Delhi Earthquake : ದೆಹಲಿಯಲ್ಲಿ ಭೂಕಂಪ; ಬೆಚ್ಚಿದ ಜನತೆ; ಸರ್ಕಾರದಿಂದ ಮುನ್ನೆಚ್ಚರಿಕೆ
Delhi Earthquake : ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಮಾಹಿತಿ ಪ್ರಕಾರ , ದೆಹಲಿಯ ಧೌಲಾ ಕುವಾನ್ನ ಪ್ರದೇಶದಲ್ಲಿ ಭೂಕಂಪದ ಕೇಂದ್ರಬಿಂದು ಇದ್ದು.ಐದು ಕಿಲೋಮೀಟರ್ ಆಳದಲ್ಲಿದೆ. ಬೆಳಿಗ್ಗೆ 5:36 ಕ್ಕೆ ಭೂಮಿ ಅಲ್ಲಾಡಿದೆ.;
ದೆಹಲಿ-ಎನ್‌ಸಿಆರ್ ಭಾಗಗಳಲ್ಲಿ ಫೆಬ್ರವರಿ 17 (ಸೋಮವಾರ) ಮುಂಜಾನೆ ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಭೂಕಂಪ ಉಂಟಾಗಿದೆ. ರಾಜಧಾನಿಯ ಹೊರವಲಯದಲ್ಲಿ ನಿವಾಸಿಗಳು ತೀವ್ರ ಕಂಪನಗಳನ್ನು ಅನುಭವಿಸಿದ್ದು, ಈವರೆಗೆ ಯಾವುದೇ ಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ.
ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿದ್ದು, ದೆಹಲಿಯ ಧೌಲಾ ಕುವಾನ್ನ ಪ್ರದೇಶದಲ್ಲಿ ಭೂಕಂಪದ ಕೇಂದ್ರಬಿಂದು ಇದ್ದು.ಐದು ಕಿಲೋಮೀಟರ್ ಆಳದಲ್ಲಿತ್ತು. ಬೆಳಿಗ್ಗೆ 5:36 ಕ್ಕೆ ಭೂಮಿ ಅಲ್ಲಾಡಿದೆ ಎಂದು ತಿಳಿಸಿದೆ.
ಧೌಲಾ ಕುವಾನ್ನ ದುರ್ಗಾಬಾಯಿ ದೇಶಮುಖ್ ಸ್ಪೆಷಲ್ ಎಜುಕೇಷನ್ ಕಾಲೇಜು ಸಮೀಪ ಭೂಕಂಪದ ಕೇಂದ್ರಬಿಂದು ಇತ್ತು ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
''ಆ ಪ್ರದೇಶದ ಸಮೀಪದಲ್ಲಿಯೇ ಒಂದು ಕೆರೆಯಿದೆ. ಅಲ್ಲಿ ಎರಡು ಅಥವಾ ಮೂರು ವರ್ಷಕ್ಕೊಮ್ಮೆ ಕಡಿಮೆ ತೀವ್ರತೆಯ ಭೂಕಂಪಗಳನ್ನು ಸಂಭವಿಸುತ್ತವೆ. 2015ರಲ್ಲಿ 3.3 ತೀವ್ರತೆಯ ಭೂಕಂಪವು ದಾಖಲಾಗಿತ್ತು,'' ಎಂದು ಅವರು ಮಾಹಿತಿ ನೀಡಿದ್ದಾರೆ.
''ಭೂಕಂಪ ಸಂಭವಿಸಿದಾಗ ಜೋರಾದ ಶಬ್ದವೂ ಕೇಳಿ ಬಂದಿದೆ,'' ಎಂದು ಅವರು ಹೆಚ್ಚುವರಿ ಮಾಹಿತಿ ನೀಡಿದ್ದಾರೆ.
ದೆಹಲಿ ಪೊಲೀಸ್ ಸಜ್ಜು
ದೆಹಲಿ ಪೊಲೀಸರು ಈ ಕುರಿತ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ತುರ್ತು ಪರಿಸ್ಥಿತಿಗಳಿಗಾಗಿ 112 ಸಂಖ್ಯೆಗೆ ಕರೆ ಮಾಡುವಂತೆ ನಿವಾಸಿಗಳಿಗೆ ಕೋರಿದ್ದಾರೆ.
"ಎಲ್ಲರೂ ಸುರಕ್ಷಿತರಾಗಿದ್ದೀರಿ ಎಂದು ಆಶಿಸುತ್ತೇವೆ," ಎಂದು ಪೊಲೀಸರು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಹೊರಗೆ ಓಡಿ ಬಂದ ನಿವಾಸಿಗಳು
ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಘಾಜಿಯಾಬಾದ್ ಪ್ರದೇಶದಲ್ಲಿರುವ ಹಲವು ಗಗನಚುಂಬಿ ಕಟ್ಟಡಗಳ ನಿವಾಸಿಗಳು ಭೂಕಂಪದ ತೀವ್ರ ಕಂಪನದ ಕಾರಣ ತಮ್ಮ ಮನೆಗಳ ಹೊರಗೆ ಓಡಿದ ಘಟನೆಯೂ ನಡೆದಿದೆ.
ನೋಯ್ಡಾ ಸೆಕ್ಟರ್ 20ರ ಇ ಬ್ಲಾಕ್ ನಲ್ಲಿ ಬೆಳಗಿನ ವಾಕಿಂಗ್ ಹೋಗಿದ್ದ 50 ವರ್ಷದ ಮಹಿಳೆ, ''ನಾವು ಪಾರ್ಕ್ನಲ್ಲಿ ವಾಕಿಂಗ್ ಮಾಡುತ್ತಿದ್ದೆವು. ಆದ್ದರಿಂದ ಹೆಚ್ಚು ಅನುಭವವಾಗಲಿಲ್ಲ. ಆದರೆ ಅಲುಗಾಟ ತೀವ್ರವಾಗಿತ್ತು. ಜನರು ಹೊರಗೆ ಓಡಿ ಬಂದಿದ್ದರು'" ಎಂದು ಹೇಳಿದ್ದಾರೆ.
ರೈಲು ನಿಂತಂತಾಯಿತು...
ಪಿಟಿಐ, ದೆಹಲಿ-ಎನ್‌ಸಿಆರ್ ಪ್ರದೇಶದ ಜನರು ಭಯಭೀತರಾಗಿ ತಮ್ಮ ಮನೆಗಳ ಹೊರಗೆ ಕಾಯುತ್ತಿರುವ ದೃಶ್ಯಗಳನ್ನು ಪ್ರಸಾರ ಮಾಡಿವೆ. .
ಪಶ್ಚಿಮ ದೆಹಲಿಯ ನಿವಾಸಿ ನರೇಶ್ ಕುಮಾರ್ ಎಂಬುವರು ಮಾತನಾಡಿ, ''ಇದುವರೆಗೆ ತಾವು ಇಷ್ಟು ಪ್ರಬಲ ಕಂಪನ ಅನುಭವಿಸಿಲ್ಲ,'' ಎಂದು ಹೇಳಿದ್ದಾರೆ.
ಪ್ರಯಾಗರಾಜ್ ಗೆ ಹೋಗಲು ನವದೆಹಲಿ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದ ರತನ್ ಲಾಲ್ ಶರ್ಮಾ ಎಂಬುವರು, ''ತಾವು ಪ್ಲಾಟ್ಫಾರ್ಮ್ನಲ್ಲಿ ನಿಂತಿದ್ದ ವೇಳೆ ಅಚಾನಕ್ ಜೋರಾಗಿ ತಳ್ಳಿದಂತೆ ಅನಿಸಿತು. ರೈಲು ಅಚಾನಕ್ ಆಗಿ ನಿಂತಂತೆ ಭಾಸವಾಯಿತು,'' ಎಂದು ಹೇಳಿದ್ದಾರೆ.
ಘಾಜಿಯಾಬಾದ್ನ ದೊಡ್ಡ ಅಪಾರ್ಟ್ಮೆಂಟ್ ನಿವಾಸಿಯೊಬ್ಬರು ಮಾತನಾಡಿ, ''ಕಂಪನಗಳು ತೀವ್ರವಾಗಿದ್ದರಿಂದ ಎಲ್ಲರೂ ಹೆದರಿ ಕೆಳಗೆ ಓಡಿದೆವು,'' ಎಂದು ಹೇಳಿದ್ದಾರೆ.
ಎಚ್ಚರಿಕೆ ವಹಿಸಲು ಮೋದಿ ಕರೆ
ಪ್ರಧಾನಮಂತ್ರಿ ನರೇಂದ್ರ ಮೋದಿ ''ಎಕ್ಸ್'' ಮೂಲಕ ಎಚ್ಚರಿಕೆ ವಹಿಸುವಂತೆ ಜನರಿಗೆ ಕರೆ ಕೊಟ್ಟಿದ್ದಾರೆ. ''ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಪನಗಳ ಅನುಭವವಾಗಿದೆಯೆಂಬ ಮಾಹಿತಿ ಬಂದಿದೆ. ಎಲ್ಲರೂ ಶಾಂತವಾಗಿ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು,'' ಎಂದು ಸಲಹೆ ನೀಡಿದ್ದಾರೆ.
ಆತಿಶಿ, ಕೇಜ್ರಿವಾಲ್ ಪ್ರತಿಕ್ರಿಯೆ
ಆಪ್ ನಾಯಕಿ ಹಾಗೂ ಮಾಜಿ ಸಿಎಂ ಆತಿಶಿ ಎಕ್ಸ್ ನಲ್ಲಿ, "ದೆಹಲಿಯಲ್ಲಿ ತೀವ್ರ ಭೂಕಂಪ ಸಂಭವಿಸಿದೆ. ಎಲ್ಲರೂ ಸುರಕ್ಷಿತರಾಗಿರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ," ಎಂದು ಬರೆದುಕೊಂಡಿದ್ದಾರೆ.
ಅವರ ಪೋಸ್ಟ್ ಅನ್ನು ಶೇರ್ ಮಾಡಿದ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, "ನಾನು ಎಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸುವೆ," ಎಂದು ಬರೆದುಕೊಂಡಿದ್ದಾರೆ.
"ದೆಹಲಿಯಲ್ಲಿ 10 ನಿಮಿಷಗಳ ಹಿಂದೆ ಭಾರೀ ಕಂಪನಗಳ ಅನುಭವವಾಯಿತು. ನಾವು ನಿದ್ರೆಯಿಂದ ಎದ್ದೆವು. ಎಲ್ಲರೂ ಸುರಕ್ಷಿತರಾಗಿರಲಿ" ಎಂದು ಎಐಸಿಸಿ ರಾಷ್ಟ್ರೀಯ ವಕ್ತಾರೆ ರಾಗಿಣಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ದೆಹಲಿ ಭೂಕಂಪ ಸೂಕ್ಷ್ಮ ಪ್ರದೇಶ?
ಏಪ್ರಿಲ್ 12, 2020ರಂದು ಉತ್ತರ ಪೂರ್ವ ದೆಹಲಿಯಲ್ಲಿ 3.5 ತೀವ್ರತೆಯ ಭೂಕಂಪ ಮತ್ತು ಮೇ 10, 2020 ರಂದು 3.4 ತೀವ್ರತೆಯ ಭೂಕಂಪ ಸಂಭವಿಸಿದ್ದವು. ಮೇ 29, 2020 ರಂದು ರೋಹ್ಟಕ್ (ದೆಹಲಿಯಿಂದ 50 ಕಿಲೋಮೀಟರ್ ಪಶ್ಚಿಮಕ್ಕೆ) ನಲ್ಲಿಯೂ 4.4 ತೀವ್ರತೆಯ ಭೂಕಂಪ ದಾಖಲಾಗಿದೆ. ಈ ರೀತಿಯಾಗಿ ದೆಹಲಿ ಭೂಕಂಪ ಸೂಕ್ಷ್ಮಪ್ರದೇಶ ಎನಿಸಿದೆ.
ಭಾರತದ ಭೂಕಂಪ ಸಾಧ್ಯತೆಯ ವಲಯದ ನಕ್ಷೆಯಲ್ಲಿ ದೆಹಲಿಯೂ ಇದೆ. ಈ ಪ್ರದೇಶವು ಹಿಮಾಲಯದ ಭೂಕಂಪಗಳ ಪರಿಣಾಮಗಳಿಗೆ ಒಳಗಾಗುವ ಸಾಧ್ಯತೆ ಹೊಂದಿದೆ.