ಬಿಎಂಡಬ್ಲ್ಯು -ಬೈಕ್ ಡಿಕ್ಕಿ: ಕೇಂದ್ರ ಹಣಕಾಸು ಇಲಾಖೆ ಅಧಿಕಾರಿ ದುರ್ಮರಣ, ಚಾಲಕಿ ಬಂಧನ
ಮೃತರನ್ನು ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಉಪ ಕಾರ್ಯದರ್ಶಿ ನವಜೋತ್ ಸಿಂಗ್ (52) ಎಂದು ಗುರುತಿಸಲಾಗಿದೆ.;
ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಐಷಾರಾಮಿ ಬಿಎಂಡಬ್ಲ್ಯು ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಕೇಂದ್ರ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ದೆಹಲಿಯಲ್ಲಿ ಭಾನುವಾರ ನಡೆದಿದೆ. ಈ ಸಂಬಂಧ ಕಾರು ಚಲಾಯಿಸುತ್ತಿದ್ದ ಗಗನ್‌ಪ್ರೀತ್ ಕೌರ್ ಎಂಬ ಮಹಿಳೆಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಮೃತರನ್ನು ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಉಪ ಕಾರ್ಯದರ್ಶಿ ನವಜೋತ್ ಸಿಂಗ್ (52) ಎಂದು ಗುರುತಿಸಲಾಗಿದೆ.
ಹರಿ ನಗರ ನಿವಾಸಿ ನವಜೋತ್ ಸಿಂಗ್ ಅವರು, ತಮ್ಮ ಪತ್ನಿ ಸಂದೀಪ್ ಕೌರ್ ಅವರೊಂದಿಗೆ ಬೈಕ್‌ನಲ್ಲಿ ಬಂಗ್ಲಾ ಸಾಹೇಬ್ ಗುರುದ್ವಾರಕ್ಕೆ ತೆರಳಿ ಮನೆಗೆ ವಾಪಸಾಗುತ್ತಿದ್ದರು. ದೆಹಲಿ ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣದ ಬಳಿ, ವೇಗವಾಗಿ ಬಂದ BMW ಕಾರು ಇವರ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನವಜೋತ್ ಸಿಂಗ್ ಮತ್ತು ಅವರ ಪತ್ನಿ ಬೈಕ್‌ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಂಬುಲೆನ್ಸ್ ಬರುವುದು ತಡವಾದ ಕಾರಣ, ಅಪಘಾತ ಎಸಗಿದ ಗಗನ್‌ಪ್ರೀತ್ ಮತ್ತು ಅವರ ಪತಿ, ಗಾಯಾಳುಗಳನ್ನು ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಹತ್ತಿರದ ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನವಜೋತ್ ಸಿಂಗ್ ಅವರು ಪ್ರಜ್ಞೆ ತಪ್ಪಿದ್ದರು. ಈ ವೇಳೆ, ಹತ್ತಿರದ ಆಸ್ಪತ್ರೆಗೆ ದಾಖಲಿಸುವಂತೆ ಅವರ ಪತ್ನಿ ಸಂದೀಪ್ ಕೌರ್ ಅವರು ಕಾರು ಚಾಲಕಿ ಗಗನ್‌ಪ್ರೀತ್‌ಗೆ ಪದೇ ಪದೇ ಮನವಿ ಮಾಡಿಕೊಂಡರೂ, ಅವರು ಅದನ್ನು ನಿರ್ಲಕ್ಷಿಸಿ, ಘಟನಾ ಸ್ಥಳದಿಂದ ಸುಮಾರು 19 ಕಿ.ಮೀ ದೂರದಲ್ಲಿರುವ ತಮ್ಮ ಸಂಬಂಧಿಕರಿಗೆ ಸೇರಿದ ನ್ಯೂಲೈಫ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿ, ತೀವ್ರ ರಕ್ತಸ್ರಾವದಿಂದ ನವಜೋತ್ ಸಿಂಗ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಮಯಕ್ಕೆ ಸರಿಯಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರೆ, ಬಹುಶಃ ತಮ್ಮ ಪತಿಯನ್ನು ಉಳಿಸಿಕೊಳ್ಳಬಹುದಿತ್ತು ಎಂದು ಸಂದೀಪ್ ಕೌರ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯಲ್ಲಿ ಗಗನ್‌ಪ್ರೀತ್, ಅವರ ಪತಿ, ಮತ್ತು ನವಜೋತ್ ಸಿಂಗ್ ಅವರ ಪತ್ನಿ ಸಂದೀಪ್ ಕೌರ್ ಕೂಡ ಗಾಯಗೊಂಡಿದ್ದಾರೆ. ಈ ಕುರಿತು ಹರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.