ಅಮೇಥಿಯಲ್ಲಿ ದಲಿತ ಕುಟುಂಬದ ಹತ್ಯೆ: ಪ್ರತಿಪಕ್ಷಗಳ ವಾಗ್ದಾಳಿ

ಅಮೇಥಿಯ ಅಹೋರ್ವಾ ಭವಾನಿ ಪ್ರದೇಶದಲ್ಲಿ ಸರ್ಕಾರಿ ಶಾಲೆ ಶಿಕ್ಷಕ ಸುನಿಲ್ ಕುಮಾರ್ (35), ಪತ್ನಿ ಪೂನಂ(32) ಮತ್ತು ಪುತ್ರಿಯರಾದ ದೃಷ್ಟಿ ಹಾಗೂ ಸುನಿ ಅವರನ್ನು ಗುರುವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

Update: 2024-10-04 13:17 GMT

ಲಕ್ನೋ: ಅಮೇಥಿಯಲ್ಲಿ ಮಕ್ಕಳು ಸೇರಿದಂತೆ ದಲಿತ ಕುಟುಂಬದ ನಾಲ್ವರ ಹತ್ಯೆಯನ್ನು ಖಂಡಿಸಿರುವ ಪ್ರತಿಪಕ್ಷ ನಾಯಕರು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದುಬಿದ್ದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ಅಮೇಥಿಯ ಅಹೋರ್ವಾ ಭವಾನಿ ಪ್ರದೇಶದಲ್ಲಿ ಸರ್ಕಾರಿ ಶಾಲೆ ಶಿಕ್ಷಕ ಸುನಿಲ್ ಕುಮಾರ್ (35), ಪತ್ನಿ ಪೂನಂ(32) ಮತ್ತು ಪುತ್ರಿಯರಾದ ದೃಷ್ಟಿ ಹಾಗೂ ಸುನಿ ಅವರನ್ನು ಗುರುವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 

ʻಅಮೇಥಿ ಜಿಲ್ಲೆಯಲ್ಲಿ ದಲಿತ ಕುಟುಂಬದ ನಾಲ್ವರ ಬರ್ಬರ ಹತ್ಯೆ ಅತ್ಯಂತ ದುಃಖಕರ ಮತ್ತು ಆತಂಕಕಾರಿ. ಸರ್ಕಾರ ತಪ್ಪಿತಸ್ಥರು ಮತ್ತು ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,ʼ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಎಕ್ಸ್ ನಲ್ಲಿ ಬರೆದಿದ್ದಾರೆ. 

ʻಯೋಗಿ ಸರ್ಕಾರದ ಕಳಪೆ ಆಡಳಿತದಿಂದ ಮನೆಯೊಳಗೆ ಇರುವವರು ಕೂಡ ಸುರಕ್ಷಿತವಾಗಿರುವುದಿಲ್ಲ ಎಂಬುದನ್ನು ಈ ಘಟನೆ ತೋರಿಸುತ್ತದೆ,ʼ ಎಂದು ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಹೇಳಿದ್ದಾರೆ. ʻರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಾಶವಾಗಿದೆ. ಗೂಂಡಾಗಳು, ದುಷ್ಕರ್ಮಿಗಳು ಮತ್ತು ಅಪರಾಧಿಗಳ ಧ್ವಜ ಹಾರಾಡುತ್ತಿದೆ. ಇದನ್ನು ಕೊನೆಗೊಳಿಸುವ ಯಾವುದೇ ಪ್ರಯತ್ನ ಆಗಿಲ್ಲ,ʼ ಎಂದು ರೈ ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸಿದ್ದಾರೆ.

ಘಟನೆಯನ್ನು ರಾಷ್ಟ್ರೀಯ ಶೋಷಿತ್ ಸಮಾಜ ಪಕ್ಷದ ಅಧ್ಯಕ್ಷ ಸ್ವಾಮಿ ಪ್ರಸಾದ್ ಮೌರ್ಯ ಖಂಡಿಸಿದ್ದಾರೆ.ʻತಪ್ಪಿತಸ್ಥರನ್ನು ತಕ್ಷಣ ಬಂಧಿಸಬೇಕು, ʼ ಎಂದು ಅವರು ಆಗ್ರಹಿಸಿದರು.

ಆಜಾದ್ ಸಮಾಜ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಆಜಾದ್,ʼ ಉತ್ತರ ಪ್ರದೇಶದಲ್ಲಿರುವುದು ಜಂಗಲ್ ರಾಜ್; ಕಾನೂನಿನ ಆಳ್ವಿಕೆ ಇಲ್ಲ. ಉತ್ತರ ಪ್ರದೇಶದಲ್ಲಿ ದಲಿತರ ಜೀವಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ನಾಳೆ ಯಾರ ಸರದಿ ಬರುತ್ತದೆ ಎಂದು ಯಾರಿಗೂ ತಿಳಿದಿಲ್ಲ,ʼ ಎಂದು ನಗೀನಾ ಲೋಕಸಭೆ ಸಂಸದ ಎಕ್ಸ್‌ ನಲ್ಲಿ ಬರೆದಿದ್ದಾರೆ.

ʻಪೂನಂ ಭಾರ್ತಿ ಅವರು ಒಂದೂವರೆ ತಿಂಗಳ ಹಿಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದರೆ ಇಂದು ನಾಲ್ಕು ಜೀವಗಳು ಬಲಿಯಾಗುತ್ತಿರಲಿಲ್ಲ. ಪೊಲೀಸರ ಅಸೂಕ್ಷ್ಮತೆ ಸಾಮೂಹಿಕ ಹತ್ಯೆಗೆ ಕಾರಣ. ಆರೋಪಿಗಳನ್ನು ಬಂಧಿಸದೆ ಇದ್ದಲ್ಲಿ ಅಮೇಥಿಯಲ್ಲಿ ಪ್ರತಿಭಟನೆ ಆರಂಭಿಸಲಾಗುತ್ತದೆ,ʼ ಎಂದು ಎಚ್ಚರಿಕೆ ನೀಡಿದರು.

ಸಿಎಂ ಸಂತಾಪ: ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ʻಅಮೇಥಿ ಜಿಲ್ಲೆಯಲ್ಲಿ ನಡೆದ ಘಟನೆ ಖಂಡನೀಯ ಮತ್ತು ಅಕ್ಷಮ್ಯ. ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು,ʼ ಎಂದು ಹೇಳಿದ್ದಾರೆ. 

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಅಮೇಥಿಯ ಕಾಂಗ್ರೆಸ್ ಸಂಸದ ಕಿಶೋರಿ ಲಾಲ್ ಶರ್ಮಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹತ್ಯೆಯನ್ನು ಖಂಡಿಸಿರುವ ಸಿಪಿಐ (ಎಂಎಲ್) ರಾಜ್ಯ ಕಾರ್ಯದರ್ಶಿ ಸುಧಾಕರ್ ಯಾದವ್, ಸಿಎಂ ನಾಗರಿಕರ ಜೀವಗಳನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ. ರಾಯ್‌ಬರೇಲಿ ಎಸ್ಪಿ ಸೇರಿದಂತೆ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಸಿಪಿಐ (ಎಂಎಲ್) ರಾಯ್‌ಬರೇಲಿ ಜಿಲ್ಲಾಧಿಕಾರಿ ಕಚೇರಿ ಎದರುರು ಶುಕ್ರವಾರ ಪ್ರತಿಭಟನೆ ನಡೆಸಿತು.

Tags:    

Similar News