ಅಪ್ರಾಪ್ತ ವಯಸ್ಕ ಬಾಲಕಿ ಅಪಹರಣ,ಹತ್ಯೆ; ಗ್ರಾಮಸ್ಥರಿಂದ ಪೊಲೀಸ್ ಹೊರ ಠಾಣೆಗೆ ಬೆಂಕಿ

ಬಾಲಕಿ ಶುಕ್ರವಾರ ಸಂಜೆಯಿಂದ ನಾಪತ್ತೆಯಾಗಿದ್ದು, ದೂರು ನೀಡಿದರೂ ಪೊಲೀಸರು ತಕ್ಷಣ ಕ್ರಮ ಕೈಗೊಂಡಿಲ್ಲಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದರೆ, ಇಂದು ಬೆಳಗ್ಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.;

Update: 2024-10-05 09:43 GMT

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಜೌಗು ಭೂಮಿಯಲ್ಲಿ 10 ವರ್ಷದ ಬಾಲಕಿಯ ಶವ ಪತ್ತೆಯಾಗಿದ್ದು, ಸಿಟ್ಟಿಗೆದ್ದ ಸ್ಥಳೀಯರು ಪೊಲೀಸ್ ಹೊರ ಠಾಣೆಗೆ ಬೆಂಕಿ ಹಚ್ಚಿದ್ದಾರೆ.

ಬಾಲಕಿ ಶುಕ್ರವಾರ ಸಂಜೆಯಿಂದ ನಾಪತ್ತೆಯಾಗಿದ್ದು, ಪೊಲೀಸರಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿ ದ್ದಾರೆ. ಶನಿವಾರ ಮುಂಜಾನೆ ಜಯನಗರ ಪ್ರದೇಶದಲ್ಲಿ ಬಾಲಕಿಯ ಶವ ಪತ್ತೆಯಾಗಿದ್ದು, ಗುಂಪೊಂದು ಪೊಲೀಸ್ ಹೊರಠಾಣೆಗೆ ಬೆಂಕಿ ಹಚ್ಚಿ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿತು. ಹೊರಠಾಣೆ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದರು ಮತ್ತು ಪೊಲೀಸರು ಆವರಣದಿಂದ ಹೊರಗೆ ಅಟ್ಟಲಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಅಶ್ರುವಾಯು ಶೆಲ್‌ ಬಳಕೆ: ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆಯನ್ನು ಕಳುಹಿಸಲಾಯಿತು. ಎಸ್‌ಡಿಪಿಒ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಸ್ಥಳದಲ್ಲಿ ಕೂಡಿ ಹಾಕಲು ಯತ್ನಿಸಿದ ಗುಂಪನ್ನು ಚದುರಿಸಲು ಅಶ್ರುವಾಯು ಶೆಲ್‌ಗಳನ್ನು ಸಿಡಿಸಲಾಯಿತು. 

ʻಬಾಲಕಿಯ ಕುಟುಂಬದವರು ಮಹಿಸ್ಮರಿ ಔಟ್‌ಪೋಸ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಪೊಲೀಸರು ತಕ್ಷಣ ಕ್ರಮ ಕೈಗೊಂಡಿಲ್ಲ. ಆರ್‌. ಜಿ. ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಶವ ಪತ್ತೆಯಾದ ನಂತರ ಪೊಲೀಸರು ಪ್ರತಿಕ್ರಿಯಿಸಿದಂತೆ ಇಲ್ಲಿಯೂ ಪ್ರತಿಕ್ರಿಯಿಸಿದರು,ʼ ಎಂದು ಗ್ರಾಮಸ್ಥರು ದೂರಿದರು. 

ʻಮಗಳ ಅತ್ಯಾಚಾರ ಮತ್ತು ಹತ್ಯೆ ಹಿಂದಿರುವವರಿಗೆ ಶಿಕ್ಷೆಯಾಗುವವರೆಗೆ ಪ್ರತಿಭಟನೆ ಮುಂದುವರಿಸುತ್ತೇವೆ. ದೂರಿಗೆ ತಡವಾಗಿ ಸ್ಪಂದಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದರೆ, ಬಾಲಕಿಯನ್ನು ರಕ್ಷಿಸಬಹುದಿತ್ತು,ʼ ಎಂದು ಸ್ಥಳೀಯರಾದ ಗಣೇಶ್ ಡೋಲುಯಿ ಹೇಳಿದರು.

ತಕ್ಷಣ ಕ್ರಮ ಕೈಗೊಳ್ಳಲಾಗಿದೆ: ಪೊಲೀಸರು- ದೂರು ಸ್ವೀಕರಿಸಿದ ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ʻಶುಕ್ರವಾರ ರಾತ್ರಿ 9 ಗಂಟೆಗೆ ಎಫ್‌ಐಆರ್ ದಾಖಲಿಸಿದ್ದು, ಇಂದು ಬೆಳಗ್ಗೆ ಆರೋಪಿಯನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದ್ದು, ನಾವು ಮೃತಳ ಕುಟುಂಬದೊಂದಿಗೆ ಇದ್ದೇವೆ,ʼ ಎಂದು ಪೊಲೀಸರು ಹೇಳಿದರು. ʻಪೊಲೀಸ್ ಹೊರಠಾಣೆಗೆ ಬೆಂಕಿ ಹಚ್ಚಿದ ಮತ್ತು ದಾಖಲೆಗಳನ್ನು ನಾಶಪಡಿಸಿದವರನ್ನು ಗುರುತಿಸಿ, ಕ್ರಮ ತೆಗೆದುಕೊಳ್ಳಲಾಗುತ್ತದೆ,ʼ ಎಂದು ಅಧಿಕಾರಿ ಹೇಳಿದರು.

Tags:    

Similar News