Paris Olympics 2024| ಭಾರತಕ್ಕೆ ಹಾಕಿ ಕಂಚು: ಹರ್ಮನ್‌ಪ್ರೀತ್ ತಂಡಕ್ಕೆ ಶ್ಲಾಘನೆಯ ಮಹಾಪೂರ

Update: 2024-08-09 07:28 GMT
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪುರುಷರ ಹಾಕಿಯಲ್ಲಿ ಸ್ಪೇನ್ ವಿರುದ್ಧ ಗೆಲುವು ಸಾಧಿಸಿದ ನಂತರ ಭಾರತೀಯ ಆಟಗಾರರು ಸಂಭ್ರಮಿಸಿದರು.

ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡದ ಕಂಚಿನ ಪದಕ ಸಾಧನೆಯು ದೇಶಾದ್ಯಂತ ಲಕ್ಷಾಂತರ ಜನರಿಗೆ ಹರ್ಷ ತಂದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ದಂತಕಥೆ ಶೂಟರ್ ಅಭಿನವ್ ಬಿಂದ್ರಾ ಅವರು ಹರ್ಮನ್‌ಪ್ರೀತ್ ಸಿಂಗ್ ತಂಡಕ್ಕೆ ಗೌರವ ಸಲ್ಲಿಸಿದ್ದಾರೆ. 

ಭಾರತವು 41 ವರ್ಷಗಳ ಬಳಿಕ ಟೋಕಿಯೊದಲ್ಲಿ 2021 ರಲ್ಲಿ ಕಂಚಿನ ಪದಕವನ್ನು ಗೆದ್ದಿತ್ತು. ಮೂರು ವರ್ಷಗಳ ನಂತರ ಪ್ಯಾರಿಸ್‌ನಲ್ಲಿ ತಂಡ ಸತತ ಎರಡನೇ ಪದಕವನ್ನು ಗೆದ್ದಿದೆ. ಭಾರತ 1968 ಮತ್ತು 1972ರ ಒಲಿಂಪಿಕ್ಸ್‌ ನಲ್ಲಿ ಕಂಚಿನ ಪದಕಗಳನ್ನು ಗೆದ್ದಿತ್ತು. 

ಪ್ರಚಂಡ ಸಂಕಲ್ಪದ ಪ್ರದರ್ಶನ: ʻಒಲಿಂಪಿಕ್ಸ್‌ನಲ್ಲಿ ಸತತವಾಗಿ 2 ಪದಕ ಗೆಲ್ಲುವ ಐತಿಹಾಸಿಕ ಸಾಧನೆ ಮೂಲಕ ತಂಡವು ಪ್ರಚಂಡ ಸಂಕಲ್ಪವನ್ನು ತೋರಿದೆ,ʼ ಎಂದು ಪ್ರಧಾನಿ ಮೋದಿ ಹೇಳಿದರು. 

ʻಮುಂದಿನ ತಲೆಮಾರುಗಳು ಅನುಸರಿಸಬೇಕಾದ ಸಾಧನೆ! ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡ ಕಂಚಿನ ಪದಕ ಗೆದ್ದಿದೆ! ಒಲಿಂಪಿಕ್ಸ್‌ನಲ್ಲಿ ಅವರ ಸತತ ಎರಡನೇ ಪದಕವಾಗಿರುವುದು ವಿಶೇಷ. ಅವರ ಯಶಸ್ಸು ಕೌಶಲ, ಪರಿಶ್ರಮ ಮತ್ತು ತಂಡದ ಮನೋಭಾವದ ವಿಜಯ. ತಂಡ ಅಗಾಧವಾದ ಸ್ಥೈರ್ಯ ಮತ್ತು ಪುಟಿದೇಳುವ ಸಾಮರ್ಥ್ಯವನ್ನು ತೋರಿಸಿದೆ. ಆಟಗಾರರಿಗೆ ಅಭಿನಂದನೆಗಳು,ʼ ಎಂದು ಮೋದಿ ಎಕ್ಸ್‌ ನಲ್ಲಿ ಬರೆದಿದ್ದಾರೆ. 

ʻಭಾರತೀಯರು ಹಾಕಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಈ ಸಾಧನೆ ರಾಷ್ಟ್ರದ ಯುವಕರಲ್ಲಿ ಕ್ರೀಡೆಯನ್ನು ಇನ್ನಷ್ಟು ಜನಪ್ರಿಯಗೊಳಿಸುತ್ತದೆ,ʼ ಎಂದು ಹೇಳಿದರು. 

ಅಪ್ರತಿಮ ವಿಜಯ: ವೈಯಕ್ತಿಕ ಒಲಿಂಪಿಕ್ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಅಭಿನವ್ ಬಿಂದ್ರಾ, ಇದೊಂದು ಅಪ್ರತಿಮ ವಿಜಯ. ಮುಂದಿನ ಪೀಳಿಗೆಗಳು ನೆನಪಿಸಿಕೊಳ್ಳುತ್ತವೆ,ʼ ಎಂದು ಹೇಳಿದರು. 

ʻಭಾರತೀಯ ಪುರುಷರ ಹಾಕಿ ತಂಡ ಚಿನ್ನದ ಹೊಳಪಿನಿಂದ ಹೊಳೆಯುವ ಕಂಚಿನ ಪದಕವನ್ನು ಮನೆಗೆ ತಂದಿದೆ. ತ್ರಿವರ್ಣ ಧ್ವಜವನ್ನು ಧರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ತಲೆಮಾರುಗಳ ನಂತರವೂ ನಮ್ಮ ಹೃದಯದಲ್ಲಿ ಪ್ರತಿಧ್ವನಿಸುತ್ತದೆ,ʼ ಎಂದು 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ರೈಫಲ್ ಚಿನ್ನ ಗಳಿಸಿದ ಬಿಂದ್ರಾ ಬರೆದಿದ್ದಾರೆ. 

ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್, ಇದೊಂದು ಉತ್ತಮ ಪ್ರಯತ್ನ ಎಂದು ಬಣ್ಣಿಸಿದರು.ʻಸತತ ಎರಡನೇ ಕಂಚಿನ ಪದಕ ಗಳಿಸಿದ ಭಾರತೀಯ ಪುರುಷರ ಹಾಕಿ ತಂಡಕ್ಕೆ ಅನೇಕ ಅಭಿನಂದನೆಗಳು. ನಮ್ಮ ಹುಡುಗರ ಅತ್ಯುತ್ತಮ ಪ್ರಯತ್ನ,ʼ ಎಂದು ಹೇಳಿದರು. 

ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ, ಅರ್ಧ ಶತಮಾನದ ಬಳಿಕ ಸತತ ಎರಡು ಪದಕ ಗಳಿಸಿದ ಐತಿಹಾಸಿಕ ಸಾಧನೆ ಎಂದು ಎಕ್ಸ್‌ ನಲ್ಲಿ ಬಣ್ಣಿಸಿದ್ದಾರೆ.

ʻಈ ಗೆಲುವು ಭಾರತೀಯ ಆಟಗಾರರ ಬದ್ಧತೆಗೆ ಸಾಕ್ಷಿ,ʼಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ದಾರೆ. ʻಈ ಗೆಲುವು ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣ ಮತ್ತು ನಿಮ್ಮ ಸಮರ್ಪಣೆಗೆ ಸಾಕ್ಷಿಯಾಗಿದೆ,ʼ ಎಂದು ಮಾಂಡವೀಯ ಹೇಳಿದರು. 

Tags:    

Similar News