Modi 3.0| ಲೋಕಸಭೆ ಸ್ಪೀಕರ್ ಚುನಾವಣೆಯನ್ನು ಎನ್‌ಡಿಎ ವಿಸ್ತರಣೆಗೆ ಬಳಸಿಕೊಂಡ ಬಿಜೆಪಿ

ಚುನಾವಣೆಯಲ್ಲಿ ಎನ್‌ಡಿಎಗೆ ನೆರವಾದ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮತ್ತು ವೈಎಸ್‌ಆರ್‌ ಸಿಪಿಯಂತಹ ಸಣ್ಣ ಪಕ್ಷಗಳ ಮೂಲಕ ಎನ್‌ಡಿಎ ವಿಸ್ತರಣೆಯನ್ನು ಆರಂಭಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

By :  Gyan Verma
Update: 2024-06-26 11:54 GMT
ಬಿಜೆಪಿ ನಾಯಕ ಓಂ ಬಿರ್ಲಾ ಅವರ ಮರುಆಯ್ಕೆ ಮೂಲಕ ಎನ್‌ಡಿಎ ಸದ್ದಿಲ್ಲದೆ ತನ್ನನ್ನು ವಿಸ್ತರಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಮತ್ತು ಎನ್‌ಡಿಎ ನಾಯಕರು ಹೇಳುತ್ತಾರೆ.

ಆಡಳಿತಾರೂಢ ಎನ್‌ಡಿಎ, ಬಿಜೆಪಿಯ ಹಿರಿಯ ನಾಯಕ ಓಂ ಬಿರ್ಲಾ ಅವರನ್ನು ಸುಲಭವಾಗಿ ಲೋಕಸಭೆಯ ಸ್ಪೀಕರ್ ಆಗಿ ಮರುಆಯ್ಕೆ ಮಾಡಿದ್ದು, ವಿರೋಧ ಪಕ್ಷದ ದೌರ್ಬಲ್ಯಗಳನ್ನು ಬಹಿರಂಗಪಡಿಸಿದೆ.

ಈ ಪ್ರಕ್ರಿಯೆಯಲ್ಲಿ ಬಿಜೆಪಿಯು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮತ್ತು ವೈಎಸ್‌ಆರ್‌ಸಿಪಿಯಂತಹ ಚುನಾವಣೆಯಲ್ಲಿ ಸಹಾಯ ಮಾಡಿದ ಸಣ್ಣ ಪಕ್ಷಗಳನ್ನು ಒಳಗೊಳ್ಳುವ ಮೂಲಕ ಎನ್‌ಡಿಎ ವಿಸ್ತರಣೆಯನ್ನು ಆರಂಭಿಸುವಲ್ಲಿ ಯಶಸ್ವಿಯಾಗಿದೆ. 

ಬಿರ್ಲಾ ಅವರಿಗೆ ಕನಿಷ್ಟ ಐವರು ಸ್ವತಂತ್ರ ಸಂಸದರು ಬೆಂಬಲ ನೀಡಿದರು.

ಪ್ರಮುಖ ಗೆಲುವು: ಅನಿಶ್ಚಿತತೆ, ಊಹಾಪೋಹಗಳ ನಂತರ ನರೇಂದ್ರ ಮೋದಿ ಸರ್ಕಾರವು ಚುನಾವಣೆಯಲ್ಲಿ ಗೆದ್ದಿರುವುದು ಮಾತ್ರವಲ್ಲದೆ, ಪ್ರತಿಪಕ್ಷಗಳನ್ನು ವಿಭಜಿಸುವಲ್ಲಿ ಯಶಸ್ವಿಯಾಗಿದೆ ಎಂದು ಬಿಜೆಪಿ ನಾಯಕರು ಭಾವಿಸಿದ್ದಾರೆ.

ಸ್ಪೀಕರ್ ಹುದ್ದೆಗೆ ಸಂಬಂಧಿಸಿದಂತೆ ಎನ್‌ಡಿಎಯಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬ ಕಾಂಗ್ರೆಸ್ ಮತ್ತು ಅದರ ಪಾಲುದಾರರ ಪ್ರಚಾರ ನೆಲ ಕಚ್ಚಿದೆ ಮತ್ತು ಟಿಡಿಪಿ ನಾಯಕ ಎನ್. ಚಂದ್ರಬಾಬು ನಾಯ್ಡು ಅವರು ಸಭಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಸುಳ್ಳು ಎಂದು ಸಾಬೀತಾಗಿದೆ ಎಂಬುದನ್ನು ಬಿರ್ಲಾ ಅವರ ಗೆಲುವು ಸೂಚಿಸುತ್ತದೆ ಎಂದು ಅವರು ನಂಬುತ್ತಾರೆ.

ʻಬಿರ್ಲಾ ಅವರ ಆಯ್ಕೆ ಬಿಜೆಪಿ ಮತ್ತು ಎನ್‌ಡಿಎಗೆ ಅತ್ಯಂತ ಮಹತ್ವದ ಗೆಲುವು. ಕಾಂಗ್ರೆಸ್ ನಾಯಕತ್ವ ಮಾಧ್ಯಮಗಳಲ್ಲಿ ಮಾಡಿರುವ ಪ್ರಚಾರಕ್ಕಿಂತ ಭಿನ್ನವಾಗಿ, ಬಿಜೆಪಿ ಎಲ್ಲ ಎನ್‌ಡಿಎ ಪಾಲುದಾರರೊಂದಿಗೆ ಉತ್ತಮ ಮತ್ತು ಸೌಹಾರ್ದಯುತ ಬಾಂಧವ್ಯವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಎನ್‌ಡಿಎಯಲ್ಲಿ ಒಡಕು ಮೂಡಿಸುವ ಪ್ರಯತ್ನ ನೆಲಕಚ್ಚಿದೆ,ʼ ಎಂದು ರಾಜ್ಯಸಭೆ ಬಿಜೆಪಿ ಸದಸ್ಯ ಲಹರ್ ಸಿಂಗ್ ಸಿರೋಯಾ ದ ಫೆಡರಲ್‌ಗೆ ತಿಳಿಸಿದರು.

ಕಾಂಗ್ರೆಸ್ ತಂತ್ರಕ್ಕೆ ಪ್ರತಿಕ್ರಿಯೆ ಇಲ್ಲ: ಲೋಕಸಭೆಯಲ್ಲಿ ಉಪಸಭಾಪತಿ ಹುದ್ದೆಗೆ ಕಾಂಗ್ರೆಸ್ ರೂಪಿಸುತ್ತಿರುವ ತಂತ್ರಗಳಿಗೆ ಪ್ರತಿಕ್ರಿಯಿಸದೆ ಇರಲು ಬಿಜೆಪಿ ನಿರ್ಧರಿಸಿದೆ. ʻವಿರೋಧ ಪಕ್ಷಗಳ ಮೈತ್ರಿಕೂಟದ ವಿಭಜನೆಯು ಈಗ ಬಯಲಿದೆ ಬಂದಿದೆ. ಆದರೆ, ಎನ್‌ಡಿಎ ಸಮಾನ ಮನಸ್ಕ ಪಕ್ಷಗಳ ಸಹಾಯದಿಂದ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ,ʼ ಎಂದು ಸಿರೋಯಾ ಹೇಳಿದರು.

ಧ್ವನಿಮತದ ಮೂಲಕ ಸ್ಪೀಕರ್ ಆಯ್ಕೆಯಾಗಿದ್ದು, ಲೋಕಸಭೆಯಲ್ಲಿ ಕನಿಷ್ಠ 303 ಸದಸ್ಯರ ಬೆಂಬಲವಿದೆ ಎಂಬ ವಿಶ್ವಾಸ ಎನ್‌ಡಿಎ ನಾಯಕರಿಗೆ ಇದೆ.

ಎನ್‌ಡಿಎಗೆ ಬೆಂಬಲ: ಲೋಕಸಭೆ ಚುನಾವಣೆ ಬಿಜೆಪಿಗೆ ಬಹುಮತ ನೀಡಿದಿದ್ದರೂ, ಎನ್‌ಡಿಎ ಮೊದಲ ಬಾರಿಗೆ 300ರ ಸಂಖ್ಯೆಯನ್ನು ದಾಟುವಲ್ಲಿ ಯಶಸ್ವಿಯಾಗಿದೆ. 

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿಯ ನಾಲ್ವರು ಸಂಸದರು ಹಾಗೂ ಶಿರೋ ಮಣಿ ಅಕಾಲಿ ದಳ (ಎಸ್‌ಎಡಿ) ಸಂಸದ ನೀಡಿದ ನಿರ್ಣಾಯಕ ಬೆಂಬಲವು ಎನ್‌ಡಿಎಯಲ್ಲಿ ಸಹಕಾರ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಮುಂದಿನ ಐದು ವರ್ಷ ಕಾಲ ಈ ಸಹಕಾರ ಮುಂದುವರಿಯಲಿದೆ ಎಂದು ಎನ್‌ಡಿಎ ನಾಯಕರು ಆಶಿಸುತ್ತಾರೆ. 

ಅಕಾಲಿದಳ ಬೆಂಬಲ: ʻಎಸ್ಎಡಿ ಈ ಹಿಂದೆ ಎನ್‌ ಡಿಎ ಜೊತೆ ಕೆಲಸ ಮಾಡಿದೆ. ಸಹಕಾರ ಮುಂದುವರಿಯುತ್ತದೆ. ನಾವು ಸಂಸತ್ತಿನಲ್ಲಿ ಬಿಜೆಪಿ ಮತ್ತು ಎನ್‌ಡಿಎ ಜೊತೆ ಕೆಲಸ ಮಾಡಿದ್ದೇವೆ ಮತ್ತು ಅದನ್ನು ಮುಂದುವರಿಸುತ್ತೇವೆ,ʼ ಎಂದು ಎಸ್‌ಎಡಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಲೋಕಸಭೆ ಸದಸ್ಯ ಪ್ರೇಮ್ ಸಿಂಗ್ ಚಂದುಮಜ್ರಾ ದ ಫೆಡರಲ್‌ಗೆ ತಿಳಿಸಿದರು.

ಅಕಾಲಿ ದಳ ಪಂಜಾಬ್‌ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ನ್ನು ವಿರೋಧಿಸುವುದರಿಂದ, ಇಂಡಿಯ ಒಕ್ಕೂಟವನ್ನು ಬೆಂಬಲಿಸಲು ಸಾಧ್ಯವಿಲ್ಲ. ಚುನಾವಣೆ ರಾಜಕೀಯ ಜಗಳಕ್ಕೆ ಕಾರಣವಾಗಬಾರದು ಎಂದು ಸ್ಪೀಕರ್ ಅವರನ್ನು ಬೆಂಬಲಿಸಿದ್ದೇವೆ ಎಂದು ಹೇಳಿದರು. 

ಅಕಾಲಿ ದಳ ಸೆಳೆತ: ಅದೇ ಸಮಯದಲ್ಲಿ ಲೋಕಸಭೆಯ ಏಕೈಕ ಅಕಾಲಿದಳದ ಸದಸ್ಯೆ, ಮಾಜಿ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್, ಪಂಜಾಬಿನಲ್ಲಿ ಎಸ್ಎಡಿಯನ್ನು ಮುರಿಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. 

ʻಅಕಾಲಿ ದಳ ಪಂಜಾಬಿನಲ್ಲಿ ಸಂಕಷ್ಟವನ್ನು ಎದುರಿಸುತ್ತಿದೆ. ಏಕೆಂದರೆ, ಸುಖಬೀರ್ ಸಿಂಗ್ ಬಾದಲ್ ಅವರು ಪಕ್ಷದ ಅಧ್ಯಕ್ಷರಾಗಿ ಉಳಿಯಬಾರದು ಮತ್ತು ಇತರ ನಾಯಕರಿಗೆ ಅವಕಾಶ ಸಿಗಬೇಕು ಎಂದು ಅನೇಕ ನಾಯಕರು ಒತ್ತಾಯಿಸುತ್ತಿದ್ದಾರೆ. ಸುಖ್‌ಬೀರ್ ಸಿಂಗ್ ಬಾದಲ್ ರಾಜೀನಾಮೆಗೆ ಭಾರಿ ಒತ್ತಡ ಇದೆ,ʼ ಎಂದು ಚಂದುಮಜ್ರಾ ಹೇಳಿದ್ದಾರೆ.

ಜೆಡಿಯು ದೃಷ್ಟಿಕೋನ: ಎನ್‌ಡಿಎಯ ಪ್ರಮುಖ ಮಿತ್ರ ಪಕ್ಷವಾದ ಜನತಾ ದಳ (ಯುನೈಟೆಡ್), ಒಮ್ಮತದ ರಾಜಕೀಯದಲ್ಲಿ ನಂಬಿಕೆ ಇರಿಸಿದೆ.

ʻಸಭಾಧ್ಯಕ್ಷರ ಆಯ್ಕೆ ಒಮ್ಮತದ ರಾಜಕಾರಣಕ್ಕೆ ಸಂದ ಜಯ. ಮುಂಬರುವ ದಿನಗಳಲ್ಲಿ ಸಂಸತ್ತಿನಲ್ಲಿ ಒಮ್ಮತವು ಮೇಲುಗೈ ಸಾಧಿಸುತ್ತದೆ ಮತ್ತು ಬಹುಮತವಲ್ಲ ಎಂಬ ವಿಶ್ವಾಸವಿದೆ,ʼ ಎಂದು ಪಕ್ಷದ ನಾಯಕ ಕೆ.ಸಿ. ತ್ಯಾಗಿ ದ ಫೆಡರಲ್‌ಗೆ ತಿಳಿಸಿದರು.

ʻಸಂಸತ್ತಿನ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ಎತ್ತಿ ಹಿಡಿಯುವುದು ಮುಖ್ಯ. ಸ್ಪೀಕರ್ ಹುದ್ದೆ ಪಕ್ಷ ಅಥವಾ ಮೈತ್ರಿಕೂಟಕ್ಕೆ ಸೇರಿದೆ ಎಂದು ನೋಡಬಾರದು. ಎಲ್ಲ ಪಕ್ಷಗಳು ಸಭಾಧ್ಯಕ್ಷರೊಂದಿಗೆ ಕೆಲಸ ಮಾಡಬೇಕಿದೆ,ʼ ಎಂದು ಅವರು ಹೇಳಿದರು.

Tags:    

Similar News