ಕಚ್ಚತೀವು ಬಗ್ಗೆ ಮತ್ತೆ ಪ್ರಸ್ತಾಪಿಸಿದ ಪ್ರಧಾನಿ
ಕಾಂಗ್ರೆಸ್, ಡಿಎಂಕೆ ದೇಶವನ್ನು ಕತ್ತಲೆಯಲ್ಲಿ ಇಡುತ್ತಿವೆ ಎಂದು ಆರೋಪ;
ಏಪ್ರಿಲ್ 10- ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷ ಆಡಳಿತಾರೂಢ ಡಿಎಂಕೆ ಮೇಲೆ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಚ್ಚತೀವು ದ್ವೀಪಕ್ಕೆ ಸಂಬಂಧಿಸಿದಂತೆ ʻದೇಶವನ್ನು ಕತ್ತಲೆಯಲ್ಲಿ ಇರಿಸಿವೆʼ ಮತ್ತು ʻಶಕ್ತಿʼ ಹೇಳಿಕೆ ಮೂಲಕ ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಂಡಿವೆ ಎಂದು ದೂರಿದರು.
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಡಿಎಂಕೆಯನ್ನು ಟೀಕಿಸಿದ ಪ್ರಧಾನಿ, ದ್ರಾವಿಡ ಪಕ್ಷ ಈ ವಿಷಯದ ಬಗ್ಗೆ ʻಮೊದಲ ಹಕ್ಕುಸ್ವಾಮ್ಯʼ ಹೊಂದಿದೆ ಮತ್ತು ರಾಜ್ಯವನ್ನು ಲೂಟಿ ಮಾಡುವ ಉದ್ದೇಶ ಹೊಂದಿದೆ ಎಂದರು.
ವೆಲ್ಲೂರಿನಲ್ಲಿ ಚುನಾವಣೆ ಸಭೆಯಲ್ಲಿ ಮಾತನಾಡಿ, ಡಿಎಂಕೆ ಒಂದು ʻಕುಟುಂಬ ಕಂಪನಿʼ. ತನ್ನ ʻಹಳೆಯ ಮನಸ್ಥಿತಿʼ ಯಿಂದ ರಾಜ್ಯದ ಯುವಕರ ಪ್ರಗತಿಯನ್ನುತಡೆಯುತ್ತಿದೆ. ಜನರನ್ನು ಭಾಷೆ, ಪ್ರದೇಶ, ನಂಬಿಕೆ ಮತ್ತು ಜಾತಿ ಮೇಲೆ ವಿಭಜಿಸುತ್ತದೆ. ಜನರಿಗೆ ಗೊತ್ತಾದ ದಿನ ಒಂದೇ ಒಂದು ಮತ ಸಿಗುವುದಿಲ್ಲ ಎಂದು ಡಿಎಂಕೆಗೆ ತಿಳಿದಿದೆ. ಡಿಎಂಕೆಯ ದಶಕಗಳ ಕಾಲದ ಅಪಾಯಕಾರಿ ರಾಜಕೀಯವನ್ನು ಬಹಿರಂಗಪಡಿಸಲು ನಿರ್ಧರಿಸಿದ್ದೇನೆʼ ಎಂದು ಹೇಳಿದರು.
ಕಚ್ಚತೀವು ವಿಷಯ ಪ್ರಸ್ತಾಪ: ʻ1974ರಲ್ಲಿ ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಾಗ, ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಡಿಎಂಕೆ ಅಧಿಕಾರದಲ್ಲಿದ್ದವು. ಯಾವ ಸಂಪುಟ ಸಭೆಯಲ್ಲಿ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಮತ್ತು ಯಾರಿಗೆ ʻಲಾಭʼ ಆಯಿತು ಎಂಬ ಪ್ರಶ್ನೆಗೆ ಕಾಂಗ್ರೆಸ್ ಉತ್ತರ ನೀಡಿಲ್ಲ. ದ್ವೀಪವನ್ನು ಬಿಟ್ಟುಕೊಟ್ಟ ನಂತರ ತಮಿಳುನಾಡಿನ ಮೀನುಗಾರರನ್ನು ಬಂಧಿಸಲಾಯಿತು ಮತ್ತು ಅವರ ದೋಣಿಗಳನ್ನು ವಶಪಡಿಸಿಕೊಳ್ಳಲಾಯಿತು. ಕಾಂಗ್ರೆಸ್ ಮತ್ತು ಡಿಎಂಕೆ ಅವರ ಮೇಲೆ ನಕಲಿ ಸಹಾನುಭೂತಿ ತೋರಿಸುತ್ತವೆʼ ಎಂದು ಆರೋಪಿಸಿದರು. ʻಆದರೆ, ಎನ್‌ಡಿಎ ಸರ್ಕಾರವು ಶ್ರೀಲಂಕಾದಲ್ಲಿ ಗಲ್ಲು ಶಿಕ್ಷೆಯಿಂದ ಐದು ಮೀನುಗಾರರನ್ನು ರಕ್ಷಿಸಿದೆʼ ಎಂದು ಹೇಳಿದರು.
ರಾಹುಲ್ ವಿರುದ್ಧ ವಾಗ್ದಾಳಿ: ರಾಜಕುಮಾರ ರಾಹುಲ್ ಗಾಂಧಿಯವರ ʻಶಕ್ತಿʼ ಟೀಕೆ ಬಗ್ಗೆ ಪ್ರತಿಕ್ರಿಯಿಸಿ, ಅವರು ʻಹಿಂದುಗಳು ನಂಬುವ ಶಕ್ತಿಯನ್ನು ನಾಶಪಡಿಸುವ ಮಾತನಾಡಿದ್ದಾರೆʼ ಎಂದು ಹೇಳಿದರು. ʻಅದು ಡಿಎಂಕೆಯ ಮನಸ್ಥಿತಿಯೂ ಹೌದು. ಅವರು ಸನಾತನ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ; ರಾಮ ಮಂದಿರ ಉದ್ಘಾಟನೆಯನ್ನು ಬಹಿಷ್ಕರಿಸುತ್ತಾರೆ. ಜೊತೆಗೆ ಹೊಸ ಸಂಸತ್ತಿನ ಕಟ್ಟಡದಲ್ಲಿ ಪವಿತ್ರ ಸೆಂಗೋಲ್ ಸ್ಥಾಪನೆ ವಿರೋಧಿಸುತ್ತಾರೆʼ ಎಂದು ಹೇಳಿದರು.
ʻಇಂಡಿಯ ಮೈತ್ರಿಕೂಟದವರು ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಬದುಕಿದ್ದಾಗ ʻಅಮ್ಮ ಜಯಲಲಿತಾʼ ಅವರನ್ನು ಡಿಎಂಕೆ ಹೇಗೆ ನಡೆಸಿಕೊಂಡಿತು ಎಂಬುದು ಎಲ್ಲರಿಗೂ ತಿಳಿದಿದೆ. ಬಿಜೆಪಿ ಮತ್ತು ಎನ್‌ಡಿಎಗೆ ನಿಮ್ಮ ಆಶೀರ್ವಾದ ಸನಾತನ ಶಕ್ತಿಯನ್ನು ರಕ್ಷಿಸುತ್ತದೆ ಮತ್ತು ಮಹಿಳೆಯರ ಗೌರವವನ್ನು ಖಚಿತಪಡಿಸುತ್ತದೆʼ ಎಂದು ಪ್ರಧಾನಿ ಹೇಳಿದರು.