Tirupati Laddu : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬೆರಕೆ ಪ್ರಕರಣ; ನಾಲ್ವರ ಬಂಧನ
Tirupati Laddu : ತುಪ್ಪ ಪೂರೈಕೆಗೆ ಎಆರ್ ಡೈರಿ ಹೆಸರಿನಲ್ಲಿ ವೈಷ್ಣವಿ ಡೈರಿಯ ಪ್ರತಿನಿಧಿಗಳು ಟೆಂಡರ್ ಪಡೆದಿದ್ದರು. ಟೆಂಡರ್ ಪ್ರಕ್ರಿಯೆಯಲ್ಲಿ ನಕಲಿ ದಾಖಲೆಗಳನ್ನು ಮತ್ತು ಸೀಲುಗಳನ್ನು ಬಳಸಲಾಗಿತ್ತು.;
ವಿಶ್ವ ಪ್ರಸಿದ್ಧ ತಿರುಪತಿ ದೇವಸ್ಥಾನದ ಲಡ್ಡು (Tirupati Laddu) ತಯಾರಿಕೆ ಪ್ರಕ್ರಿಯೆಯಲ್ಲಿ ದನ ಹಾಗೂ ಹಂದಿಯ ಟ್ಯಾಲೊ ಬಳಕೆ ಮಾಡಿದ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ನಾಲ್ವರನ್ನು ಬಂಧಿಸಿದೆ. ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕರಾಗಿರುವ (ರೂರ್ಕಿ, ಉತ್ತರಾಖಂಡ), ಬಿಪಿನ್ ಜೈನ್, ಪೊಮಿಲ್ ಜೈನ್, ವೈಷ್ಣವಿ ಡೈರಿ (ಪೂನಂಬಾಕ್ಕಂ) ಸಿಇಒ ಅಪೂರ್ವ ವಿನಯ್ ಕಾಂತ್ ಚಾವ್ಡಾ ಮತ್ತು ಎಆರ್ ಡೈರಿಯ (ದಿಂಡಿಗಲ್) ವ್ಯವಸ್ಥಾಪಕ ನಿರ್ದೇಶಕ ರಾಜು ರಾಜಶೇಖರನ್ ಬಂಧಿತರು.
ಆರೋಪಿಗಳನ್ನು ತಿರುಪತಿ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ದೇವಸ್ಥಾನಕ್ಕೆ ತುಪ್ಪ ಪೂರೈಕೆಯ ವೇಳೆ ಅಕ್ರಮಗಳು ನಡೆದಿರುವುದು ಸಿಬಿಐ ತನಿಖೆ ವೇಳೆ ದೃಢಪಟ್ಟಿದೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ.
ತುಪ್ಪ ಪೂರೈಕೆಗೆ ಎಆರ್ ಡೈರಿ ಹೆಸರಿನಲ್ಲಿ ವೈಷ್ಣವಿ ಡೈರಿಯ ಪ್ರತಿನಿಧಿಗಳು ಟೆಂಡರ್ ಪಡೆದಿದ್ದರು. ಟೆಂಡರ್ ಪ್ರಕ್ರಿಯೆಯಲ್ಲಿ ನಕಲಿ ದಾಖಲೆಗಳನ್ನು ಮತ್ತು ಸೀಲುಗಳನ್ನು ಬಳಸಲಾಗಿತ್ತು. ಉತ್ತರಾಖಂಡದ ರೂರ್ಕಿಯ ಭೋಲೆ ಬಾಬಾ ಡೈರಿಯಿಂದ ತುಪ್ಪ ಪಡೆಯುವುದಾಗಿ ವೈಷ್ಣವಿ ಡೈರಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಸಿಬಿಐ ತನಿಖೆಯಲ್ಲಿ ಗೊತ್ತಾಗಿದೆ.
ಸಣ್ಣ ಸಂಸ್ಥೆ, ದೊಡ್ಡ ಟೆಂಡರ್!
ಭೋಲೆ ಬಾಬಾ ಡೈರಿಗೆ ಬೃಹತ್ ಪ್ರಮಾಣದ ತುಪ್ಪ ಪೂರೈಸುವ ಸಾಮರ್ಥ್ಯ ಇಲ್ಲ. ಹೀಗಾಗಿ ಅಕ್ರಮಗಳ ವಾಸನೆ ಬಡಿದಿದ್ದು ನಾಲ್ವರನ್ನು ಬಂಧಿಸಲಾಗಿದೆ ಎಂದು ಸಿಬಿಐ ತಂಡ ಮಾಹಿತಿ ನೀಡಿದೆ.
ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿಯ ಲಾಡು ತಯಾರಿಸಲು ಪ್ರಾಣಿಗಳ ಕೊಬ್ಬಿನಾಂಶ ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದು ದೇಶಾದ್ಯಂತ ಹಿಂದೂಗಳ ಭಾವನೆಗೆ ಪೆಟ್ಟು ಕೊಟ್ಟಿತ್ತು. ದೊಡ್ಡ ಮಟ್ಟ ಸಂಚಲನ ಮೂಡಿಸಿ ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು.
ಪ್ರಕರಣದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಳಿಕ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿತ್ತು. ಪಂಚ ಸದಸ್ಯರ ತಂಡದಲ್ಲಿ ಸಿಬಿಐನ ಇಬ್ಬರು, ಆಂಧ್ರಪ್ರದೇಶ ಸರ್ಕಾರದ ಇಬ್ಬರು ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ (ಎಫ್‌ಎಸ್‌ಎಸ್‌ಎಐ) ಒಬ್ಬರಿದ್ದಾರೆ.
ಲಡ್ಡುಗಳನ್ನು ತಯಾರಿಸಲು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಪ್ರತಿದಿನ 15,000 ಕೆ.ಜಿ ತುಪ್ಪ ಬಳಸುತ್ತದೆ. ಎಆರ್ ಫುಡ್ಸ್ ಪ್ರತಿ ಕೆ.ಜಿಗೆ ₹320ರಂತೆ ತುಪ್ಪ ಪೂರೈಸುತ್ತಿದೆ. 2024ರ ಜುಲೈ 8ರಂದು ಎಂಟು ಟ್ಯಾಂಕರ್ ತುಪ್ಪ ಬಂದ ವೇಳೆ ಸ್ಯಾಂಪಲ್ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಜು. 17ರಂದು ಕಲಬೆರಕೆ ಪತ್ತೆಯಾಗಿತ್ತು.