ರೈಲು ಪ್ರಯಾಣಿಕರ ಗಮನಕ್ಕೆ; ಸೋಮವಾರದಿಂದ 'ರೈಲ್ ನೀರ್' ನೀರಿನ ಬಾಟಲಿಗಳ ಬೆಲೆ ಇಳಿಕೆ
ರೈಲ್ವೆ ಮಂಡಳಿಯು ಹೊರಡಿಸಿರುವ ನೂತನ ಆದೇಶದ ಪ್ರಕಾರ, ಒಂದು ಲೀಟರ್ ನೀರಿನ ಬಾಟಲಿಯ ಬೆಲೆಯನ್ನು 15 ರಿಂದ 14 ರೂಪಾಯಿ ಮತ್ತು 500 ಮಿಲಿ ಲೀಟರ್ ಬಾಟಲಿಯ ಬೆಲೆಯನ್ನು 10 ರಿಂದ 9 ರೂಪಾಯಿಗೆ ಇಳಿಸಲಾಗಿದೆ.
ಕುಡಿಯುವ ನೀರಿನ ಬಾಟಲ್ ಬೆಲೆ ಕಡಿಮೆ ಮಾಡಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಭಾರತೀಯ ರೈಲ್ವೆ ಇಲಾಖೆಯು ದೇಶಾದ್ಯಂತ ಕೋಟ್ಯಂತರ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. 'ರೈಲ್ ನೀರ್' ಸೇರಿದಂತೆ ರೈಲುಗಳು ಮತ್ತು ನಿಲ್ದಾಣಗಳಲ್ಲಿ ಮಾರಾಟವಾಗುವ ಎಲ್ಲಾ ಅನುಮೋದಿತ ಬ್ರಾಂಡ್‌ಗಳ ಕುಡಿಯುವ ನೀರಿನ ಬಾಟಲಿಗಳ ಬೆಲೆಯನ್ನು ಕಡಿಮೆ ಮಾಡಲಾಗಿದ್ದು, ಈ ಹೊಸ ದರಗಳು ಸೆಪ್ಟೆಂಬರ್ 22ರಿಂದ (ಸೋಮವಾರ) ಜಾರಿಗೆ ಬರಲಿವೆ.
ರೈಲ್ವೆ ಮಂಡಳಿಯು ಹೊರಡಿಸಿರುವ ನೂತನ ಆದೇಶದ ಪ್ರಕಾರ, ಒಂದು ಲೀಟರ್ ನೀರಿನ ಬಾಟಲಿಯ ಬೆಲೆಯನ್ನು 15 ರಿಂದ 14 ರೂಪಾಯಿ ಮತ್ತು 500 ಮಿಲಿ ಲೀಟರ್ ಬಾಟಲಿಯ ಬೆಲೆಯನ್ನು 10 ರಿಂದ 9 ರೂಪಾಯಿಗೆ ಇಳಿಸಲಾಗಿದೆ. ಜಿಎಸ್‌ಟಿ ದರಗಳಲ್ಲಿನ ಇಳಿಕೆಯ ಪ್ರಯೋಜನವನ್ನು ಪ್ರಯಾಣಿಕರಿಗೆ ವರ್ಗಾಯಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ದರ ಕಡಿತವು ಕೇವಲ ಐಆರ್‌ಸಿಟಿಸಿ ತಯಾರಕರ 'ರೈಲ್ ನೀರ್'ಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ರೈಲ್ವೆ ಇಲಾಖೆಯಿಂದ ಮಾರಾಟಕ್ಕೆ ಅನುಮೋದನೆ ಪಡೆದ ಎಲ್ಲಾ ಬ್ರಾಂಡ್‌ಗಳ ಪ್ಯಾಕೇಜ್ಡ್ ಕುಡಿಯುವ ನೀರಿಗೂ ಇದು ಅನ್ವಯವಾಗುತ್ತದೆ. ರೈಲ್ವೆ ನಿಲ್ದಾಣದ ಆವರಣದಲ್ಲಿ ಹಾಗೂ ಚಲಿಸುವ ರೈಲುಗಳಲ್ಲಿ ಯಾವುದೇ ಮಾರಾಟಗಾರರು ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆಯುವಂತಿಲ್ಲ ಎಂದು ರೈಲ್ವೆ ಮಂಡಳಿ ತನ್ನ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.
ಈ ಆದೇಶವನ್ನು ತಕ್ಷಣವೇ ಪಾಲಿಸುವಂತೆ ಎಲ್ಲಾ ರೈಲ್ವೆ ವಲಯಗಳ ಅಧಿಕಾರಿಗಳಿಗೆ ಮತ್ತು ಐಆರ್‌ಸಿಟಿಸಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಕ್ರಮದಿಂದಾಗಿ ಪ್ರತಿನಿತ್ಯ ರೈಲಿನಲ್ಲಿ ಪ್ರಯಾಣಿಸುವ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ.