100 ದಿನ ಪೂರೈಸಿದ 'ದೆಹಲಿ ಚಲೋ' ಪ್ರತಿಭಟನೆ
ಶಂಭು, ಖನೌರಿ ಗಡಿ ಬಿಂದುಗಳಲ್ಲಿ ರೈತರ ಸಮಾವೇಶ;
ಅಂಬಾಲಾ, ಮೇ 23: ರೈತರು ಬೆಳೆಗಳಿಗೆ ಎಂಎಸ್‌ಪಿ ಕಾನೂನು ಖಾತರಿ ಸೇರಿದಂತೆ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ 100 ದಿನ ಪೂರ್ಣಗೊಳಿಸಿದೆ.
ದಿನಾಚರಣೆಗೆ ರೈತರು ಶಂಭು ಮತ್ತು ಇತರ ಗಡಿ ಬಿಂದುಗಳಲ್ಲಿ ಜಮಾಯಿಸಿದ್ದಾರೆ. ಫೆಬ್ರವರಿ 13 ರಂದು ಭದ್ರತಾ ಪಡೆಗಳು 'ದೆಹಲಿ ಚಲೋ' ಮೆರವಣಿಗೆಯನ್ನು ತಡೆದ ನಂತರ ರೈತರು ಶಂಭು ಮತ್ತು ಖಾನೌರಿ ಗಡಿ ಬಿಂದುಗಳಲ್ಲಿ ಮೊಕ್ಕಾಂ ಹೂಡಿದ್ದಾರೆ. ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಮುಖಂಡ ಸರ್ವನ್ ಸಿಂಗ್ ಪಂಧೇರ್ ಮಾತನಾಡಿ, ʻಶಂಭು, ಖನೌರಿ ಮತ್ತು ದಬ್ವಾಲಿ ಗಡಿ ಬಿಂದುಗಳಲ್ಲಿ ರೈತರು ಜಮಾಯಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತರು ದೆಹಲಿಯತ್ತ ಹೋಗುವುದನ್ನು ತಡೆಯುತ್ತಿದೆ. ಪಂಜಾಬ್ ಮತ್ತು ಹರಿಯಾಣ ನಡುವಿನ ಗಡಿ ಬಿಂದುಗಳಲ್ಲಿ ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಿರುವುದು ಖಂಡನೀಯ,ʼ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಪಟಿಯಾಲಾಕ್ಕೆ ಭೇಟಿ ನೀಡಲಿದ್ದು, ಅವರಿಗೆ ರೈತರು ಪ್ರಶ್ನೆಗಳನ್ನು ಕೇಳಲು ಬಯಸಿದ್ದಾರೆ. ರೈತರಿಗೆ ಪ್ರವೇಶ ನೀಡದಿದ್ದರೆ ಧರಣಿ ನಡೆಸಲಾಗುತ್ತದೆ ಎಂದು ಹೇಳಿದರು.
ಮೋದಿ ಅವರು ಮೇ 23 ರಂದು ಪಟಿಯಾಲಾದಲ್ಲಿ ಮೊದಲ ಸಭೆ ನಡೆಸಲಿದ್ದಾರೆ. ಪಂಜಾಬಿನಲ್ಲಿ ಬಿಜೆಪಿ ಅಭ್ಯರ್ಥಿಗಳು ರೈತರಿಂದ ಪ್ರತಿಭಟನೆ ಎದುರಿಸುತ್ತಿದ್ದಾರೆ. ರೈತರು ಬಿಜೆಪಿ ನಾಯಕರಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಮತ್ತು ಕಪ್ಪು ಬಾವುಟ ಪ್ರದರ್ಶಿಸುತ್ತಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಸೇರಿದಂತೆ ತಮ್ಮ ಬೇಡಿಕೆಗಳನ್ನು ಅಂಗೀಕರಿಸದ ಕೇಂದ್ರದ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾಗಳು 'ದೆಹಲಿ ಚಲೋ' ಮೆರವಣಿಗೆಯನ್ನು ಮುನ್ನಡೆಸುತ್ತಿವೆ. ಪಂಜಾಬ್‌ನ 13 ಲೋಕಸಭೆ ಸ್ಥಾನಗಳಿಗೆ ಜೂನ್ 1 ರಂದು ಮತದಾನ ನಡೆಯಲಿದೆ.