Paris Olympics 2024 | ವಿನೇಶ್ ಫೋಗಟ್, ನೀರಜ್ ಚೋಪ್ರಾ ಫೈನಲ್‌ಗೆ
ಭಾರತವು 44 ವರ್ಷಗಳ ನಂತರ ಮೊದಲ ಬಾರಿಗೆ ಒಲಿಂಪಿಕ್ಸ್‌ನ ಹಾಕಿ ಫೈನಲ್‌ಗೆ ಪ್ರವೇಶಿಸುವ ಸುವರ್ಣ ಅವಕಾಶವನ್ನು ಕಳೆದುಕೊಂಡಿತು; ಜರ್ಮನಿ ಎದುರು 2-3 ರಿಂದ ಸೋಲೊಪ್ಪಿತು.;
ವಿನೇಶ್ ಫೋಗಟ್ ಅವರು ಒಲಿಂಪಿಕ್ ಫೈನಲ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟುವಾಗಿ ಹೊರಹೊಮ್ಮಿದ್ದಾರೆ. ಕೋಪಗೊಂಡ ಆದರೆ ಏಕಾಗ್ರತೆಯ ಮನಸ್ಸು ಏನನ್ನು ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟರು. ಆದರೆ, ಜಾವೆಲಿನ್ ಥ್ರೋ ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ಅವರು ಅರ್ಹತೆ ಪಂದ್ಯದಲ್ಲಿ ಅಗ್ರ ಸ್ಥಾನವನ್ನು ಗಳಿಸುವ ಸಮಯದಲ್ಲಿ ಶಾಂತವಾಗಿದ್ದರು.
ಆದರೆ, ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ತಂಡವು ಜರ್ಮನಿ ವಿರುದ್ಧ 2-3 ಗೋಲುಗಳಿಂದ ಸೋಲುಂಡಿದ್ದು, 44 ವರ್ಷಗಳಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್‌ನ ಹಾಕಿ ಫೈನಲ್‌ಗೆ ಪ್ರವೇಶಿಸುವ ಸುವರ್ಣ ಅವಕಾಶವನ್ನು ಕಳೆದುಕೊಂಡಿತು. ತಂಡ ಕಂಚಿನ ಪದಕಕ್ಕಾಗಿ ಸ್ಪೇನ್ ವಿರುದ್ಧ ಸೆಣಸಲಿದೆ.
ವಿನೇಶ್ ಬೆಳ್ಳಿಯ ಭರವಸೆ: ಆ ದಿನದ ವಿಶೇಷವೆಂದರೆ, ವಿನೇಶ್ ಮತ್ತು ಅವರ ದೃಢತೆ. ರಾಷ್ಟ್ರೀಯ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳದ ಪ್ರತಿಭಟನೆಯನ್ನು ಮುನ್ನಡೆಸಿದ್ದ ಅವರು ಒಂದು ವರ್ಷದ ಹೆಚ್ಚಿನ ಸಮಯವನ್ನು ಕಳೆದುಕೊಂಡಿದ್ದರು. ಆನಂತರ, ಸೆಮಿಫೈನಲ್‌ನಲ್ಲಿ 50 ಕೆಜಿ ವಿಭಾಗದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಸೋಲಿಸಿದರು.
ಪದಕದ ಬಣ್ಣ ಏನೇ ಇರಲಿ, ಭಾರತಕ್ಕೆ ನಾಲ್ಕನೇ ಪದಕ ಖಚಿತವಾಗಿದೆ. ಶೂಟಿಂಗಿನಲ್ಲಿ ಇದುವರೆಗೆ ಗಳಿಸಿದ ಮೂರು ಕಂಚಿಗಿಂತ ಒಂದು ಹೆಜ್ಜೆ ಮುಂದೆ ಇರುತ್ತದೆ.
ವಿನೇಶ್(29) ಅವರ ಒಲಿಂಪಿಕ್ಸ್ ಅಭಿಯಾನವು ಹಾಲಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಜಪಾನ್‌ನ ಯುಯಿ ಸುಸಾಕಿ ವಿರುದ್ಧ 3-2 ಗೆಲುವಿನೊಂದಿಗೆ ಪ್ರಾರಂಭವಾಯಿತು. ಆಧುನಿಕ ದಿನದ ದಂತಕಥೆಯಾಗಿರುವ ಸುಸಾಕಿ ಅವರು ಈವರೆಗೆ 82 ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಅಜೇಯರಾಗಿ ಉಳಿದಿದ್ದರು.
ವಿನೇಶ್ ಆನಂತರ ವಿಶ್ವದ 7 ನೇ ಶ್ರೇಯಾಂಕದ ಉಕ್ರೇನಿಯನ್ ಆಟಗಾರ್ತಿ ಒಸ್ತವಾ ಲಿವಾಚ್ ಅವರನ್ನು ಕೆಡವಿದರು; ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರೊಂದಿಗೆ 5-0 ಗೆಲುವಿನಿಂದ ಅಗ್ರ ಸ್ಥಾನ ತಲುಪಿದರು.ಸುಸಾಕಿ ಮೇಲೆ ಜಯ ಸಾಧಿಸಿದ ನಂತರ ವಿನೇಶ್ ಜೋರಾಗಿ ಕೂಗು ಹಾಕಿದರು. ಆನಂತರ, ಎದುರಾಳಿಗಳನ್ನು ಸೋಲಿಸಿದ ಬಳಿಕವೂ ಭಾವನೆಗಳನ್ನು ಹೊರ ಹಾಕಲಿಲ್ಲ.
ʻನಾಳೆ ಒಂದು ಪ್ರಮುಖ ದಿನ. ಆನಂತರ ಮಾತನಾಡುತ್ತೇನೆ,ʼ ಎಂದು ಪತ್ರಕರ್ತರಿಗೆ ತಿಳಿಸಿದರು. ತಾಯಿಗೆ ವಿಡಿಯೋ ಕರೆ ಮಾಡಿ ಮಾತನಾಡಿ ಚಿನ್ನವನ್ನು ಮರಳಿ ತರುವುದಾಗಿ ಭರವಸೆ ನೀಡಿದರು. ವಿನೇಶ್ ಅಮೆರಿಕದ ಸಾರಾ ಆನ್ ಹಿಲ್ಡೆಬ್ರಾಂಡ್ ವಿರುದ್ಧ ಸೆಣಸಲಿದ್ದಾರೆ.
ನೀರಜ್ ಅವರ ದೈತ್ಯ ಎಸೆತ: ಹಾಲಿ ಚಾಂಪಿಯನ್ ಚೋಪ್ರಾ ಅವರು ಅರ್ಹತಾ ಸುತ್ತಿನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ 89.34 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ಪುರುಷರ ಜಾವೆಲಿನ್ ಥ್ರೋ ಫೈನಲ್‌ಗೆ ಪ್ರವೇಶಿಸಿದರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರ ಅರ್ಹತಾ ಸುತ್ತಿನಲ್ಲಿ ಆರಂಭಿಕ ಎಸೆತದಲ್ಲಿ 84 ಮೀಟರ್ ಗುರಿ ದಾಟಿ, ಬಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿದ್ದರು.
ಅವರ ವೃತ್ತಿಜೀವನದ ಎರಡನೇ ಅತ್ಯುತ್ತಮ ಎಸೆತವು ಅವರ ಫಿಟ್‌ನೆಸ್ ಕುರಿತ ಸಂಶಯಗಳನ್ನು ಬದಿಗೆ ಸರಿಸಿತು. ಚೋಪ್ರಾ ಹಾಲಿ ವಿಶ್ವ ಚಾಂಪಿಯನ್ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ(ಎ ಮತ್ತು ಬಿ ಗುಂಪಪು ಒಳಗೊಂಡು). ಎರಡು ಬಾರಿಯ ವಿಶ್ವ ಚಾಂಪಿಯನ್ ಗ್ರೆನಡಾದ ಆಂಡರ್ಸನ್ ಪೀಟರ್ಸ್ (88.63 ಮೀ) ಬಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 87.76 ಅಂಕಗಳೊಂದಿಗೆ ಎ ಗ್ರೂಪ್ ನಲ್ಲಿ ಜರ್ಮನಿಯ ಜೂಲಿಯನ್ ವೆಬರ್ ಮೂರನೇ ಸ್ಥಾನ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪಾಕಿಸ್ತಾನದ ಅರ್ಷದ್ ನದೀಮ್ ಕೂಡ ಬಿ ಗುಂಪಿನಲ್ಲಿ 86.59 ಮೀ ಎಸೆದು ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.
ಡೋಹಾ ಡೈಮಂಡ್ ಲೀಗ್‌ನಲ್ಲಿ ಈ ವರ್ಷ ಚೋಪ್ರಾ ಅವರನ್ನು ಸೋಲಿಸಿದ ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ಅವರು 7ನೇ ಸ್ಥಾನದಲ್ಲಿದ್ದಾರೆ. ಕಣದಲ್ಲಿದ್ದ ಇನ್ನೊಬ್ಬ ಭಾರತೀಯ ಕಿಶೋರ್ ಜೆನಾ ಅವರು 80.73 ಮೀಟರ್‌ಗಳ ಕಳಪೆ ಎಸೆತದ ಮೂಲಕ ಸ್ಪರ್ಧೆಯಿಂದ ಹೊರಗುಳಿದರು.
ಫೈನಲ್‌ನಲ್ಲಿ ಚೋಪ್ರಾ ಜಯ ಗಳಿಸಿದರೆ, ಒಲಿಂಪಿಕ್ ಜಾವೆಲಿನ್ ಥ್ರೋ ಇತಿಹಾಸದಲ್ಲಿ ಐದನೇ ಆಟಗಾರನಾಗುವ ಅವಕಾಶ ಹೊಂದಿರುತ್ತಾರೆ. ಅವರು ಚಿನ್ನ ಸೇರಿದಂತೆ ಯಾವುದೇ ಪದಕವನ್ನು ಗೆದ್ದರೂ, ವೈಯಕ್ತಿಕ ಕ್ರೀಡೆಯಲ್ಲಿ ಒಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕ ಗಳಿಸಿದ ಭಾರತೀಯ ಆಗುತ್ತಾರೆ.
ಷಟ್ಲರ್ ಪಿ.ವಿ. ಸಿಂಧು (ಒಂದು ಬೆಳ್ಳಿ, ಒಂದು ಕಂಚು), ಕುಸ್ತಿಪಟು ಸುಶೀಲ್ ಕುಮಾರ್ (ಒಂದು ಬೆಳ್ಳಿ, ಒಂದು ಕಂಚು) ಮತ್ತು ಶೂಟರ್ ಮನು ಭಾಕರ್ (ಎರಡು ಕಂಚು) ಗೆದ್ದಿದ್ದಾರೆ.
ಹಾಕಿಯಲ್ಲಿ ಸೋಲು: 44 ವರ್ಷಗಳ ಬಳಿಕ ಚೊಚ್ಚಲ ಫೈನಲ್ ಮೇಲೆ ಕಣ್ಣಿಟ್ಟಿದ್ದ ಭಾರತ ತಂಡ ಜರ್ಮನಿ ವಿರುದ್ಧ 2-3 ಅಂತರದಿಂದ ಸೋತಿತು. ತಂಡ ಈಗ ಕಂಚಿನ ಪದಕದ ಪ್ಲೇಆಫ್‌ನಲ್ಲಿ ಸ್ಪೇನ್ ಅನ್ನು ಎದುರಿಸಲಿದೆ. ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ (7ನೇ ನಿಮಿಷ) ಮತ್ತು ಸುಖಜೀತ್ ಸಿಂಗ್ (36ನೇ ನಿಮಿಷ) ಹಾಗೂ ಜರ್ಮನಿ ಪರ ಗೊಂಜಾಲೊ ಪೆಯಿಲತ್ (18ನೇ ನಿಮಿಷ), ಕ್ರಿಸ್ಟೋಫರ್ ರುಹ್ರ್ (27ನೇ ನಿಮಿಷ) ಮತ್ತು ಮಾರ್ಕೊ ಮಿಲ್ಟ್‌ಕೌ (54ನೇ ನಿಮಿಷ) ಗೋಲು ಗಳಿಸಿದರು. ಫೈನಲ್‌ನಲ್ಲಿ ಜರ್ಮನಿಯು ನೆದರ್ಲೆಂಡ್ಸ್ ವಿರುದ್ಧ ಸೆಣಸಲಿದೆ.
ಮೀರಾಬಾಯಿ ಚಾನು ಇಂದು ಸ್ಪರ್ಧೆ: ಮೀರಾಬಾಯಿ ಚಾನು (49 ಕೆಜಿ) ಬುಧವಾರ (ಆಗಸ್ಟ್ 7) ಅವರು ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಭಾರತದ ಮೊದಲ ವೇಟ್‌ಲಿಫ್ಟರ್ ಆಗಲು ಪ್ರಯತ್ನಿಸಲಿದ್ದಾರೆ. ಟೋಕಿಯೊ 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅವರು 201 ಕೆಜಿ (88 ಕೆಜಿ + 113 ಕೆಜಿ) ಎತ್ತಿದ್ದರು. ಟೋಕಿಯೊದಲ್ಲಿ 202 ಕೆಜಿ (87 ಕೆಜಿ+115 ಕೆಜಿ) ಮೂಲಕ ಬೆಳ್ಳಿ ಗೆದ್ದಿದ್ದರು.