Beef Shortage in Goa | ಗೋರಕ್ಷಕರ ಕಿರುಕುಳ ಆರೋಪ: ಗೋವಾದಲ್ಲಿ ಗೋಮಾಂಸ ಕೊರತೆ
ಬಿಜೆಪಿ ಆಡಳಿತದ ಗೋವಾದಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಬರೆದ ಪತ್ರದಲ್ಲಿ, ಕಾನೂನುಬದ್ಧವಾಗಿ ಗೋಮಾಂಸ ಮಾರಾಟ ಮಾಡುವ ಅಂಗಡಿಗಳ ಮೇಲೆ ಬಲಪಂಥೀಯ ಹಿಂದೂ ಸಂಘಟನೆಗಳ ದಾಳಿ ಹೆಚ್ಚಾಗಿದೆ ಎಂದು ಆರೋಪಿಸಲಾಗಿದೆ
ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಗೆ ಮುಂಚಿತವಾಗಿ ಗೋವಾದಲ್ಲಿ ಗೋಮಾಂಸ ಕೊರತೆ ಎದುರಾಗುವ ಸಾಧ್ಯತೆ ಇದೆ. ಗೋರಕ್ಷಕ ಗುಂಪುಗಳ ಹೆಚ್ಚುತ್ತಿರುವ ಕಿರುಕುಳವನ್ನು ವಿರೋಧಿಸಿ ರಾಜ್ಯದ ಮಾಂಸ ವ್ಯಾಪಾರಿಗಳು ಮುಷ್ಕರ ನಡೆಸಲಿದ್ದು ಇದರಿಂದ ರೆಸ್ಟೋರೆಂಟ್‌ಗಳಲ್ಲಿ ಗೋಮಾಂಸದ ತೀವ್ರ ಕೊರತೆ ಉಂಟಾಗಲಿದೆ.
ಖುರೇಷಿ ಮಾಂಸ ವ್ಯಾಪಾರಿಗಳ ಸಂಘ (ಕ್ಯೂಎಂಟಿಎ) ಬ್ಯಾನರ್ ಅಡಿಯಲ್ಲಿ ಸೋಮವಾರ ಮುಷ್ಕರ ಆರಂಭಗೊಂಡಿದೆ. ಬಿಜೆಪಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಬರೆದ ಪತ್ರದಲ್ಲಿ, ಕಾನೂನುಬದ್ಧವಾಗಿ ಗೋಮಾಂಸ ಮಾರಾಟ ಮಾಡುವ ಅಂಗಡಿಗಳ ಮೇಲೆ ಬಲಪಂಥೀಯ ಹಿಂದೂ ಸಂಘಟನೆಗಳ ದಾಳಿ ಹೆಚ್ಚಾಗಿದೆ ಎಂದು ಆರೋಪಿಸಿದೆ.
"ಇತ್ತೀಚೆಗೆ ಮಡಂಗಾವ್‌ನಲ್ಲಿ ದಾಳಿ ನಡೆದಿದೆ. ಈ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾವು ಬಯಸುತ್ತೇವೆ. ನಮಗೆ ಸರ್ಕಾರದಿಂದ ರಕ್ಷಣೆ ಬೇಕು" ಎಂದು ಕ್ಯೂಎಂಟಿಎ ಸದಸ್ಯ ಅಬ್ದುಲ್ ಬೇಪಾರಿ ಹೇಳಿದರು.
ನಮ್ಮ ಮೇಲಿನ ದಾಳಿಯ ಕುರಿತು ದೂರುಗಳನ್ನು ಸ್ವೀಕರಿಸಿದರೂ ಪೊಲೀಸರು ಕ್ರಮ ತೆಗೆದುಕೊಳ್ಳಲು ವಿಫಲರಾಗಿದ್ದಾರೆ. ಮಾಂಸ ವ್ಯಾಪಾರಿಗಳು ತಮ್ಮ ಸುರಕ್ಷತೆಯ ಬಗ್ಗೆ ಸರ್ಕಾರದಿಂದ ಭರವಸೆ ಪಡೆಯುವವರೆಗೂ ಮುಷ್ಕರ ಮುಂದುವರಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ, ಕರಾವಳಿ ರಾಜ್ಯದಲ್ಲಿ ಪ್ರತಿದಿನ 20-25 ಟನ್ ಗೋಮಾಂಸ ಮಾರಾಟವಾಗುತ್ತದೆ. ಪ್ರವಾಸಿ ಮತ್ತು ಹಬ್ಬದ ಋತುಗಳಲ್ಲಿ ಮಾರಾಟ ಹೆಚ್ಚಾಗುತ್ತದೆ.
ಕಾಂಗ್ರೆಸ್ ಟೀಕೆ
ಕಾಂಗ್ರೆಸ್ ಶಾಸಕ ಕಾರ್ಲೋಸ್ ಅಲ್ವಾರೆಸ್ ಫೆರೇರಾ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯದಾದ್ಯಂತ ದಾಳಿಯ ಘಟನೆಗಳು ನಡೆಯುತ್ತಿವೆ ಎಂದು ಹೇಳಿದರು. "ಅದು ಮಾಂಸದ ವ್ಯಾಪಾರಿಗಳಾಗಿರಲಿ ಅಥವಾ ಯಾವುದೇ ಸಂಘಟನೆಯಾಗಿರಲಿ ಒಬ್ಬರು ಕಾನೂನಿಗೆ ಬದ್ಧರಾಗಿರಬೇಕು" ಎಂದು ಅವರು ಹೇಳಿದರು.
ಗೋಮಾಂಸ ಇದೆಯೇ ಎಂದು ಪರಿಶಿಲಿಸಲು ಮನೆಯೊಳಗೆ ನುಗ್ಗಿ ಫ್ರಿಜ್ ಅಥವಾ ಕಬೋರ್ಡ್ ಪರಿಶೀಲನೆ ನಡೆಸಲು ಆರಂಭಿಸಿದ್ದಾರೆ. "ಇದು ಸಂಪೂರ್ಣ ಅತಿಕ್ರಮಣ. ಮನೆಯೊಳಗೆ ಹೋಗಲು ಅವರಿಗೆ ಯಾವುದೇ ಅಧಿಕಾರವಿಲ್ಲ" ಎಂದು ಶಾಸಕರು ಹೇಳಿದರು.
ಗೋರಕ್ಷಕ ಗುಂಪುಗಳಿಗೆ ಅಂಗಡಿಗಳಿಗೆ ನುಗ್ಗುವ ಅಧಿಕಾರ ಇಲ್ಲ. ಆದಾಗ್ಯೂ ಆ ಗುಂಪುಗಳು ಅಂಗಡಿಗೆ ಬಂದು ಮಾಂಸ ಪರಿಶೀಲಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸುತ್ತವೆ ಎಂದು ಫೆರೇರಾ ಆರೋಪಿಸಿದ್ದಾರೆ.
"ಗೋರಕ್ಷಕ ಪಡೆಗಳು ಮಾನ್ಯತೆ ಪಡೆದ ಸಂಸ್ಥೆಗಳಿಗೆ ಸೇರಿದವರಲ್ಲ, ಅವರಿಗೆ ಅಂಗಡಿಗಳಿಗೆ ಪ್ರವೇಶಿಸಲು ಮತ್ತು ಅಂತಹ ಪರಿಶೀಲನೆ ನಡೆಸಲು ಯಾವುದೇ ಹಕ್ಕಿಲ್ಲ" ಎಂದು ಅವರು ಹೇಳಿದರು.
ಸರ್ಕಾರಿ ಸ್ವಾಮ್ಯದ ಗೋವಾ ಮೀಟ್ ಕಾಂಪ್ಲೆಕ್ಸ್ ಲಿಮಿಟೆಡ್ ಗೋಮಾಂಸ ಪೂರೈಸುತ್ತದೆ ಎಂದು ಮುಖ್ಯಮಂತ್ರಿ ಸಾವಂತ್ ಸೋಮವಾರ ಹೇಳಿದ್ದರು.