ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿ ಟೀಕೆ; ಮಿತ್ರಪಕ್ಷ ಶಿವಸೇನೆಯ ಸಂಸದನಿಂದಲೇ ಅಸಮಾಧಾನ
ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರೇ ವಿ.ಡಿ.ಸಾವರ್ಕರ್ ಅವರನ್ನು 'ಭಾರತದ ಅಸಾಧಾರಣ ಪುತ್ರ' ಎಂದು ಹೊಗಳಿದ್ದರು. ಅವರ ಗೌರವಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದ್ದರು ಎಂದು ಹೇಳಿದರು.;
ಲೋಕಸಭಾ ಕಲಾಪದಲ್ಲಿ ಆಡಳಿತ ಪಕ್ಷ ಬಿಜೆಪಿಯನ್ನು ಟೀಕಿಸಲು ಪ್ರತಿಪಕ್ಷಗಳ ನಾಯಕ ರಾಹುಲ್ ಗಾಂಧಿ ವಿ. ಡಿ ಸಾವರ್ಕರ್ ಅವರನ್ನು ಎಳೆದು ತಂದಿರುವುದು ಮಿತ್ರ ಪಕ್ಷ ಶಿವ ಸೇನೆಯ ಅಸಮಾಧಾನಕ್ಕೆ ಕಾರಣವಾಯಿತು. ಶಿವಸೇನೆ ಸಂಸದ ಶ್ರೀಕಾಂತ್ ಶಿಂಧೆ, ರಾಹುಲ್ ಅವರನ್ನು ಲೋಕಸಭೆಯಲ್ಲಿಯೇ ಪ್ರಶ್ನಿಸಿದ್ದು ಕೋಲಾಹಲಕ್ಕೂ ಕಾರಣವಾಯಿತು.
''ಸಂವಿಧಾನದಿಂದ ಭಾರತ ಸಾಧಿಸುವಂಥದ್ದು ಏನೂ ಇಲ್ಲ'' ಎಂದು ಹೇಳಿದ್ದ ಸಾವರ್ಕರ್ ಅವರನ್ನು ಪೂಜಿಸುವ ಬಿಜೆಪಿಯವರು ಸಂವಿಧಾನ ರಕ್ಷಣೆ ಮಾಡುತ್ತೇವೆ ಎಂದು ಹೇಳುತ್ತಿರುವುದು ಕ್ಲೀಷೆ ಎಂಬುದಾಗಿ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಿಜೆಪಿಯ ಕೋಪಕ್ಕೆ ಮೊದಲು ಕಾರಣವಾದರೆ, ಮಿತ್ರ ಪಕ್ಷದ ಬೇಸರಕ್ಕೂ ನೆಪವಾಯಿತು.
ಶಿಂಧೆ ಪ್ರತಿಕ್ರಿಯೆ ಕೊಡುತ್ತಾ, ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರೇ ವಿ.ಡಿ.ಸಾವರ್ಕರ್ ಅವರನ್ನು 'ಭಾರತದ ಅಸಾಧಾರಣ ಪುತ್ರ' ಎಂದು ಹೊಗಳಿದ್ದರು. ಅವರ ಗೌರವಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದ್ದರು ಎಂದು ಹೇಳಿದರು.
ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಿವಸೇನೆ ಸಂಸದ ಶ್ರೀಕಾಂತ್ ಶಿಂಧೆ, ಸಾವರ್ಕರ್ ಹೊಗಳಿದ ಇಂದಿರಾ ಗಾಂಧಿ ಕೂಡ ಸಂವಿಧಾನ ವಿರೋಧಿಯೇ ಎಂದು ಪ್ರಶ್ನಿಸಿದರು.
ಸಾವರ್ಕರ್ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ, ಸ್ವತಂತ್ರ ವೀರವೀರ್ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಕುರಿತು ಇಂದಿರಾಗಾಂಧಿ ಪಂಡಿತ್ ಬಖ್ಲೆ ಅವರಿಗೆ ಬರೆದ ಪತ್ರವನ್ನೂ ಅವರು ಓದಿದರು.
ನಿಮ್ಮ ಅಜ್ಜಿ ಕೂಡ ಸಂವಿಧಾನ ವಿರೋಧಿಯಾಗಿದ್ದರೇ? ಸಾವರ್ಕರ್ ಅವರ ಬಗ್ಗೆ ಅಸಂಬದ್ಧವಾಗಿ ಮಾತನಾಡುವುದು ನಿಮಗೆ ಹವ್ಯಾಸವೇ? ನಾವು ಸಾವರ್ಕರ್ ಅವರನ್ನು ಗೌರವಿಸುತ್ತೇವೆ. ಅವರ ಬಗ್ಗೆ ನಮಗೆ ಹೆಮ್ಮೆ ಇದೆ" ಎಂದು ಶಿಂಧೆ ಹೇಳಿದರು.
ಪ್ರತಿಕ್ರಿಯೆಗೆ ಸಿಗದ ಅವಕಾಶ
ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶಿಂಧೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ಮುಂದಾದರು. ಈ ವೇಲೆ ಸದನದಲ್ಲಿ ಗಲಾಟೆ ಶುರುವಾಯಿತು. ಅಲ್ಲದೆ ಸಭಾಧ್ಯಕ್ಷರು ಅವರಿಗೆ ಮಾತನಾಡಲೂ ಅವಕಾಶ ನೀಡಲಿಲ್ಲ.
ಆದಾಗ್ಯೂ ರಾಹುಲ್ ತಮ್ಮ ಉತ್ತರ ಕೊಟ್ಟರು. "ನಾನು ಚಿಕ್ಕವನಿದ್ದಾಗ ಇಂದಿರಾ ಗಾಂಧಿಗೆ ಇದರ ಬಗ್ಗೆ ಪ್ರಶ್ನೆ ಕೇಳಿದ್ದೆ. ಸಾವರ್ಕರ್ ಬ್ರಿಟಿಷರೊಂದಿಗೆ ರಾಜಿ ಮಾಡಿಕೊಂಡಿದ್ದರು. , ಬ್ರಿಟಿಷರಿಗೆ ಪತ್ರ ಬರೆದು ಕ್ಷಮೆ ಕೋರಿದ್ದರು ಎಂದು ಆಗ ಅವರು ಹೇಳಿದ್ದರು" ಎಂದು ಹೇಳಿದರು.
"ಮಹಾತ್ಮ ಗಾಂಧೀಜಿ ಜೈಲಿಗೆ ಹೋದರು, ಜವಾಹರಲಾಲ್ ನೆಹರೂ ಜೈಲಿಗೆ ಹೋದರು ಮತ್ತು ಸಾವರ್ಕರ್ ಕ್ಷಮೆ ಕೋರಿದರು ಎಂದು ಇಂದಿರಾ ಗಾಂಧಿ ನನಗೆ ಹೇಳಿದ್ದರು. ಇದು ಇಂದಿರಾ ಗಾಂಧಿಯವರ ನಿಲುವಾಗಿತ್ತು " ಎಂದು ರಾಹುಲ್ ಹೇಳಿದರು.
ಸಾವರ್ಕರ್ ಆಗಲು ಸಾಧ್ಯವಿಲ್ಲ
ರಾಹುಲ್ ಗಾಂಧಿ ತಮ್ಮ ಜೀವಿತಾವಧಿಯಲ್ಲಿ ಸಾವರ್ಕರ್ ಆಗಲು ಸಾಧ್ಯವಿಲ್ಲ ಎಂದು ಬಿಜೆಪಿ ಸದಸ್ಯ ನಿಶಿಕಾಂತ್ ದುಬೆ ಹೇಳಿದರು.
"ಇಂದಿರಾ ಗಾಂಧಿ ಅವರು ವೀರ್ ಸಾವರ್ಕರ್ ಅವರ ಗೌರವಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದ್ದರು. 1979ರಲ್ಲಿ, ಇಂದಿರಾ ಗಾಂಧಿ ತಮ್ಮ ವೈಯಕ್ತಿಕ ಖಾತೆಯಿಂದ 11,000 ರೂ.ಗಳನ್ನು ಸಾವರ್ಕರ್ ಟ್ರಸ್ಟ್ಗೆ ದೇಣಿಗೆ ನೀಡಿದ್ದರು., 1983ರಲ್ಲಿ ಇಂದಿರಾ ಗಾಂಧಿ ಅವರು ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಸಾವರ್ಕರ್ ಕುರಿತ ಸಾಕ್ಷ್ಯಚಿತ್ರ ತಯಾರಿಸಿದ್ದರು" ಎಂದು ದುಬೆ ಹೇಳಿದರು.
ಸಾವರ್ಕರ್ ಅವರಂತಹ ಯೋಗ್ಯ ಮಗ ಒಂದು ಯುಗದಲ್ಲಿ ಒಮ್ಮೆ ಜನಿಸುತ್ತಾನೆ ಎಂದು 1980 ರಲ್ಲಿ ಇಂದಿರಾ ಗಾಂಧಿ ಹೇಳಿದ್ದರು ಎಂದು ಬಿಜೆಪಿ ನಾಯಕ ಹೇಳಿದರು.
"ರಾಹುಲ್ ಗಾಂಧಿ ಎಂದಿಗೂ ಸಾವರ್ಕರ್ ಆಗಲು ಸಾಧ್ಯವಿಲ್ಲ ಮತ್ತು ಅವರು ತಮ್ಮ ಅಜ್ಜಿಯ ಕ್ಷಮೆಯಾಚಿಸಬೇಕು" ಎಂದು ದುಬೆ ಅಭಿಪ್ರಾಯಪಟ್ಟರು. .
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಸೆಲ್ಯುಲಾರ್ ಜೈಲಿಗೆ ಭೇಟಿ ನೀಡಿ ಸಾವರ್ಕರ್ ಅಲ್ಲಿ ಖೈದಿಯಾಗಿ ಅನುಭವಿಸಿದ ಕಷ್ಟಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಮಾಜಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಸಲಹೆ ನೀಡಿದರು.
"ಅವರಿಗೆ ಸಾವರ್ಕರ್ ಕುರಿತು ಗೊತ್ತಿಲ್ಲ. ಸಾವರ್ಕರ್ ಅವರನ್ನು 11 ವರ್ಷಗಳ ಕಾಲ ಜೈಲಿನಲ್ಲಿರಿಸಿದ ಸೆಲ್ಯುಲಾರ್ ಜೈಲಿಗೆ ಅವರು ಭೇಟಿ ನೀಡಬೇಕು" ಎಂದು ಪ್ರಸಾದ್ ಹೇಳಿದರು.
ರಾಜಕೀಯವನ್ನು ಮಾಡಲು ಏನು ಬೇಕಾದರೂ ಮಾತನಾಡಬಹುದು. ಆದರೆ ರಾಷ್ಟ್ರಕ್ಕಾಗಿ ದೊಡ್ಡ ತ್ಯಾಗ ಮಾಡಿದ ವ್ಯಕ್ತಿ ಬಗ್ಗೆ ಅಂಥ ಮಾತುಗಳನ್ನು ಆಡಬಾರದು " ಎಂದು ಅವರು ಹೇಳಿದರು.