ವಿನೇಶ್ ಫೋಗಟ್ ಮನವಿ ವಜಾ; ಪಿ.ಟಿ.‌ಉಷಾ ಟೀಕೆ

ವಿನೇಶ್ ಅವರು ಕ್ಯೂಬಾದ ಕುಸ್ತಿಪಟು ಯುಸ್ನೆಲಿಸ್ ಗುಜ್ಮಾನ್ ಲೋಪೆಜ್ ಅವರೊಂದಿಗೆ ಜಂಟಿ ಬೆಳ್ಳಿ ಪದಕವನ್ನು ನೀಡುವಂತೆ ಮನವಿ ಮಾಡಿದ್ದರು. ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು ವಿನೇಶ್‌ ಅವರು ಸೆಮಿ-ಫೈನಲ್‌ನಲ್ಲಿ ಸೋಲಿಸಿ ನಂತರ ಫೈನಲ್‌ಗೆ ಬಡ್ತಿ ಪಡೆದಿದ್ದರು.;

Update: 2024-08-15 07:18 GMT

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕಕ್ಕಾಗಿ ಕುಸ್ತಿಪಟು ವಿನೇಶ್ ಫೋಗಟ್ ಅವರು ಮಾಡಿದ ಮನವಿಯನ್ನು ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ (ಸಿಎಎಸ್) ತಿರಸ್ಕರಿಸಿರುವುದನ್ನು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಟೀಕಿಸಿದೆ. ವಿನೇಶ್ ಅವರನ್ನು ಬೆಂಬಲಿಸುವ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಸಿಎಎಸ್ ಬುಧವಾರ (ಆಗಸ್ಟ್ 14) ವಿನೇಶ್ ಅವರ ಮನವಿಯನ್ನು ವಜಾಗೊಳಿಸಿದೆ, ಈ ಮೂಲಕ ಒಲಿಂಪಿಕ್ ಪದಕ ಪಡೆಯುವ ಭರವಸೆಯನ್ನು ನುಚ್ಚುನೂರು ಮಾಡಿದೆ. ಕ್ಯೂಬಾದ ಕುಸ್ತಿಪಟು ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರೊಂದಿಗೆ ಜಂಟಿ ಬೆಳ್ಳಿ ಪದಕವನ್ನು ನೀಡಬೇಕೆಂದು ಅವರು ಮನವಿ ಮಾಡಿದ್ದರು. ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು ವಿನೇಶ್‌ ಅವರು ಸೆಮಿ-ಫೈನಲ್‌ನಲ್ಲಿ ಸೋಲಿಸಿ ನಂತರ ಫೈನಲ್‌ಗೆ ಬಡ್ತಿ ಪಡೆದಿದ್ದರು. ಆದರೆ ಅವರು ತೂಕದ ಕಾರಣಕ್ಕೆ ಫೈನಲ್ಸ್‌ನಿಂದ ಅನರ್ಹಗೊಂಡಿದ್ದರು.

ಈ ತೀರ್ಪಿನಿಂದ ಐಒಎ ಅಧ್ಯಕ್ಷೆ ಪಿಟಿ ಉಷಾ ಆಘಾತ ಮತ್ತು ನಿರಾಶೆ ವ್ಯಕ್ತಪಡಿಸಿದ್ದಾರೆ.

IOA ತನ್ನ ಹೇಳಿಕೆಯಲ್ಲಿ, “2024 ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ನೀಡುವಂತೆ ವಿನೇಶ್ ಅವರ ಅರ್ಜಿಯನ್ನು ವಜಾಗೊಳಿಸಿದೆ. ತೀರ್ಪು ಪ್ರಕಟಿಸಲು ಆಗಸ್ಟ್ 16ರವರೆಗೆ ಗಡುವು ವಿಸ್ತರಣೆಯನ್ನು ಘೋಷಿಸಿದ್ದರೂ, ಬುಧವಾರ ಸಂಜೆಯೇ ತೀರ್ಪು ಹೊರಬಂದಿದೆ. ಇದು ನಿಜಕ್ಕೂ ಬೇಸರದ ಸಂಗತಿ. ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು (ಸಿಎಎಸ್) ನ ತಾತ್ಕಾಲಿಕ ವಿಭಾಗವು ಈ ನಿರ್ಧಾರ ಹೇಳಿದೆ. ವಿನೇಶ್ ಫೋಗಟ್ ಅವರು 2024ರ ಆಗಸ್ಟ್ 7ರಂದು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಸಿಎಎಸ್ ತೀರ್ಪು ನೀಡಿದೆ ಇದು ಸರಿಯಲ್ಲʼʼ ಎಂದು ಹೇಳಿದೆ.

ʻʻವಿನೇಶ್‌ ಅವರ 100 ಗ್ರಾಂಗಳ ಕನಿಷ್ಠ ವ್ಯತ್ಯಾಸ ಮತ್ತು ಅದರ ಪರಿಣಾಮವು ಅವರ ವೃತ್ತಿಜೀವನದ ವಿಷಯದಲ್ಲಿ ಮಾತ್ರವಲ್ಲದೆ, ಅಸ್ಪಷ್ಟ ನಿಯಮಗಳು ಮತ್ತು ಅವುಗಳ ವ್ಯಾಖ್ಯಾನದ ಬಗ್ಗೆ ಗಂಭೀರವಾದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಎರಡನೇ ದಿನದಂದು ತೂಕದ ವ್ಯತ್ಯಾಸ ಆಗಿರುವುದಕ್ಕೆ ಅನರ್ಹಗೊಳಿಸಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ನಮ್ಮ ಕಾನೂನು ಪ್ರತಿನಿಧಿಗಳು ಏಕಮಾತ್ರ ಮಧ್ಯಸ್ಥಗಾರರ ಮುಂದೆ ತಮ್ಮ ಸಲ್ಲಿಕೆಗಳಲ್ಲಿ ಇದನ್ನು ಸರಿಯಾಗಿ ಹೊರತಂದಿದ್ದಾರೆʼʼ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ʻʻವಿನೇಶ್ ಗೆ ಆಗಿರುವ ಅನ್ಯಾಯದ ವಿಷಯವು ವಾದಯೋಗ್ಯವಾಗಿದ್ದು, ಅಮಾನವೀಯ ನಿಯಮಗಳನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿಕೆಯಲ್ಲಿ ಹೇಳಲಾಗಿದೆ, ಅದು ಕ್ರೀಡಾಪಟುಗಳು, ವಿಶೇಷವಾಗಿ ಮಹಿಳಾ ಕ್ರೀಡಾಪಟುಗಳು ಅನುಭವಿಸುವ ದೈಹಿಕ ಮತ್ತು ಮಾನಸಿಕ ಒತ್ತಡಗಳನ್ನು ಗಣನೆಗೆ ತೆಗೆದುಕೊಳ್ಳಲು ವಿಫಲವಾಗಿದೆ. ಕ್ರೀಡಾಪಟುಗಳ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಹೆಚ್ಚು ಸಮಾನ ಮತ್ತು ಸಮಂಜಸವಾದ ಮಾನದಂಡಗಳ ಅಗತ್ಯವನ್ನು ಇದು ಸಂಪೂರ್ಣವಾಗಿ ನೆನಪಿಸುತ್ತದೆʼʼ ಎಂದು ಅದು ಹೇಳಿದೆ.

"ಸಿಎಎಸ್ ಆದೇಶ ನೀಡಿದ ಬಳಿಕವೂ IOA ವಿನೇಶ್ ಫೋಗಾಟ್‌ಗೆ ಸಂಪೂರ್ಣ ಬೆಂಬಲವನ್ನು ನೀಡುವುದನ್ನು ಮುಂದುವರೆಸಿದೆ ಮತ್ತು ಹೆಚ್ಚಿನ ಕಾನೂನು ಆಯ್ಕೆಗಳನ್ನು ಹುಡುಕುತ್ತದೆ. ವಿನೇಶ್ ಪ್ರಕರಣದ ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಐಒಎ ಬದ್ಧವಾಗಿದೆ. ಇದು ಕ್ರೀಡೆಯಲ್ಲಿ ನ್ಯಾಯ ಮತ್ತು ನ್ಯಾಯಸಮ್ಮತತೆಯನ್ನು ಪ್ರತಿಪಾದಿಸುವುದನ್ನು ಮುಂದುವರಿಸುತ್ತದೆ, ಕ್ರೀಡಾಪಟುಗಳು ಮತ್ತು ಕ್ರೀಡಾ ವಲಯದಲ್ಲಿರುವ ಪ್ರತಿಯೊಬ್ಬರ ಹಕ್ಕುಗಳು ಮತ್ತು ಘನತೆಯನ್ನು ಎಲ್ಲಾ ಸಮಯದಲ್ಲೂ ಎತ್ತಿಹಿಡಿಯುವುದನ್ನು ಖಾತ್ರಿಪಡಿಸುತ್ತದೆʼʼ ಎಂದು ಐಒಎ ಹೇಳಿಕೆಯಲ್ಲಿ ತಿಳಿಸಿದೆ.

Tags:    

Similar News