ಮಹಿಳೆಯರ ವಿರುದ್ಧದ ಅಪರಾಧ| ತ್ವರಿತ ನ್ಯಾಯದಾನ ಅಗತ್ಯ- ಪ್ರಧಾನಿ
ನ್ಯಾಯಾಂಗವನ್ನು ಸಂವಿಧಾನದ ರಕ್ಷಕ ಎಂದು ಪರಿಗಣಿಸಲಾಗಿದೆ. ಸುಪ್ರೀಂ ಕೋರ್ಟ್ ಮತ್ತು ನ್ಯಾಯಾಂಗವು ತನ್ನ ಜವಾಬ್ದಾರಿಯನ್ನು ನಿರ್ವಹಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.;
ಹೊಸದಿಲ್ಲಿ: ಮಹಿಳೆಯರ ಮೇಲಿನ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತ್ವರಿತ ನ್ಯಾಯದಾನ ಅಗತ್ಯವಿದೆ. ಇದು ಅವರಿಗೆ ಸುರಕ್ಷತೆಯ ಭರವಸೆ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಉಪಸ್ಥಿತಿಯಲ್ಲಿ ಜಿಲ್ಲಾ ನ್ಯಾಯಾಂಗದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಾಂಗವನ್ನು ಸಂವಿಧಾನದ ರಕ್ಷಕ ಎಂದು ಪರಿಗಣಿಸಲಾಗಿದೆ. ಸುಪ್ರೀಂ ಕೋರ್ಟ್ ಮತ್ತು ನ್ಯಾಯಾಂಗ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದೆ. ದೇಶದ ಜನರು ಸುಪ್ರೀಂ ಕೋರ್ಟ್ ಅಥವಾ ನ್ಯಾಯಾಂಗದ ಮೇಲೆ ಯಾವುದೇ ಅಪನಂಬಿಕೆ ತೋರಿಸಿಲ್ಲ ಎಂದು ಹೇಳಿದರು.
ಕೋಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಹಾಗೂ ಥಾಣೆಯಲ್ಲಿ ಶಿಶುವಿಹಾರದ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಹಿನ್ನೆಲೆಯಲ್ಲಿ, ʻಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಮಕ್ಕಳ ಸುರಕ್ಷತೆಗೆ ಧಕ್ಕೆ ಗಂಭೀರ ಕಾಳಜಿಯ ವಿಷಯ. ದೌರ್ಜನ್ಯ ಪ್ರಕರಣಗಳಲ್ಲಿ ಶೀಘ್ರ ನ್ಯಾಯ ನೀಡುವುದರಿಂದ, ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು ತಮ್ಮ ಸುರಕ್ಷತೆ ಬಗ್ಗೆ ಹೆಚ್ಚು ಭರವಸೆ ಹೊಂದುತ್ತಾರೆ,ʼ ಎಂದು ಪ್ರಧಾನಿ ಹೇಳಿದರು.
ಮಹಿಳೆಯರ ವಿರುದ್ಧದ ಅಪರಾಧ ತಡೆಗೆ ಹಲವು ಕಠಿಣ ಕಾನೂನುಗಳಿವೆ. ತ್ವರಿತ ನ್ಯಾಯ ನೀಡಲು ಅಪರಾಧ ನ್ಯಾಯ ವ್ಯವಸ್ಥೆ ನಡುವೆ ಉತ್ತಮ ಸಮನ್ವಯ ಅಗತ್ಯವಿದೆ ಎಂದು ಹೇಳಿದರು.
ʻತುರ್ತು ಪರಿಸ್ಥಿತಿ ಕರಾಳ ಅವಧಿ. ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗ ಪ್ರಮುಖ ಪಾತ್ರ ವಹಿಸಿದೆ. ರಾಷ್ಟ್ರೀಯ ಭದ್ರತೆ ವಿಷಯಗಳಲ್ಲಿ ನ್ಯಾಯಾಂಗವು ರಾಷ್ಟ್ರೀಯ ಹಿತಾಸಕ್ತಿಗಳನ್ನು ಮುಖ್ಯವಾಗಿಟ್ಟುಕೊಂಡು ಸಮಗ್ರತೆಯನ್ನು ರಕ್ಷಿಸಿದೆ,ʼ ಎಂದು ಹೇಳಿದರು.