Union Budget 2024: ಬಿಹಾರ, ಆಂಧ್ರ, ಒಡಿಶಾಕ್ಕೆ ಸಿಂಹಪಾಲು; ಯೋಜನೆಗಳ ಅನುಷ್ಠಾನವೇ ಸವಾಲು
ಆಂಧ್ರಪ್ರದೇಶ, ಬಿಹಾರ ಮತ್ತು ಒಡಿಶಾಗೆ ನೀಡಿದ ಭರಪೂರ ಅನುದಾನ ಲಭ್ಯವಾಗಿದೆ. ಕೇಂದ್ರದ ಆರ್ಥಿಕ ಬದ್ಧತೆಗಳು ಮತ್ತು ಯೋಜನಾ ಪ್ರಕಟಣೆಗಳು ಶ್ಲಾಘನೀಯ. ಆದರೆ, ಭೂಸ್ವಾಧೀನ, ಕೆಂಪು ಪಟ್ಟಿ ಮತ್ತು ಅಧಿಕಾರಶಾಹಿಯ ಜಡತ್ವ ಸೇರಿದಂತೆ ಸವಾಲುಗಳನ್ನು ಜಯಿಸುವುದು ನಿಜವಾದ ಪರೀಕ್ಷೆ.;
ಎನ್‌ಡಿಎ ಸರ್ಕಾರ ತನ್ನ ಸಮ್ಮಿಶ್ರ ಪಾಲುದಾರರಾದ ಟಿಡಿಪಿ ಮತ್ತು ಜೆಡಿ (ಯು) ಗೆ ನೀಡಿದ ಭರವಸೆಗಳನ್ನು ಈಡೇರಿಸಲು ಕ್ರಮ ಕೈಗೊಂಡಿದೆ.
ಅಮರಾವತಿ, ಪೊಲಾವರಂ ಯೋಜನೆಯ ಸವಾಲು: ಆಂಧ್ರಪ್ರದೇಶದ ಹೊಸ ರಾಜಧಾನಿ ಅಮರಾವತಿಯನ್ನು ಅಭಿವೃದ್ಧಿಪಡಿಸಲು ಕೇಂದ್ರವು 15,000 ಕೋಟಿ ರೂ. ನೀಡಿದೆ. ಇದು ವಿಶ್ವ ದರ್ಜೆಯ ನಗರವನ್ನು ನಿರ್ಮಿಸುವ ಮಹತ್ವದ ಹೂಡಿಕೆಯಾಗಿದೆ. ಆದರೆ, ಭೂಸ್ವಾಧೀನ ಮತ್ತು ಯೋಜನೆಗಳ ಕಾರ್ಯಗತಗೊಳಿಸುವಿಕೆ ವಿಳಂಬದಿಂದಾಗಿ, ಪ್ರಗತಿ ನಿಧಾನವಾಗಿದೆ. ಧನಸಹಾಯ ಸಕಾರಾತ್ಮಕ ಹೆಜ್ಜೆಯಾಗಿದ್ದರೂ, ಅನುದಾನದ ಪರಿಣಾಮಕಾರಿ ಬಳಕೆ ನಿರ್ಣಾಯಕ ಸವಾಲಾಗಿ ಉಳಿಯಲಿದೆ.
ಆಂಧ್ರಪ್ರದೇಶದ ಪ್ರಮುಖ ನೀರಾವರಿ ಉಪಕ್ರಮವಾದ ಪೊಲಾವರಂ ಯೋಜನೆಗೆ 11,500 ಕೋಟಿ ರೂ. ನೀಡಲಾಗಿದೆ. ಯೋಜನೆ ನೀರಿನ ಕೊರತೆ ತೀರಿಸಲು ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಪ್ರಮುಖ ಹೆಜ್ಜೆಯಾಗಿದೆ. ಆದರೆ, ಪರಿಸರ ಅನುಮತಿ ಮತ್ತು ಪುನರ್ವಸತಿ ಸಮಸ್ಯೆಗಳಿಂದ ಯೋಜನೆ ವಿಳಂಬವಾಗಿದೆ.
ಬಿಹಾರದಲ್ಲಿ ರಸ್ತೆಗೆ ಭೂಸ್ವಾಧೀನ ಸಮಸ್ಯೆ: ಬಿಹಾರದ ಪಾಟ್ನಾ-ಪೂರ್ಣಿಯಾ ಎಕ್ಸ್‌ಪ್ರೆಸ್‌ವೇ ಮತ್ತು ಬೋಧಗಯಾ-ರಾಜ್‌ಗೀರ್-ವೈಶಾಲಿ-ದರ್ಭಾಂಗ ಎಕ್ಸ್‌ಪ್ರೆಸ್‌ವೇ ಸೇರಿದಂತೆ ಹೆದ್ದಾರಿ ಯೋಜನೆಗಳಿಗೆ 26,000 ಕೋಟಿ ರೂ. ನಿಗದಿಪಡಿಸಲಾಗಿದೆ. ಈ ಯೋಜನೆಗಳು ಸಂಪರ್ಕದ ಸುಧಾರಣೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತವೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಭೂಸ್ವಾಧೀನ ಮತ್ತು ನಿರ್ವಹಣೆಯುಲ್ಲಿನ ಸವಾಲುಗಳಿಂದ ಈ ಮಹತ್ವಾಕಾಂಕ್ಷೆಯ ಯೋಜನೆಗಳು ವಿಳಂಬಗೊಳ್ಳಬಹುದು.
ಬಿಹಾರದಲ್ಲಿ ಹೊಸ ವಿಮಾನ ನಿಲ್ದಾಣ, ವೈದ್ಯಕೀಯ ಕಾಲೇಜು ಮತ್ತು ಕ್ರೀಡಾ ಮೂಲಸೌಕರ್ಯಗಳ ಘೋಷಣೆಯಿಂದ ಸಾರಿಗೆ, ಆರೋಗ್ಯ ಮತ್ತು ಕ್ರೀಡಾ ಸೌಲಭ್ಯಗಳು ಹೆಚ್ಚಲಿದ್ದು, ರಾಜ್ಯದ ಒಟ್ಟಾರೆ ಬೆಳವಣಿಗೆಗೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ.
ಅಸಮರ್ಪಕ ಮೂಲಸೌಕರ್ಯ, ಕೆಂಪು ಪಟ್ಟಿ: ಗಯಾದಲ್ಲಿ ಅಮೃತಸರ-ಕೋಲ್ಕತ್ತಾ ಕೈಗಾರಿಕಾ ಕಾರಿಡಾರ್‌ಗೆ ಬೆಂಬಲವು ಬಿಹಾರದಲ್ಲಿ ಕೈಗಾರಿಕಾ ಚಟುವಟಿಕೆಯನ್ನು ಉತ್ತೇಜಿಸುವ ಕಾರ್ಯತಂತ್ರದ ಭಾಗವಾಗಿದೆ. ಈ ಉಪಕ್ರಮವು ಉದ್ಯೋಗಾವಕಾಶ ಸೃಷ್ಟಿಸುವ ಮತ್ತು ಹೂಡಿಕೆಗಳನ್ನು ಆಕರ್ಷಿಸುವ ನಿರೀಕ್ಷೆಯಿದೆ. ಆದರೆ, ಅಸಮರ್ಪಕ ಮೂಲಸೌಕರ್ಯ ಮತ್ತು ಕೆಂಪು ಪಟ್ಟಿಯಿಂದ ಬೆಳವಣಿಗೆಗಳಿಗೆ ಅಡ್ಡಿಯಾಗಬಹುದು.
ಭಾಗಲ್ಪುರದ ಪಿರ್ಪೈಂಟಿಯಲ್ಲಿ 2,400 ಮೆಗಾವ್ಯಾಟ್ ವಿದ್ಯುತ್ ಸ್ಥಾವರಕ್ಕೆ 21,400 ಕೋಟಿ ರೂ.ಹೂಡಿಕೆಯು ರಾಜ್ಯದ ಇಂಧನ ಅಗತ್ಯಗಳನ್ನು ಪೂರೈಸುವ ಗುರಿ ಹೊಂದಿದೆ. ಸಮರ್ಥವಾಗಿ ಕಾರ್ಯಗತಗೊಳಿಸಿದರೆ, ಈ ಯೋಜನೆಯು ಬಿಹಾರದಲ್ಲಿ ವಿದ್ಯುತ್ ಸರಬರಾಜನ್ನು ಗಣನೀಯವಾಗಿ ಸುಧಾರಿಸುತ್ತದೆ, ಕೈಗಾರಿಕೆ ಮತ್ತು ವಸತಿ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.
ಬಿಹಾರಕ್ಕೆ ಪ್ರವಾಹ ನೆರವು: ಪ್ರವಾಹ ನೆರವು ಪಡೆಯುವ ರಾಜ್ಯಗಳ ಪಟ್ಟಿಯಲ್ಲಿ ಬಿಹಾರವೂ ಸೇರಿದೆ. ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮ ಮತ್ತು ಕೋಸಿ-ಮೆಚಿ ಅಂತಾರಾಜ್ಯ ಜೋಡಣೆಯಂಥ ಯೋಜನೆಗಳಿಗೆ 11,500 ಕೋಟಿ ರೂ. ಮೊತ್ತ ನೀಡಲಾಗಿದೆ.
ಒಡಿಶಾಗೆ ಅನುಕೂಲಕರ ಪೂರ್ವೋದಯ ಉಪಕ್ರಮ: ಪೂರ್ವದ ರಾಜ್ಯಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿರುವ ಪೂರ್ವೋದಯ ಉಪಕ್ರಮದಿಂದ ಒಡಿಶಾ ಗಣನೀಯವಾಗಿ ಪ್ರಯೋಜನ ಪಡೆಯಲಿದೆ. ರಾಜ್ಯದಲ್ಲಿ ಸಂಯೋಜಿತ ಸ್ಟೀಲ್ ಹಬ್ ಸ್ಥಾಪನೆ ಮೂಲಕ 2030 ರ ವೇಳೆಗೆ ಉಕ್ಕಿನ ಉತ್ಪಾದನೆ ಸಾಮರ್ಥ್ಯವನ್ನು ವಾರ್ಷಿಕ 100 ದಶಲಕ್ಷ ಟನ್‌ಗಳಿಗೆ ಹೆಚ್ಚಿಸಲು ಯೋಜಿಸಲಾಗಿದೆ. ಇದೊಂದು ಹೆಗ್ಗುರುತು ಉಪಕ್ರಮ. ಇದು ಒಡಿಷಾವನ್ನು ದೇಶದ ಉಕ್ಕು ಉದ್ಯಮದಲ್ಲಿ ನಿರ್ಣಾಯಕ ಆಟಗಾರನಾಗಿರಿಸುತ್ತದೆ.
ಆಂಧ್ರಪ್ರದೇಶ, ಬಿಹಾರ ಮತ್ತು ಒಡಿಶಾಗೆ ನೀಡಿದ ಭರವಸೆಗಳನ್ನು ಈಡೇರಿಸುವ ಸರ್ಕಾರದ ಪ್ರಯತ್ನಗಳು ಪ್ರಾದೇಶಿಕ ಅಭಿವೃದ್ಧಿ ಮತ್ತು ಸಮ್ಮಿಶ್ರ ರಾಜಕಾರಣದ ಕಾರ್ಯತಂತ್ರಕ್ಕೆ ಅನುಗುಣವಾಗಿವೆ. ಹಣಕಾಸಿನ ಬದ್ಧತೆ ಮತ್ತು ಯೋಜನೆಗಳ ಪ್ರಕಟಣೆ ಶ್ಲಾಘನೀಯವಾಗಿದ್ದರೂ, ನಿಜವಾದ ಪರೀಕ್ಷೆ ಪರಿಣಾಮಕಾರಿ ಅನುಷ್ಠಾನದಲ್ಲಿ ಇರುತ್ತದೆ.