ವಯನಾಡು ದುರಂತಕ್ಕೆ ಕೇರಳವನ್ನು ದೂಷಿಸಲು ಕೇಂದ್ರ ಸಂಚು: ಸಚಿವ

ವಯನಾಡಿನಲ್ಲಿ ಭೂಕುಸಿತದ ಬಗ್ಗೆ ಕೇರಳಕ್ಕೆ ಎಚ್ಚರಿಕೆ ನೀಡಲಾಗಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಸುಳ್ಳು ಎಂದು ಮಲಯಾಳಂ ಮಾಧ್ಯಮಗಳು ಹೇಳಿವೆ ಎಂದು ರಾಜೀವ್ ಹೇಳಿದರು.

Update: 2024-08-06 12:31 GMT

ʻಕೇಂದ್ರ ಪರಿಸರ ಸಚಿವಾಲಯವು ವಿಜ್ಞಾನಿಗಳಿಂದ ಕೇರಳ ವಿರೋಧಿ ಲೇಖನಗಳನ್ನು ಕೇಳುವ ಮೂಲಕ ವಯನಾಡ್ ಭೂಕುಸಿತಕ್ಕೆ ಕೇರಳ ಸರ್ಕಾರವನ್ನು ದೂಷಿಸಲು ಪಿತೂರಿ ನಡೆಸಿದೆ,ʼ ಎಂದು ಕೇರಳದ ಕೈಗಾರಿಕಾ ಸಚಿವ ಪಿ. ರಾಜೀವ್ ಮಂಗಳವಾರ ಆರೋಪಿಸಿದ್ದಾರೆ. 

ʻಆದರೆ, ಕೇಂದ್ರದ ಮನವಿಯನ್ನು ಯಾರೂ ಪುರಸ್ಕರಿಸದೆ ಇದ್ದಾಗ, ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಸುಳ್ಳು ಹೇಳಿಕೆಗೆ ಮುಂದಾದರು,ʼ ಎಂದು ಅವರು ಹೇಳಿದ್ದಾರೆ. 

ಕೇರಳ ಸರ್ಕಾರವು ಪರಿಸರ ದುರ್ಬಲ ಪ್ರದೇಶದಲ್ಲಿ ಅಕ್ರಮವಾಗಿ ಮಾನವ ವಾಸಸ್ಥಾನ ವಿಸ್ತರಣೆ ಮತ್ತು ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿತು. ಇದರಿಂದ ವಯನಾಡಿನಲ್ಲಿ ವಿನಾಶಕಾರಿ ಭೂಕುಸಿತ ಸಂಭವಿಸಿತು ಎಂಬ ಯಾದವ್ ಅವರ ಹೇಳಿಕೆಯನ್ನು ರಾಜೀವ್ ಉಲ್ಲೇಖಿಸಿದ್ದಾರೆ. 

ಕೇರಳದ ವಿರುದ್ಧ ಆರೋಪ: ವಸತಿಗೆ ನಿರ್ಮಾಣಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ ಸರ್ಕಾರವು ಮಣ್ಣಿನ ರಚನೆ, ಬಂಡೆಗಳ ಸ್ಥಿತಿ, ಭೂರೂಪಶಾಸ್ತ್ರ, ಪರ್ವತದ ಇಳಿಜಾರುಗಳು ಮತ್ತು ಸಸ್ಯಗಳ ರಚನೆಯಂಥ ನಿರ್ಣಾಯಕ ಪರಿಸರ ಅಂಶಗಳನ್ನು ನಿರ್ಲಕ್ಷಿಸಿದೆ. ಜೊತೆಗೆ, ಅತಿವೃಷ್ಟಿಯಿಂದ ಅವಘಡ ಸಂಭವಿಸಿತು,ʼ ಎಂದು ಯಾದವ್ ಹೇಳಿದ್ದರು.

ʻಇಡೀ ರಾಜ್ಯ ರಕ್ಷಣಾ ಪ್ರಯತ್ನಗಳಲ್ಲಿ ತೊಡಗಿರುವಾಗ ಸಂಚು ರೂಪಿಸಲಾಗಿದೆ,ʼ ಎಂದು ರಾಜೀವ್, ಎಕ್ಸ್‌ನ ಪೋಸ್ಟ್‌ನಲ್ಲಿ ದೂರಿದ್ದಾರೆ. ಪ್ರೆಸ್ ಇನ್ಫರ್ಮೇಶನ್ ಬ್ಯೂರೋ ವಿಜ್ಞಾನಿಗಳಿಂದ ಕೇರಳ ವಿರೋಧಿ ಲೇಖನಗಳನ್ನು ಕೇಳುವ ಪ್ರಯತ್ನ ನಡೆಸಿದೆ ಎಂಬ ವರದಿಗಳನ್ನು ರಾಜೀವ್‌ ಉಲ್ಲೇಖಿಸಿದರು. ಕೇರಳಕ್ಕೆ ಭೂಕುಸಿತದ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸುಳ್ಳು ಹೇಳಿಕೆಯನ್ನು ಮಲಯಾಳಂ ಮಾಧ್ಯಮಗಳು ಈಗಾಗಲೇ ತಳ್ಳಿಹಾಕಿವೆ ಎಂದು ಹೇಳಿದರು. 

ಅಗತ್ಯ ಮುನ್ಸೂಚನೆ ನೀಡುವಲ್ಲಿ ಕೇಂದ್ರ ವಿಫಲವಾಗಿದೆ. ಮುಚ್ಚಿಹಾಕುವ ಈ ಪ್ರಯತ್ನ ಭವಿಷ್ಯದಲ್ಲಿ ಬಯಲಾಗಲಿದೆ. ಮಾನವ ಹಸ್ತಕ್ಷೇಪವಿಲ್ಲದ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದ ವೈಜ್ಞಾನಿಕ ಅಧ್ಯಯನಕ್ಕೆ ರಾಜ್ಯ ಸರ್ಕಾರ ಶ್ರಮಿಸುತ್ತಿದೆ ಎಂದು ಎಕ್ಸ್‌ನಲ್ಲಿ ಹೇಳಿದ್ದಾರೆ. 

Tags:    

Similar News