2006 ಮುಂಬೈ ರೈಲು ಸ್ಫೋಟ: 19 ವರ್ಷಗಳ ನಂತರ ಎಲ್ಲಾ 12 ಆರೋಪಿಗಳು ಖುಲಾಸೆ

2006 ಜುಲೈ 11, ರಂದು ಮುಂಬೈನ ಪಶ್ಚಿಮ ರೈಲ್ವೆ ಮಾರ್ಗದ ಸ್ಥಳೀಯ ರೈಲುಗಳಲ್ಲಿ ಏಳು ಕಡೆ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು.;

Update: 2025-07-21 05:11 GMT

ದೇಶವನ್ನೇ ಬೆಚ್ಚಿಬೀಳಿಸಿದ್ದ 2006ರ ಮುಂಬೈ ಸರಣಿ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಾಂಬೆ ಹೈಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದ್ದು, ಪ್ರಕರಣದ ಎಲ್ಲಾ 12 ಆರೋಪಿಗಳನ್ನು ಖುಲಾಸೆಗೊಳಿಸಿದೆ. "ಆರೋಪಿಗಳ ವಿರುದ್ಧ ದೋಷಾರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲವಾಗಿದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

180ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದ್ದ ಈ ಭೀಕರ ಭಯೋತ್ಪಾದಕ ದಾಳಿ ನಡೆದು 19 ವರ್ಷಗಳ ನಂತರ ಈ ತೀರ್ಪು ಹೊರಬಿದ್ದಿದೆ. ನ್ಯಾಯಮೂರ್ತಿಗಳಾದ ಅನಿಲ್ ಕಿಲೋರ್ ಮತ್ತು ಶ್ಯಾಮ್ ಚಂದಕ್ ಅವರನ್ನೊಳಗೊಂಡ ವಿಶೇಷ ಪೀಠ, ಪ್ರಾಸಿಕ್ಯೂಷನ್ ಒದಗಿಸಿದ ಸಾಕ್ಷ್ಯಗಳು ಆರೋಪಿಗಳನ್ನು ದೋಷಿಗಳೆಂದು ನಿರ್ಣಯಿಸಲು ಸಮರ್ಪಕವಾಗಿಲ್ಲ ಎಂದು ಹೇಳಿದೆ.

"ಆರೋಪಿಗಳು ಈ ಅಪರಾಧ ಎಸಗಿದ್ದಾರೆಂದು ನಂಬಲು ಕಷ್ಟಕರ. ಆದ್ದರಿಂದ, ಅವರ ಮೇಲಿನ ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ," ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಹಿಂದಿನ ತೀರ್ಪು ರದ್ದು

2015ರಲ್ಲಿ ವಿಶೇಷ ನ್ಯಾಯಾಲಯವು ಈ ಪ್ರಕರಣದಲ್ಲಿ 12 ಜನರನ್ನು ದೋಷಿಗಳೆಂದು ತೀರ್ಪು ನೀಡಿತ್ತು. ಅವರಲ್ಲಿ ಐವರಿಗೆ ಮರಣದಂಡನೆ ಮತ್ತು ಉಳಿದ ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇದೀಗ ಹೈಕೋರ್ಟ್ ಈ ಎರಡೂ ಶಿಕ್ಷೆಗಳನ್ನು ರದ್ದುಗೊಳಿಸಿ, ಆರೋಪಿಗಳನ್ನು ನಿರ್ದೋಷಿಗಳೆಂದು ತೀರ್ಪು ನೀಡಿದೆ. ಬೇರೆ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲದಿದ್ದರೆ, ಆರೋಪಿಗಳನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ

2006 ಜುಲೈ 11, ರಂದು ಮುಂಬೈನ ಪಶ್ಚಿಮ ರೈಲ್ವೆ ಮಾರ್ಗದ ಸ್ಥಳೀಯ ರೈಲುಗಳಲ್ಲಿ ಏಳು ಕಡೆ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ಈ ದುರ್ಘಟನೆಯಲ್ಲಿ 180ಕ್ಕೂ ಹೆಚ್ಚು ಅಮಾಯಕರು ಪ್ರಾಣ ಕಳೆದುಕೊಂಡು, ನೂರಾರು ಮಂದಿ ಗಾಯಗೊಂಡಿದ್ದರು.

Tags:    

Similar News