ಬೀದರ್ ಗುರುದ್ವಾರಕ್ಕೆ 2ನೇ ಬಾರಿ ಬಾಂಬ್ ಬೆದರಿಕೆ: ಸಿಎಂ ಕಚೇರಿಗೂ ಸ್ಫೋಟದ ಎಚ್ಚರಿಕೆ!
x

ಬೀದರ್ ಗುರುದ್ವಾರಕ್ಕೆ 2ನೇ ಬಾರಿ ಬಾಂಬ್ ಬೆದರಿಕೆ: ಸಿಎಂ ಕಚೇರಿಗೂ ಸ್ಫೋಟದ ಎಚ್ಚರಿಕೆ!

ಬೆದರಿಕೆ ಬಂದ ತಕ್ಷಣವೇ ಕಾರ್ಯಪ್ರವೃತ್ತರಾದ ಬೀದರ್ ಜಿಲ್ಲಾ ಪೊಲೀಸರು, ಗುರುದ್ವಾರದ ಸುತ್ತಮುತ್ತಲಿನ ಪ್ರದೇಶವನ್ನು ಬಂದ್ ಮಾಡಿ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದೊಂದಿಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.


ಬೀದರ್​ನಲ್ಲಿರುವ ಐತಿಹಾಸಿಕ ಗುರುನಾನಕ್ ಝೀರಾ ಸಾಹೇಬ್ ಗುರುದ್ವಾರಕ್ಕೆ ಒಂದೇ ವಾರದಲ್ಲಿ ಎರಡನೇ ಬಾರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ.ಇದೇ ಬೆದರಿಕೆಯಲ್ಲಿ ಮುಖ್ಯಮಂತ್ರಿಗಳ ಕಚೇರಿಯನ್ನು ಸ್ಫೋಟಿಸುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.

ಜುಲೈ 18 ರಂದು ಮೊದಲ ಬಾರಿಗೆ ಹಾಗೂ ಜುಲೈ 20 ರಂದು ಎರಡನೇ ಬಾರಿಗೆ "ಇಮ್ಯಾನುಯೆಲ್ ಶೇಖರನ್" ಎಂಬ ಹೆಸರಿನಿಂದ ಗುರುದ್ವಾರದ ಅಧಿಕೃತ ಇ-ಮೇಲ್‌ಗೆ ಬೆದರಿಕೆ ಸಂದೇಶ ಬಂದಿದೆ. "ಗುರುದ್ವಾರದ ಬಳಿ ಎರಡು ಆರ್‌ಡಿಎಕ್ಸ್ ಬಾಂಬ್‌ಗಳನ್ನು ಇರಿಸಲಾಗಿದೆ. ಗುರುದ್ವಾರದಲ್ಲಿ ಸ್ಫೋಟ ಸಂಭವಿಸಿದ 37 ನಿಮಿಷಗಳ ನಂತರ ಕರ್ನಾಟಕ ಮುಖ್ಯಮಂತ್ರಿಗಳ ಕಚೇರಿಯನ್ನೂ ಸ್ಫೋಟಿಸಲಾಗುವುದು" ಎಂದು ಸಂದೇಶದಲ್ಲಿ ಬರೆಯಲಾಗಿದೆ.

ಬೆದರಿಕೆ ಬಂದ ತಕ್ಷಣವೇ ಕಾರ್ಯಪ್ರವೃತ್ತರಾದ ಬೀದರ್ ಜಿಲ್ಲಾ ಪೊಲೀಸರು, ಗುರುದ್ವಾರದ ಸುತ್ತಮುತ್ತಲಿನ ಪ್ರದೇಶವನ್ನು ಬಂದ್ ಮಾಡಿ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದೊಂದಿಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಎಸ್‌ಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿ ಗುರುದ್ವಾರದ ಒಳಗೆ ಮತ್ತು ಹೊರಗೆ ಕೂಲಂಕಷವಾಗಿ ತಪಾಸಣೆ ನಡೆಸಿದ್ದು, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ.

ಮುಂಜಾಗ್ರತಾ ಕ್ರಮವಾಗಿ ಗುರುದ್ವಾರಕ್ಕೆ ಬರುವ ಯಾತ್ರಿಕರನ್ನು ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಅಲ್ಲದೆ, ನಗರದ ಪ್ರಮುಖ ಪ್ರವಾಸಿ ತಾಣಗಳಾದ ಪಾಪನಾಶ, ಝರಣಾ ನರಸಿಂಹ ದೇವಸ್ಥಾನದ ಸುತ್ತಲೂ ಭದ್ರತೆಯನ್ನು ಹೆಚ್ಚಿಸಿ, ಗಸ್ತು ತೀವ್ರಗೊಳಿಸಲಾಗಿದೆ. ವಾರದ ಅಂತರದಲ್ಲಿ ಎರಡು ಬಾರಿ ಗಂಭೀರ ಸ್ವರೂಪದ ಬೆದರಿಕೆ ಬಂದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

Read More
Next Story