸೌಕರ್ಯಗಳ ಮಾಹಿತಿಯನ್ನು ಸಂಗ್ರಹಿಸಲಾಗುವುದು.
* ಜನಸಂಖ್ಯೆ ಗಣತಿ (Population Enumeration - PE): ಎರಡನೇ ಹಂತದಲ್ಲಿ, ಪ್ರತಿ ಮನೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಜನಸಂಖ್ಯಾಶಾಸ್ತ್ರೀಯ, ಸಾಮಾಜಿಕ-ಆರ್ಥಿಕ, ಸಾಂಸ್ಕೃತಿಕ ಮತ್ತು ಇತರ ವಿವರಗಳನ್ನು ಸಂಗ್ರಹಿಸಲಾಗುವುದು.
ಐತಿಹಾಸಿಕ ಮಹತ್ವ ಮತ್ತು ದತ್ತಾಂಶ ಭದ್ರತೆ
ಇದು 16ನೇ ಮತ್ತು ಸ್ವಾತಂತ್ರ್ಯದ ನಂತರ 8ನೇಯ ಜನಗತಣಿ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ. ಮಾಹಿತಿ ಸಂಗ್ರಹ ಸಾಗಣೆ ಮತ್ತು ಸಂಗ್ರಹಣೆಯ ಸಂದರ್ಭದಲ್ಲಿ ದತ್ತಾಂಶ ಭದ್ರತೆಗಾಗಿ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.