Paris Olympics 2024 | ವಿನೇಶ್ ಅನರ್ಹತೆ ಹಿಂದೆ ಪಿತೂರಿ ಶಂಕೆ: ವಿಜೇಂದರ್ ಸಿಂಗ್

Update: 2024-08-07 10:58 GMT

ನವದೆಹಲಿ: ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಒಲಿಂಪಿಕ್ಸ್ ಫೈನಲ್‌ನಿಂದ ಅನರ್ಹಗೊಳಿಸಿರುವುದು ವಿಧ್ವಂಸಕ ಕೃತ್ಯ ಆಗಿರಬಹುದು ಎಂದು ಭಾರತದ ಬಾಕ್ಸಿಂಗ್ ಪಟು ವಿಜೇಂದರ್ ಸಿಂಗ್ ಆರೋಪಿಸಿದ್ದಾರೆ.

ಭಾರತದ ಏಕೈಕ ಒಲಿಂಪಿಕ್ ಪದಕ ವಿಜೇತ ಪುರುಷ ಬಾಕ್ಸರ್‌ ಆಗಿರುವ ವಿಜೇಂದರ್, ಪೋಗಟ್‌ ಅವರಂತಹ ಗಣ್ಯ ಕ್ರೀಡಾಪಟುಗಳು ಪ್ರಮುಖ ಸ್ಪರ್ಧೆಗಳಿಗೆ ಮುನ್ನ ತೂಕವನ್ನು ಕಡಿಮೆ ಮಾಡುವ ತಂತ್ರಗಳನ್ನು ಚೆನ್ನಾಗಿ ತಿಳಿದಿರುತ್ತಾರೆ. ಫೈನಲ್‌ಗೆ ಮುನ್ನ ವಿನೇಶ್ ತೂಕ 100 ಗ್ರಾಂ ಮೀರಿರುವುದು ಆಘಾತಕಾರಿ ಎಂದು ಹೇಳಿದರು. 

ʻಇದು ವಿಧ್ವಂಸಕ ಕೃತ್ಯ ಆಗಿರಬಹುದು ಎಂದು ನಾನು ಭಾವಿಸುತ್ತೇನೆ. 100 ಗ್ರಾಂ? ಕ್ರೀಡಾಪಟುಗಳು ರಾತ್ರಿಯೊಂದರಲ್ಲಿ 5 ರಿಂದ 6 ಕೆಜಿ ತೂಕ ಕಳೆದುಕೊಳ್ಳಬಹುದು. ನಮಗೆ ಹಸಿವು, ಬಾಯಾರಿಕೆ ಮತ್ತು ತೀವ್ರ ಪರಿಶ್ರಮವನ್ನು ಹೇಗೆ ನಿಭಾಯಿಸಬೇಕು ಎಂಬುದು ಗೊತ್ತಿರುತ್ತದೆ,ʼ ಮಧ್ಯಮ ತೂಕ (75 ಕೆಜಿ)ದ ಬಾಕ್ಸರ್ ಹೇಳಿದರು. 

ʻಭಾರತವು ಕ್ರೀಡಾ ರಾಷ್ಟ್ರವಾಗಿ ಬೆಳೆಯುವುದನ್ನು ನೋಡಲು ಸಂತೋಷಪಡದ ಜನರು ವಿಧ್ವಸಂಕ ಕೃತ್ಯ ನಡೆಸಿರಬಹುದು ಎನ್ನುವುದು ನನ್ನ ಅನಿಸಿಕೆ. ಈ ಹುಡುಗಿ ಸಾಕಷ್ಟು ಅನುಭವಿಸಿದ್ದಾಳೆ; ನಮ್ಮ ಎದೆ ಒಡೆಯುತ್ತದೆ. ಅವಳು ಬೇರೇನು ಮಾಡಬಹುದು?,ʼ ಎಂದು ಪ್ರಶ್ನಿಸಿದರು.

ʻವಿನೇಶ್ ಈ ರೀತಿ ತಪ್ಪು ಮಾಡುತ್ತಾರೆ ಎಂದು ನಂಬಲು ಸಾಧ್ಯವಿಲ್ಲ.ತೂಕವನ್ನು ಆಧರಿಸಿ ನಡೆಯುವ ಕಾಂಟ್ಯಾಕ್ಟ್ ಕ್ರೀಡೆಗಳ ಸ್ಪರ್ಧಿಗಳು, ತಮ್ಮ ವಿಭಾಗಗಳಲ್ಲಿ ಉಳಿದುಕೊಳ್ಳಲು ನೋವಿನ ಪ್ರಕ್ರಿಯೆಗಳ ಮೂಲಕ ಹಾದುಹೋಗಬೇಕಾ ಗುತ್ತದೆ. ದೀರ್ಘ ಕಾಲ ಹಸಿವು, ದ್ರವಗಳ ಸೇವನೆ ಕೂಡ ಮಾಡುವಂತಿರುವುದಿಲ್ಲ. ಹೆಚ್ಚುವರಿ ತೂಕ ತೆಗೆಯಲು ಕಂಬಳಿಗಳೊಳಗೆ ಕೂಡಿಹಾಕಿ, ಬೆವರು ಹರಿಸಲಾಗುತ್ತದೆ. ಹೊಟ್ಟೆಗೆ ಏನೂ ಹೋಗದಂತೆ ನಿರಂತರವಾಗಿ ಜೊಲ್ಲು ಉಗುಳಿರುವ ಸಂದರ್ಭಗಳಿವೆ. ಧರಿಸುವ ವಿಶೇಷ ಸೌನಾ ಸೂಟ್‌ಗಳು ಕುಲುಮೆಯಂತೆ ಇರುತ್ತವೆ. ತೂಕ ಇಳಿಸಿಕೊಳ್ಳಲು ಅವುಗಳನ್ನು ಧರಿಸುತ್ತಾರೆ,ʼ ಎಂದು ವಿವರಿಸಿದರು.

ಮೇರಿ ಕೋ‌ಮ್‌ ಬಹಿರಂಗಗೊಳಿಸಿದ ಸತ್ಯ: ಆರು ಬಾರಿಯ ವಿಶ್ವ ಚಾಂಪಿಯನ್ ಮಹಿಳಾ ಬಾಕ್ಸರ್ ಎಂಸಿ ಮೇರಿ ಕೋಮ್ ಅವರು ಸಂದರ್ಶನದಲ್ಲಿ ನಾಲ್ಕು ಗಂಟೆಗಳಲ್ಲಿ 2 ಕೆಜಿ ತೂಕ ಕಳೆದುಕೊಂಡಿದ್ದೆ ಎಂದು 2018 ರಲ್ಲಿ ಹೇಳಿದ್ದರು.

ಮೇರಿ ಕೋಮ್‌ ಅವರು ಪೋಲೆಂಡಿನಲ್ಲಿ ಆ ವರ್ಷದ ಮೂರನೇ ಚಿನ್ನ ಪಡೆದರು. ಸಂದರ್ಶನದಲ್ಲಿ ಅವರು ಹೇಳಿದರು-ʻನಾವು ಬೆಳಗ್ಗೆ 3-3.30 ರ ಸುಮಾರಿಗೆ ಪೋಲೆಂಡಿಗೆ ಬಂದಿಳಿದೆವು. ನನ್ನ ಸ್ಪರ್ಧಿಸುವ ವರ್ಗದ 48 ಕೆಜಿಗಿಂತ ಒಂದೆರಡು ಕಿಲೋಗ್ರಾಂ ಹೆಚ್ಚು ತೂಕ ಹೊಂದಿದ್ದೆ. ಅದನ್ನು ಕಳೆದುಕೊಳ್ಳಲು ಸರಿಸುಮಾರು ನಾಲ್ಕು ಗಂಟೆ ಕಾಲಾವಕಾಶ ಇದ್ದಿತ್ತು. 7.30ರ ಸುಮಾರಿಗೆ ತೂಕ ಹಾಕಲಾಗುತ್ತಿತ್ತು. ಅಧಿಕ ತೂಕ ಹೊಂದಿದ್ದಕ್ಕಾಗಿ ಅನರ್ಹಳಾಗುತ್ತಿದ್ದೆ.ಒಂದು ಗಂಟೆ ಕಾಲ ನಿರಂತರವಾಗಿ ಹಗ್ಗದಾಟ ಆಡಿದೆ. ವಿಮಾನ ಬಹುತೇಕ ಖಾಲಿಯಿತ್ತು. ಕಾಲು ಗಳನ್ನು ಚಾಚಿ ಮಲಗಿದೆ. ಇದರಿಂದ ವಿಮಾನದಿಂದ ಇಳಿಯುವಾಗ ಸ್ನಾಯುಗಳು ಬಿಗಿದುಕೊಂಡಿಲಿಲ್ಲ. ಇಲ್ಲವಾದರೆ, ಸ್ಪರ್ಧಿಸಲು ಅವಕಾಶ ಸಿಗುತ್ತಿರಲಿಲ್ಲ,ʼ ಎಂದು ಅವರು ಬಹಿರಂಗಪಡಿಸಿದ್ದರು.

Tags:    

Similar News