ವಿನೇಶ್ ಫೋಗಟ್ ಕುಸ್ತಿಗೆ ವಿದಾಯ
ನನ್ನ ಧೈರ್ಯ ಸೇರಿದಂತೆ ಎಲ್ಲವೂ ಭಗ್ನಗೊಂಡಿದೆ ಎಂದು ಫೋಗಟ್ ಹೇಳಿದ್ದಾರೆ. ಅನರ್ಹಗೊಳ್ಳುವ ಮೊದಲು ಅವರು ಒಲಿಂಪಿಕ್ಸ್‌ನ ತಮ್ಮ ವಿಭಾಗದಲ್ಲಿ ಚಿನ್ನದ ಪದಕ ಹಂತವನ್ನು ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಇತಿಹಾಸ ಬರೆದಿದ್ದರು.
ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ನಂತರ ನಿವೃತ್ತಿ ಘೋಷಿಸಿದ್ದಾರೆ; ಮುಂದುವರಿಯಲು ನನಗೆ ಶಕ್ತಿ ಇಲ್ಲ ಎಂದು ಹೇಳಿದ್ದಾರೆ.
ಬುಧವಾರ (ಆಗಸ್ಟ್ 7) 50 ಕೆಜಿ ವಿಭಾಗದ ಚಿನ್ನದ ಪದಕದ ಸ್ಪರ್ಧೆಗೆ ಮುಂಚಿತವಾಗಿ 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕಾಗಿ ಅನರ್ಹಗೊಂಡಿದ್ದರು. ನಿವೃತ್ತಿ ನಿರ್ಧಾರವನ್ನು ಎಕ್ಸ್‌ನ ಪೋಸ್ಟ್‌ನಲ್ಲಿ ಪ್ರಕಟಿಸಿದ್ದಾರೆ.
ಕುಸ್ತಿ ಗೆದ್ದಿದೆ, ನಾನು ಸೋತಿದ್ದೇನೆ: ತಾಯಿ ಪ್ರೇಮಲತಾ ಅವರನ್ನು ಉದ್ದೇಶಿಸಿ ವಿನೇಶ್ ಬರೆದಿದ್ದಾರೆ; ʻಮಾ, ಕುಸ್ತಿ ಗೆದ್ದಿದೆ. ನಾನು ಸೋತಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ. ನಿಮ್ಮ ಕನಸುಗಳು ಮತ್ತು ನನ್ನ ಧೈರ್ಯ ಸೇರಿದಂತೆ ಎಲ್ಲವೂ ಮುರಿದುಹೋಗಿದೆ. ನನಗೆ ಈಗ ಹೆಚ್ಚಿನ ಶಕ್ತಿ ಇಲ್ಲ. 2001-2024ರ ಕುಸ್ತಿಗೆ ವಿದಾಯ. ನಾನು ನಿಮ್ಮೆಲ್ಲರಿಗೂ ಋಣಿಯಾಗಿದ್ದೇನೆ. ನನ್ನನ್ನು ಕ್ಷಮಿಸಿ,ʼ ಎಂದು ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಕಂಚಿನ ಪದಕ ವಿಜೇತೆ ಹೇಳಿದ್ದಾರೆ.
ವಿನೇಶ್ ಒಲಿಂಪಿಕ್ಸ್ ಫೈನಲ್‌ನಿಂದ ಅನರ್ಹಗೊಳಿಸಿದ್ದನ್ನು ವಿರೋಧಿಸಿ, ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ(ಸಿಎಎಸ್)ದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಜಂಟಿ ಬೆಳ್ಳಿ ಪದಕವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.
ಅನರ್ಹತೆ ವಿರುದ್ಧ ಮೇಲ್ಮನವಿ: ತೂಕ ಕಡಿಮೆಗೊಳಿಸಲು ಹಸಿವು, ದ್ರವವನ್ನುಸೇವಿಸದೆ ಇರುವುದು ಮತ್ತು ರಾತ್ರಿಯಿಡೀ ಬೆವರುವುದು ಇತ್ಯಾದಿಯಿಂದ ಉಂಟಾದ ತೀವ್ರ ನಿರ್ಜಲೀಕರಣದಿಂದ ಅವರು ದಿನದ ಹೆಚ್ಚಿನ ಭಾಗವನ್ನು ಗೇಮ್ಸ್ ಹಳ್ಳಿಯೊಳಗಿನ ಪಾಲಿಕ್ಲಿನಿಕ್‌ನಲ್ಲಿ ಕಳೆದರು.
ಒಲಿಂಪಿಕ್ ಕ್ರೀಡಾಕೂಟದಲ್ಲಿ ಅಥವಾ ಉದ್ಘಾಟನಾ ಸಮಾರಂಭದ ನಂತರದ 10 ದಿನಗಳ ಅವಧಿಯಲ್ಲಿ ಉದ್ಭವಿಸುವ ಯಾವುದೇ ವಿವಾದಗಳನ್ನು ಪರಿಹರಿಸಲು ಸಿಎಎಸ್ ತಾತ್ಕಾಲಿಕ ವಿಭಾಗವನ್ನು ಇಲ್ಲಿ ಸ್ಥಾಪಿಸಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಆಕೆಯ ಮನವಿಯನ್ನು ತೆಗೆದುಕೊಳ್ಳಲಾಗುತ್ತದೆ.
ತೂಕದ ನಿಯಮದಲ್ಲಿ ಬದಲಾವಣೆ ಇಲ್ಲ: ಸೆಮಿಫೈನಲ್‌ನಲ್ಲಿ ವಿನೇಶ್‌ಗೆ ಸೋತ ಕ್ಯೂಬಾದ ಕುಸ್ತಿಪಟು ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರು ಅಮೆರಿಕದ ಸಾರಾ ಆನ್ ಹಿಲ್ಡೆಬ್ರಾಂಡ್ ವಿರುದ್ಧ ಫೈನಲ್‌ನಲ್ಲಿ ವಿನೇಶ್ ಅವರ ಸ್ಥಾನವನ್ನು ಪಡೆದಿದ್ದಾರೆ. ಹಿಡೆಬ್ರಾಂಡ್ ಚಿನ್ನ ಗೆದ್ದಿದ್ದಾರೆ. ವಿನೇಶ್ ಈಗ ಲೋಪೆಜ್ ಅವರೊಂದಿಗೆ ಜಂಟಿ ಬೆಳ್ಳಿ ಪದಕ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಆದರೆ, ಅಂತಾರಾಷ್ಟ್ರೀಯ ಆಡಳಿತ ಮಂಡಳಿ(ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್, UWW) ತೂಕದ ನಿಯಮವನ್ನು ಬದಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಥ್ಲೀಟ್ ತೂಕದ ಅವಶ್ಯಕತೆಗಳನ್ನು ಪೂರೈಸಿದ ದಿನದಿಂದ ಕುಸ್ತಿಪಟುವಿನ ಫಲಿತಾಂಶಗಳನ್ನು ಅನರ್ಹಗೊಳಿಸಬಾರದು ಎಂಬ ಐಒಎ ಸಲಹೆಯನ್ನು ಚರ್ಚಿಸಲಾಗುತ್ತದೆ ಎಂದು ಯುಡಬ್ಲ್ಯುಡಬ್ಲ್ಯು ಅಧ್ಯಕ್ಷರು ಹೇಳಿದರು.
ʻಸೂಕ್ತ ವೇದಿಕೆಯಲ್ಲಿ ಈ ಸಲಹೆಯನ್ನು ಚರ್ಚಿಸಲಾಗುತ್ತದೆ. ಆದರೆ ಅದನ್ನು ಪೂರ್ವಾನ್ವಯ ಮಾಡಲು ಆಗುವುದಿಲ್ಲ,ʼ ಎಂದು ಅಧ್ಯಕ್ಷ ನೆನಾದ್ ಲಾಲೋವಿಕ್ ಅವರು ಐಒಎ ಮುಖ್ಯಸ್ಥೆ ಪಿ.ಟಿ. ಉಷಾ ಅವರನ್ನು ಭೇಟಿಯಾದ ನಂತರ ಹೇಳಿದ್ದಾರೆ.
ಪ್ರಮುಖ ಸಾಧನೆ: ವಿನೇಶ್ ತನ್ನ ವಿಭಾಗದಲ್ಲಿ ಚಿನ್ನದ ಪದಕವನ್ನು ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಇತಿಹಾಸವನ್ನು ಬರೆದಿದ್ದಾರೆ. ಅನರ್ಹತೆಗೆ ಮುನ್ನ ಅವರಿಗೆ ಕನಿಷ್ಠ ಬೆಳ್ಳಿ ಪದಕ ಖಚಿತವಾಗಿತ್ತು. ವಿನೇಶ್ ಮೂರು ಬಾರಿ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿದ್ದು, ಏಷ್ಯನ್ ಮತ್ತು ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.