ಆಲ್ಟ್ ನ್ಯೂಸ್‌ನ ಸಹ-ಸಂಸ್ಥಾಪಕ ಮೊಹಮ್ಮದ್ ಝುಬೈರ್‌ಗೆ ಜೀವ ಬೆದರಿಕೆ
ಈ ಹಿಂದೆ ಇದೇ ರೀತಿಯ ದೂರು ದಾಖಲಿಸಿದಾಗ, ಕೆಲವು ತಿಂಗಳುಗಳ ನಂತರ ಎಫ್ಐಆರ್ ಮುಚ್ಚಲಾಗಿತ್ತು ಎಂದು ಝುಬೈರ್ ಆರೋಪಿಸಿದ್ದಾರೆ.;
ಫ್ಯಾಕ್ಟ್-ಚೆಕಿಂಗ್ ವೆಬ್‌ಸೈಟ್ ಆಲ್ಟ್ ನ್ಯೂಸ್‌ನ ಸಹ-ಸಂಸ್ಥಾಪಕ ಮೊಹಮ್ಮದ್ ಝುಬೈರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮನೆಯ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಬಹಿರಂಗಪಡಿಸಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಅವರು ಪೊಲೀಸ್ ದೂರು ಕೊಟ್ಟಿದ್ದಾರೆ.
ಪೊಲೀಸರು ಈವರೆಗೆ ಯಾವುದೇ ಎಫ್ಐಆರ್ ದಾಖಲಿಸಿಲ್ಲ ಎಂದು ತಿಳಿಸಿದ್ದಾರೆ.
ಝುಬೈರ್ ಅವರು ಸೋಮವಾರ ರಾತ್ರಿ ‘X’ ನಲ್ಲಿ ಪೋಸ್ಟ್ ಮಾಡಿದ್ದು, ಕೆಲವರು ತಮ್ಮ ಮನೆಯ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಸೋರಿಕೆ ಮಾಡಿದ್ದಾರೆ. ಅಲ್ಲದೆ, ತಮ್ಮ ವಿಳಾಸಕ್ಕೆ ಹಂದಿಮಾಂಸ ಕಳುಹಿಸುವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
"ನನಗೆ ಈಗಾಗಲೇ ಜೀವ ಬೆದರಿಕೆಗಳಿವೆ. ಇದು ಮೊದಲ ಬಾರಿಯಲ್ಲ. 2023ರಲ್ಲಿ ಇದೇ ವ್ಯಕ್ತಿ ನನ್ನ ವಿಳಾಸಕ್ಕೆ ಹಂದಿಮಾಂಸ ಕಳುಹಿಸಿ, ಶಿಪ್ಪಿಂಗ್ ವಿಳಾಸವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ. ನಾನು ಬೆಂಗಳೂರು ಪೊಲೀಸರಿಗೆ ದೂರು ದಾಖಲಿಸಿದ್ದೇನೆ. ಪೊಲೀಸರು ಈ ಬಾರಿಯಾದರೂ ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬ ವಿಶ್ವಾಸವಿದೆ," ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಹಿಂದೆ ಇದೇ ರೀತಿಯ ದೂರು ದಾಖಲಿಸಿದಾಗ, ಕೆಲವು ತಿಂಗಳುಗಳ ನಂತರ ಎಫ್ಐಆರ್ ಮುಚ್ಚಲಾಗಿತ್ತು ಎಂದು ಅವರು ಹೇಳಿದ್ದಾರೆ.
ತಮ್ಮ ವೈಯಕ್ತಿಕ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಸೋರಿಕೆ ಮಾಡಿದವರ ಹ್ಯಾಂಡಲ್‌ಗಳನ್ನು ಸಹ ಝುಬೈರ್ ಹಂಚಿಕೊಂಡಿದ್ದು, "ನನಗೂ ಮತ್ತು ಆ ವಿಳಾಸದಲ್ಲಿ ವಾಸಿಸುವ ನನ್ನ ಕುಟುಂಬಕ್ಕೂ ಬೆದರಿಕೆಯಿದೆ," ಎಂದು ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, "ಈ ಸಂಬಂಧ ಝುಬೈರ್ ಅವರಿಂದ ದೂರು ಸ್ವೀಕರಿಸಲಾಗಿದೆ. ಆದರೆ ಇನ್ನೂ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಝುಬೈರ್ ಅವರು ವಾಸಿಸುವ ಆರ್ ಟಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಈ ದೂರನ್ನು ವರ್ಗಾಯಿಸಲಾಗುವುದು," ಎಂದು ತಿಳಿಸಿದ್ದಾರೆ.