ಏಪ್ರಿಲ್ 2- ಒಡಿಶಾದಲ್ಲಿ ವಿಧಾನಸಭೆ ಚುನಾವಣೆಗೆ ಬಿಜೆಪಿ 22 ಹಾಲಿ ಶಾಸಕರ ಪೈಕಿ 21 ಮಂದಿಯನ್ನು ಮತ್ತೆ ಕಣಕ್ಕಿಳಿಸಿದೆ. 147 ಅಸೆಂಬ್ಲಿ ಸ್ಥಾನಗಳ ಪೈಕಿ 112 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.
ಪುರಿ ಜಿಲ್ಲೆಯ ಬ್ರಹ್ಮಗಿರಿಯ ಲಲಿತೇಂದು ಬಿದ್ಯಾಧರ್ ಮಹಾಪಾತ್ರ ಟಿಕೆಟ್ ನಿರಾಕರಿಸಲ್ಪಟ್ಟ ಏಕೈಕ ಶಾಸಕ. ಅವರ ಸೊಸೆ ಉಪಾಸನಾ ಮಹಾಪಾತ್ರ ಅವರಿಗೆ ಟಿಕೆಟ್ ಸಿಕ್ಕಿದೆ.
ಎಂಟು ಮಹಿಳಾ ಅಭ್ಯರ್ಥಿಗಳು: ಪಟ್ಟಿಯಲ್ಲಿ ಎಂಟು ಮಹಿಳಾ ಅಭ್ಯರ್ಥಿಗಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಮನಮೋಹನ್ ಸಮಾಲ್ ಭದ್ರಕ್ ಜಿಲ್ಲೆಯ ಚಾಂದ್ಬಾಲಿ, ಹಿರಿಯ ನಾಯಕ ಮತ್ತು ಬಾರ್ಗಢದ ಹಾಲಿ ಸಂಸದ ಸುರೇಶ್ ಪೂಜಾರಿ ಬ್ರಜರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಪೂಜಾರಿ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ವಿರೋಧ ಪಕ್ಷದ ನಾಯಕ ಮತ್ತು ಶಾಸಕ ಜಯನಾರಾಯಣ ಮಿಶ್ರಾ ಅವರು ಸಂಬಲ್‌ಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಬಿಜೆಡಿಯಿಂಸ ಪಕ್ಷಾಂತರ ಮಾಡಿರುವ ಅರಬಿಂದ ಧಲಿ, ಆಕಾಶ್ ದಾಸ್ ನಾಯಕ್ ಮತ್ತು ಪ್ರಿಯದರ್ಶಿ ಮಿಶ್ರಾ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಖುರ್ದಾ ಜಿಲ್ಲೆಯ ಜಯದೇವ್ ಕ್ಷೇತ್ರದಿಂದ ಅರಬಿಂದ ಧಾಲಿ ಸ್ಪರ್ಧಿಸಲಿದ್ದಾರೆ.
ನಟ ಮತ್ತು ರಾಜಕಾರಣಿ ಆಕಾಶ್ ದಾಸ್ ನಾಯಕ್ ಅವರಿಗೆ ಜಾಜ್‌ಪುರ ಜಿಲ್ಲೆಯ ಕೋರೆ ಕ್ಷೇತ್ರದಿಂದ, ಬಿಜೆಡಿ ಮಾಜಿ ಶಾಸಕ ಪ್ರಿಯದರ್ಶಿ ಮಿಶ್ರಾ ಭುವನೇಶ್ವರ ಉತ್ತರ ಕ್ಷೇತ್ರದಿಂದ ಚುನಾವಣೆ ಎದುರಿಸಲಿದ್ದಾರೆ. ಬಿಜೆಪಿ ಯುವ ನಾಯಕ ಟಂಕಧರ್ ತ್ರಿಪಾಠಿ ಅವರು ಝಾರ್ಸುಗುಡ, ಶಾಸಕಿ ಕುಸುಮ್ ಟೆಟೆ ಸುಂದರ್‌ಗಢ, ಬಿಸ್ವರಂಜನ್ ಬಡಜೆನಾ ಜತ್ನಿ, ಜಗನ್ನಾಥ್ ಪ್ರಧಾನ್ ಭುವನೇಶ್ವರ ಸೆಂಟ್ರಲ್, ಬಾಬು ಸಿಂಗ್ ಭುವನೇಶ್ವರ್ ಎಕಾಮ್ರಾದಿಂದ ಮತ್ತು ಪೃಥಿವಿರಾಜ್ ಹರಿಚಂದನ್ ಚಿಲಿಕಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.