ನೀಟ್ ಪರೀಕ್ಷೆಯಲ್ಲಿ ಲೋಪ ತಪ್ಪಿಸಿ, ನ್ಯೂನತೆ ಸರಿಪಡಿಸಿ: ಎನ್‌ಟಿಎಗೆ ಸುಪ್ರೀಂ ಸೂಚನೆ

ನೀಟ್‌ ಪರೀಕ್ಷೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸುವಂತೆ ಕೇಂದ್ರವನ್ನು ಸುಪ್ರೀಂ ಕೋರಿದೆ.ಪ್ರಶ್ನೆಪೇಪರ್‌ಗಳ ವ್ಯವಸ್ಥಿತ ಸೋರಿಕೆಯಾಗಿಲ್ಲ ಮತ್ತು ಸೋರಿಕೆಯು ಪಾಟ್ನಾ ಹಾಗೂ ಹಜಾರಿಬಾಗ್‌ಗೆ ಸೀಮಿತವಾಗಿದೆ ಎಂದು ಹೇಳಿದೆ.;

Update: 2024-08-02 07:06 GMT

ವಿವಾದಗ್ರಸ್ತ ನೀಟ್-ಯುಜಿ 2024 ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರದ್ದುಗೊಳಿಸುವುದಿಲ್ಲ. ಏಕೆಂದರೆ, ಪರೀಕ್ಷೆಯ ಪಾವಿತ್ರ್ಯದ ವ್ಯವಸ್ಥಿತ ಉಲ್ಲಂಘನೆ ಆಗಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಆಗಸ್ಟ್ 2) ಹೇಳಿದೆ.

ಜುಲೈ 23 ರಂದು ಸುಪ್ರೀಂ ಕೋರ್ಟಿನ ಆದೇಶದ ಹಿಂದಿನ ಕಾರಣಗಳನ್ನು ಓದಿದ ಮು.ನ್ಯಾ.ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಈ ವರ್ಷ ಗಮನಕ್ಕೆ ಬಂದ ಲೋಪಗಳನ್ನು ತಪ್ಪಿಸಬೇಕು ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಸೂಚಿಸಿದೆ.

ವೈದ್ಯಕೀಯ ಪ್ರವೇಶಕ್ಕೆ ನೀಟ್‌ ಪರೀಕ್ಷೆಯನ್ನು ಈ ವರ್ಷ ಮೇ 5 ರಂದು ರಾಷ್ಟ್ರವ್ಯಾಪಿ ನಡೆಸಲಾಗಿದ್ದು, ಫಲಿತಾಂಶಗಳನ್ನು ಘೋಷಿಸಿದ ಒಂದು ತಿಂಗಳ ನಂತರ ತೀವ್ರ ವಿವಾದಕ್ಕೆ ಸಿಲುಕಿತು.

ಎನ್ಟಿಎ ಕಾರ್ಯನಿರ್ವಹಣೆ ಪರಿಶೀಲಿಸಲು ಸಮಿತಿ: ಸುಪ್ರೀಂ ಪೀಠವು ಹಲವಾರು ನಿರ್ದೇಶನಗಳನ್ನು ನೀಡಿತಲ್ಲದೆ, ಎನ್‌ಟಿಎ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ಮತ್ತು ಪರೀಕ್ಷೆ ನಡೆಸುವಲ್ಲಿ ಸುಧಾರಣೆಗಳನ್ನು ಶಿಫಾರಸು ಮಾಡಲು ಇಸ್ರೋ ಮಾಜಿ ಮುಖ್ಯಸ್ಥ ಕೆ. ರಾಧಾಕೃಷ್ಣನ್ ನೇತೃತ್ವದ ಸಮಿತಿಯ ವ್ಯಾಪ್ತಿಯನ್ನು ವಿಸ್ತರಿಸಿತು. ಪರೀಕ್ಷಾ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಲು ತೆಗೆದುಕೊಳ್ಳಬೇಕಾದ ವಿವಿಧ ಕ್ರಮಗಳ ಕುರಿತು ಸಮಿತಿ ಸೆಪ್ಟೆಂಬರ್ 30 ರೊಳಗೆ ವರದಿ ಸಲ್ಲಿಸಲಿದೆ. 

ರಾಧಾಕೃಷ್ಣನ್ ಸಮಿತಿಯು ತಾಂತ್ರಿಕತೆಯ ಅಳವಡಿಸುವಿಕೆ ಮೂಲಕ ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸಲು ಎಸ್‌ಒಪಿ(ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನ) ರೂಪಿಸಬೇಕು. ನೀಟ್-ಯುಜಿ ಪರೀಕ್ಷೆ ಸಮಯದಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ಕೇಂದ್ರ ಸರಿಪಡಿಸಬೇಕು ಎಂದು ಪೀಠ ಹೇಳಿದೆ.

ವ್ಯವಸ್ಥಿತ ಉಲ್ಲಂಘನೆ ಆಗಿಲ್ಲ: ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಮತ್ತು ಇತರ ಅಕ್ರಮಗಳ ಬಗ್ಗೆ ತೀವ್ರ ವಿವಾದದ ನಡುವೆಯೂ ನೀಟ್‌ ಪ್ರವೇಶ ಪರೀಕ್ಷೆಯನ್ನು ರದ್ದುಗೊಳಿಸದಿರಲು ಕಾರಣಗಳನ್ನು ನ್ಯಾಯಾಲಯ ಪ್ರಕಟಿಸಿದೆ. ಎನ್‌ಟಿಎಯ ರಚನಾತ್ಮಕ ಪ್ರಕ್ರಿಯೆಗಳಲ್ಲಿನ ಎಲ್ಲ ನ್ಯೂನತೆಗಳನ್ನು ತೋರಿಸಿದೆ. ಈ ವರ್ಷವೇ ನ್ಯೂನತೆಗಳನ್ನು ಸರಿಪಡಿಸುವಂತೆ ಕೇಂದ್ರವನ್ನು ಕೋರಿದೆ. ಆದರೆ, ಪ್ರಶ್ನೆಪತ್ರಿಕೆ ಸೋರಿಕೆಯು ಪಾಟ್ನಾ ಮತ್ತು ಹಜಾರಿಬಾಗ್‌ಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದೆ. 

ಜುಲೈ 23 ತೀರ್ಪು: ವಿವಾದಿತ ಪರೀಕ್ಷೆಯನ್ನು ರದ್ದುಗೊಳಿಸಲು ಮತ್ತು ಮರುಪರೀಕ್ಷೆ ಕೋರಿ ಸಲ್ಲಿಸಿದ ಮನವಿಗಳನ್ನು ಜುಲೈ 23 ರಂದು ಸುಪ್ರೀಂ ಕೋರ್ಟ್ ವಜಾಗೊಳಿಸಿತು. ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ತೀರ್ಮಾನಿಸಲು ಯಾವುದೇ ಪುರಾವೆಯಿಲ್ಲ ಎಂದು ಹೇಳಿತು.

Tags:    

Similar News