ವಿಶೇಷ ನ್ಯಾಯಾಲಯ ದೂರು ಪರಿಗಣಿಸಿದ ಬಳಿಕ ಬಂಧಿಸಕೂಡದು: ಎಸ್‌ಸಿ

ಇಂಥ ಪ್ರಕರಣದಲ್ಲಿ ಪಿಎಂಎಲ್‌ಎ ಕಾಯಿದೆಯ ಸೆಕ್ಷನ್ 45 ರ ಅವಳಿ ಷರತ್ತುಗಳು ಅನ್ವಯಿಸುವುದಿಲ್ಲ:ನ್ಯಾಯಾಲಯ

Update: 2024-05-16 10:31 GMT

ʻವಿಶೇಷ ನ್ಯಾಯಾಲಯ ಅಕ್ರಮ ಹಣ ವರ್ಗಾವಣೆ ದೂರಿನ ವಿಚಾರಣೆ ಕೈಗೆತ್ತಿಕೊಂಡ ನಂತರ ಜಾರಿ ನಿರ್ದೇಶನಾಲಯ (ಇಡಿ) ಕಾಯಿದೆಯ ಸೆಕ್ಷನ್ 19 ರಡಿ ಆರೋಪಿಯನ್ನು ಬಂಧಿಸಲು ಸಾಧ್ಯವಿಲ್ಲ,ʼ ಎಂದು ಸುಪ್ರೀಂ ಕೋರ್ಟ್ ಗುರುವಾರ (ಮೇ 16) ತೀರ್ಪು ನೀಡಿದೆ. 

ನ್ಯಾಯಾಧೀಶರಾದ ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠ,ʼ ಸಮನ್ಸ್‌ನ ಅನ್ವಯ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ, ಇಡಿ ಅವನ/ಅವಳ ಕಸ್ಟಡಿಯನ್ನು ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆʼ ಎಂದಿದೆ. 

ʻನ್ಯಾಯಾಲಯ ಹೊರಡಿಸಿದ ಸಮನ್ಸ್‌ ಪಡೆದು ಆರೋಪಿ ಹಾಜರಾದಲ್ಲಿ, ಆತ ಕಸ್ಟಡಿಯಲ್ಲಿದ್ದಾನೆ ಎಂದು ಪರಿಗಣಿಸಲು ಆಗುವುದಿಲ್ಲʼ ಎಂದು ಪೀಠ ಹೇಳಿದೆ. ʻಸಮನ್ಸ್‌ ಪಡೆದು ನ್ಯಾಯಾಲಯದ ಮುಂದೆ ಹಾಜರಾದ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಹೀಗಾಗಿ, ಪಿಎಂಎಲ್‌ಎ ಕಾಯಿದೆಯ ಸೆಕ್ಷನ್ 45 ರ ಅವಳಿ ಷರತ್ತುಗಳು ಅನ್ವಯಿಸುವುದಿಲ್ಲ,ʼ ಎಂದು ನ್ಯಾಯಾಧೀಶರು ಹೇಳಿದರು. 

ʻಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಆರೋಪಿ ಜಾಮೀನಿಗೆ ಅರ್ಜಿ ಸಲ್ಲಿಸಿದಾಗ, ನ್ಯಾಯಾಲಯ ಮೊದಲು ಪಬ್ಲಿಕ್ ಪ್ರಾಸಿಕ್ಯೂಟರ್‌ನ ಹೇಳಿಕೆ ಆಲಿಸಬೇಕು. ಆರೋಪಿ ತಪ್ಪಿತಸ್ಥನಲ್ಲ ಮತ್ತು ಬಿಡುಗಡೆ ನಂತರ ಇಂಥದ್ದೇ ಮತ್ತೊಂದು ಅಪರಾಧ ಮಾಡುವ ಸಾಧ್ಯತೆಯಿಲ್ಲ ಎಂದು ಮನದಟ್ಟಾದಲ್ಲಿ ಮಾತ್ರ ಜಾಮೀನು ಕೊಡಬಹುದು ಎಂದು ಅವಳಿ ಷರತ್ತುಗಳು ಹೇಳುತ್ತವೆ. 

ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಕೂಡ ಜಾಮೀನಿಗಾಗಿ ಅವಳಿ ಪರೀಕ್ಷೆಯನ್ನು ಎದುರಿಸಬೇಕೇ ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಸುಪ್ರೀಂ ಈ ತೀರ್ಪು ನೀಡಿದೆ. 

Tags:    

Similar News