Delhi CM | ಮುಖ್ಯಮಂತ್ರಿಯಾಗಿ ಆತಿಶಿ ಪ್ರಮಾಣವಚನ ಸ್ವೀಕಾರ

ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಮತ್ತು ಬಿಜೆಪಿಯ ಸುಷ್ಮಾ ಸ್ವರಾಜ್ ನಂತರ ಆತಿಶಿ ಅವರು ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿ.

Update: 2024-09-21 12:08 GMT

ದೆಹಲಿಯ ಎಂಟನೇ ಮುಖ್ಯಮಂತ್ರಿಯಾಗಿ ಎಎಪಿ ನಾಯಕಿ ಆತಿಶಿ ಶನಿವಾರ (ಸೆಪ್ಟೆಂಬರ್ 21) ಪ್ರಮಾಣವಚನ ಸ್ವೀಕರಿಸಿದರು. ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.

ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಲು ನಿರ್ಧರಿಸಿದ ನಂತರ ಈ ವಾರದ ಆರಂಭದಲ್ಲಿ ಆತಿಶಿ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಯಿತು.

ಆಪ್‌ ಹಿರಿಯ ನಾಯಕರಾದ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಪ್ರಮಾಣವಚನ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಮತ್ತು ಬಿಜೆಪಿಯ ಸುಷ್ಮಾ ಸ್ವರಾಜ್ ನಂತರ ಆತಿಶಿ ಅವರು ದೆಹಲಿಯ ಮೂರನೆಯ ಮಹಿಳಾ ಮುಖ್ಯಮಂತ್ರಿಯಾಗಿದ್ದಾರೆ. ಸ್ವತಂತ್ರ ಭಾರತದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ 17 ನೇ ಮಹಿಳೆ.

ಫೆಬ್ರವರಿಯಲ್ಲಿ ದೆಹಲಿಯಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿದ್ದು, ಆತಿಶಿ ಅವರು ಅಲ್ಪಾವಧಿ ಅಧಿಕಾರ ಹೊಂದಿರುತ್ತಾರೆ.

ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಮಹಿಳೆಯರು:

ಸುಚೇತಾ ಕೃಪಲಾನಿ: ಸ್ವತಂತ್ರ ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ. 1963 ರಿಂದ 1967 ರವರೆಗೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರದ ನೇತೃತ್ವ ವಹಿಸಿದ್ದರು.

ನಂದಿನಿ ಸತ್ಪತಿ: 1972 ಮತ್ತು 1976 ರ ನಡುವೆ ಒಡಿಶಾವನ್ನು ಆಳಿದರು. ಅವರ ಅಧಿಕಾರಾವಧಿಯಲ್ಲಿ 1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಯಿತು. 

ಶಶಿಕಲಾ ಕಾಕೋಡ್ಕರ್: ಮಹಾರಾಷ್ಟ್ರವಾದಿ ಗೋಮಾಂತಕ  ಪಕ್ಷದ ನಾಯಕಿ, 1973 ರಿಂದ 1979 ರವರೆಗೆ ಕೇಂದ್ರಾಡಳಿತ ಪ್ರದೇಶವಾದ ಗೋವಾ, ದಮನ್ ಮತ್ತು ದಿಯು ಮುಖ್ಯಮಂತ್ರಿಯಾಗಿ ಎರಡು ಅವಧಿ ಆಡಳಿತ ನಡೆಸಿದರು.  ಗೋವಾ 1987ರಲ್ಲಿ ರಾಜ್ಯದ ಸ್ಥಾನಮಾನ ಪಡೆದರೆ, ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶವಾಗಿ ಉಳಿಯಿತು. 

ಅನ್ವರಾ ತೈಮೂರ್:  ರಾಜ್ಯವೊಂದರ ಮೊದಲ ಮುಸ್ಲಿಂ ಮಹಿಳಾ ಮುಖ್ಯಮಂತ್ರಿ. 1980 ರಿಂದ 1981 ರವರೆಗೆ ಅಸ್ಸಾಂನಲ್ಲಿ ಕಾಂಗ್ರೆಸ್ ಸರ್ಕಾರದ ನೇತೃತ್ವ ವಹಿಸಿದ್ದರು. 

ವಿ.ಎನ್. ಜಾನಕಿ ರಾಮಚಂದ್ರನ್: ನಟಿ-ರಾಜಕಾರಣಿ ತಮಿಳುನಾಡಿನ ಮೊದಲ ಮಹಿಳಾ ಮುಖ್ಯಮಂತ್ರಿ ಹಾಗೂ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಚಲನಚಿತ್ರ ಕಲಾವಿದೆ. ಪತಿ ಎಂ.ಜಿ. ರಾಮಚಂದ್ರನ್ ಅವರ ನಿಧನದ ನಂತರ 1988 ರಲ್ಲಿ ಅವರು 23 ದಿನಗಳ ಕಾಲ ಹುದ್ದೆಯಲ್ಲಿದ್ದರು. 

ಜೆ ಜಯಲಲಿತಾ: ಇನ್ನೊಬ್ಬ ನಟಿ-ರಾಜಕಾರಣಿ  ಜಯಲಲಿತಾ ತಮಿಳುನಾಡಿನ ಮುಖ್ಯಮಂತ್ರಿಯಾಗಿ 14 ವರ್ಷಗಳಿಗಿಂತ ಹೆಚ್ಚು ಕಾಲ ಆರು ಅವಧಿಗೆ ಸೇವೆ ಸಲ್ಲಿಸಿದರು. 

ಮಾಯಾವತಿ: ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ. ಏಳು ವರ್ಷ ಕಾಲ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. 

ರಾಜಿಂದರ್ ಕೌರ್ ಭಟ್ಟಲ್: ಪಂಜಾಬ್‌ನ ಏಕೈಕ ಮಹಿಳಾ ಮುಖ್ಯಮಂತ್ರಿ. ಕಾಂಗ್ರೆಸ್ ನಾಯಕಿ ಅಧಿಕಾರಾವಧಿ 1996 ರಿಂದ 1997 ರವರೆಗೆ ಇತ್ತು 

ರಾಬ್ರಿ ದೇವಿ: ಪತಿ ಲಾಲು ಪ್ರಸಾದ್ ಯಾದವ್ ಅವರನ್ನು 1997 ರಲ್ಲಿ ಜೈಲಿಗೆ ಕಳುಹಿಸಿದ ನಂತರ ಅಧಿಕಾರ ವಹಿಸಿಕೊಂಡ ಅವರು ಬಿಹಾರದ ಏಕೈಕ ಮಹಿಳಾ ಮುಖ್ಯಮಂತ್ರಿ.

ಸುಷ್ಮಾ ಸ್ವರಾಜ್: ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿ. ಬಿಜೆಪಿ ನಾಯಕಿ 1998 ರಲ್ಲಿ 52 ದಿನಗಳ ಸಂಕ್ಷಿಪ್ತ ಅಧಿಕಾರ ಹೊಂದಿದ್ದರು. 

ಶೀಲಾ ದೀಕ್ಷಿತ್: ಶೀಲಾ ದೀಕ್ಷಿತ್: 1998 ಮತ್ತು 2013 ರ ನಡುವೆ 15 ವರ್ಷ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ನಾಯಕಿ. ದೆಹಲಿಯ ದೀರ್ಘಾವಧಿ ಮುಖ್ಯಮಂತ್ರಿ 

ಉಮಾಭಾರತಿ: ರಾಮ ಜನ್ಮಭೂಮಿ ಚಳವಳಿಯ ನಾಯಕಿ. 2003 ರಿಂದ 2004 ರವರೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದರು. 

ವಸುಂಧರಾ ರಾಜೆ: ಗ್ವಾಲಿಯರ್ ಮಹಾರಾಜ ವಿಜಯರಾಜೇ ಸಿಂಧಿಯಾ ಶಿಂಧೆ ಮತ್ತು ಜಿವಾಜಿರಾವ್ ಸಿಂಧಿಯಾ ಶಿಂಧೆ ಅವರ ಪುತ್ರಿ. 10 ವರ್ಷ ರಾಜಸ್ಥಾನವನ್ನು ಮುಖ್ಯಮಂತ್ರಿಯಾಗಿ ಆಳಿದರು.

ಮಮತಾ ಬ್ಯಾನರ್ಜಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ. 2011 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಸತತ ಮೂರನೇ ಅವಧಿಗೆ ಅಧಿಕಾರದಲ್ಲಿದ್ದಾರೆ. 

ಆನಂದಿಬೆನ್ ಪಟೇಲ್: ಗುಜರಾತ್‌ನ ಏಕೈಕ ಮಹಿಳಾ ಮುಖ್ಯಮಂತ್ರಿ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಅವರ ಉತ್ತರಾಧಿಕಾರಿಯಾದರು. ಅವರ ಅಧಿಕಾರಾವಧಿ 2014 ರಿಂದ 2016.

ಮೆಹಬೂಬಾ ಮುಫ್ತಿ: ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕಿ. ಜಮ್ಮು-ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿ. ಅವರು ರಾಜ್ಯದ ಕೊನೆಯ ಮುಖ್ಯಮಂತ್ರಿಯೂ ಹೌದು.

ಆತಿಶಿ: ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದ ನಂತರ ಆತಿಶಿ, ದೇಶದ 17 ನೇ ಮಹಿಳಾ ಮುಖ್ಯಮಂತ್ರಿಯಾದರು.

Tags:    

Similar News