IPL 2024 | ಐಪಿಎಲ್‌ಗೆ ವಿದಾಯ ಹೇಳಿದ ಡಿಕೆ: ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಪಂದ್ಯ
ಅಹದಾಬಾದ್‌ನಲ್ಲಿ ಬುಧವಾರ ನಡೆದ ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲನುಭವಿಸಿದೆ. ದಿನೇಶ್ ಕಾರ್ತಿಕ್ ಈ ಬಾರಿಯ ಐಪಿಎಲ್‌ನಲ್ಲಿ RCBಗೆ ಟ್ರೋಫಿ ಗೆದ್ದುಕೊಟ್ಟು ವಿದಾಯ ಹೇಳುವ ನಿರೀಕ್ಷೆಯಲ್ಲಿದ್ದರು. ಆದರೆ ಅವರ ಕನಸು ನನಸಾಗಲೇ ಇಲ್ಲ. ಇತ್ತ ಆರ್‌ಸಿಬಿ ತಂಡ ಐಪಿಎಲ್‌ನಿಂದ ಹೊರಬೀಳುತ್ತಿದ್ದಂತೆ ದಿನೇಶ್ ಕಾರ್ತಿಕ್ ಕೂಡ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಆರ್‌ಸಿಬಿ ಮ್ಯಾಚ್ ಫಿನಿಶರ್ ದಿನೇಶ್ ಕಾರ್ತಿಕ್ ಅವರು ಐಪಿಎಲ್ 2024ರ ಆರಂಭಕ್ಕೂ ಮುನ್ನವೇ ಇದು ನನ್ನ ವೃತ್ತಿಜೀವನದ ಕೊನೆಯ ಸೀಸನ್ ಎಂದು ಘೋಷಿಸಿದ್ದರು. ಹೀಗಾಗಿ ಈ ಸೀಸನ್ ಆರಂಭವಾದಾಗಿನಿಂದಲೂ ಆರ್‌ಸಿಬಿ ಫ್ಯಾನ್ಸ್‌ಗಳು ಡಿಕೆ ಕಂಡಾಗ ಭಾವುಕವಾಗುತ್ತಿದ್ದರು. ದಿನೇಶ್ ಕಾರ್ತಿಕ್ ಅವರು ತಮ್ಮ ಆಟದ ವೈಖರಿ ಮೂಲಕ ಆರ್‌ಸಿಬಿ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಗಳಿಸಿದ್ದಾರೆ. ದಿನೇಶ್ ಕಾರ್ತಿಕ್ ಅವರಿಗೋಸ್ಕರವಾದರೂ ಆರ್‌ಸಿಬಿ ಫೈನಲ್ ತಲುಪಿ ಕಪ್ ಗೆಲ್ಲಬೇಕು, ಅವರಿಗೆ ಸಾರ್ಥಕ ವಿದಾಯ ಹೇಳಬೇಕು ಎಂದು ಅಭಿಮಾನಿಗಳು ಕನಸು ಕಟ್ಟಿದ್ದರು. ಆದರೆ, ಅದು ಕನಸಾಗಿಯೇ ಉಳಿಯಿತು.
ರಾಜಸ್ತಾನ್ ವಿರುದ್ಧದ ಸೋಲಿನ ನಂತರ ಆರ್‌ಸಿಬಿ ತಂಡ ಕ್ರೀಡಾಂಗಣದಿಂದ ಮರಳುತ್ತಿದ್ದಾಗ ದಿನೇಶ್ ಕಾರ್ತಿಕ್ ಅವರು ಮುಂಚೂಣಿಯಲ್ಲಿದ್ದರು. ಅವರು ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್‌ಗಳನ್ನು ಮೇಲಕ್ಕೆತ್ತಿ ಪ್ರೇಕ್ಷಕರತ್ತ ತೋರಿಸಿ ಡ್ರೆಸ್ಸಿಂಗ್ ರೂಂನತ್ತ ತೆರಳಿದಾಗ ಅವರ ದೇಹಭಾಷೆ ಮತ್ತು ನಡವಳಿಕೆಯು ಇದು ಅವರ ವೃತ್ತಿಜೀವನದ ಕೊನೆಯ ಪಂದ್ಯ ಎಂದು ಸ್ಪಷ್ಟವಾಗಿ ಸೂಚಿಸುತ್ತಿತ್ತು. ದಿನೇಶ್ ಕಾರ್ತಿಕ್ ಅವರು ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್‌ಗಳನ್ನು ಮೇಲಕ್ಕೆತ್ತಿ ಪ್ರೇಕ್ಷಕರತ್ತ ತೋರಿಸಿದಾಗ ಆರ್‌ಸಿಬಿ ಅಭಿಮಾನಿಗಳ ಕಣ್ಣು ತುಂಬಿ ಬಂತು. ಅಯ್ಯೋ ನಿಮಗೋಸ್ಕರವಾದರೂ ಫೈನಲ್‌ಗೆ ತಲುಪಿಲ್ಲ ಅಲ್ವಾ ಎಂದು ಆರ್‌ಸಿಬಿ ಫ್ಯಾನ್ಸ್ ಮನದಾಳ ಹೇಳುವಂತಿತ್ತು. ಡಿಕೆ ತೆರಳುತ್ತಿದ್ದಾಗ ಇಡೀ ಮೈದಾನವೇ ಸೈಲೆಂಟ್ ಆಗಿ ಎದ್ದು ನಿಂತು ಅವರಿಗೆ ವಿದಾಯ ಹೇಳಿತು.
ಈ ವೇಳೆ ವಿರಾಟ್ ಕೋಹ್ಲಿ ಅವರು ದಿನೇಶ್ ಕಾರ್ತಿಕ್ ಅವರನ್ನು ತಬ್ಬಿಕೊಂಡರು. ಈ ಕ್ಷಣವಂತೂ ವಿಶೇಷವಾಗಿ ಆರ್‌ಸಿಬಿ ಬೆಂಗಳೂರು ಅಭಿಮಾನಿಗಳ ಮನವನ್ನು ಕದಡುವಂತಿತ್ತು. ದಿನೇಶ್ ಕಾರ್ತಿಕ್ ಆರ್‌ಸಿಬಿ ಅಭಿಮಾನಿಗಳ ಹೃದಯ ಗೆದ್ದಿದ್ದರು. ಪ್ರತೀ ಪಂದ್ಯದಲ್ಲೂ ತನ್ನ ಆಟದ ಮೂಲಕ ಆರ್‌ಸಿಬಿ ಫ್ಯಾನ್ಸ್‌ಗಳಲ್ಲಿ ಒಂದು ಭರವಸೆಯ ಕಿಚ್ಚನ್ನು ಹಚ್ಚಿದ್ದರು. ಆದರೆ ಇನ್ಮುಂದೆ ಅವುಗಳೆಲ್ಲವೂ ನೆನಪು ಮಾತ್ರ...
ಐಪಿಎಲ್ ಇತಿಹಾಸದಲ್ಲಿ ಡಿಕೆ ಹೆಜ್ಜೆಗುರುತು
17 ವರ್ಷಗಳ ಐಪಿಎಲ್ ಹಾದಿಯಲ್ಲಿ ದಿನೇಶ್ ಕಾರ್ತಿಕ್ ಒಟ್ಟು 6 ತಂಡಗಳ ಪರ ಕಣಕ್ಕಿಳಿದಿದ್ದಾರೆ. 2008 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ್ದ ದಿನೇಶ್ ಕಾರ್ತಿಕ್, 2011 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ಪರ ಆಡಿದ್ದರು.
2012 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪಾಲಾದರು. ಆನಂತರ 2013ರಲ್ಲಿ ಮುಂಬೈ ಇಂಡಿಯನ್ಸ್ ಪರ ಅವರು ಟ್ರೋಫಿ ಗೆದ್ದಿದ್ದರು. ಇದಾದ ಬಳಿಕ ಹಲವು ತಂಡಗಳ ಪರ ಆಡಿದರೂ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಾಧ್ಯವಾಗಿಲ್ಲ.
2014 ರಲ್ಲಿ ಮತ್ತೆ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಮರಳಿದ್ದರು.
2015 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು.
2016-17 ರಲ್ಲಿ ಗುಜರಾತ್ ಲಯನ್ಸ್ (ಈ ತಂಡ ಈಗಿಲ್ಲ) ಪರ ಆಡಿದ್ದರು.
2018 ರಿಂದ 2021 ರವರೆಗೆ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿದಿದ್ದರು.
ದಿನೇಶ್ ಕಾರ್ತಿಕ್ ಈ ವರೆಗೆ ಐಪಿಎಲ್‌ನಲ್ಲಿ ಒಟ್ಟು 257 ಪಂದ್ಯಗಳನ್ನು ಆಡಿದ್ದಾರೆ. ಈ ಸಮಯದಲ್ಲಿ ಅವರು 26.32ರ ಸರಾಸರಿಯಲ್ಲಿ 135.36 ಸ್ಟ್ರೈಕ್ ರೇಟ್‌ನಲ್ಲಿ 4,842 ರನ್ ಗಳಿಸಿದ್ದಾರೆ. ಇದರಲ್ಲಿ 22 ಅರ್ಧ ಶತಕಗಳು ಸೇರಿವೆ. ದಿನೇಶ್ ಕಾರ್ತಿಕ್ ಅವರ ಅತ್ಯುತ್ತಮ ಪ್ರದರ್ಶನವೆಂದರೆ ಔಟಾಗದೆ 97 ರನ್ ಗಳಿಸಿರುವುದು. ಇದಲ್ಲದೆ ಧೋನಿ ಬಳಿಕ ಅತೀ ಹೆಚ್ಚು ಪಂದ್ಯವಾಡಿದ ವಿಕೆಟ್ ಕೀಪರ್ ಎಂಬ ದಾಖಲೆ ಕೂಡ ದಿನೇಶ್ ಕಾರ್ತಿಕ್ ಹೆಸರಿನಲ್ಲಿದೆ. ಈ ಎಲ್ಲಾ ದಾಖಲೆಗಳೊಂದಿಗೆ ಇದೀಗ ಡಿಕೆ ಐಪಿಎಲ್‌ಗೆ ವಿದಾಯ ಹೇಳಿದ್ದಾರೆ.
ಭಾರತೀಯ ತಂಡಕ್ಕಾಗಿ ಮೊದಲ ಟಿ20 ಪಂದ್ಯವನ್ನು ಆಡಿದ ಕೆಲವೇ ಕೆಲವು ಭಾರತೀಯ ಆಟಗಾರರಲ್ಲಿ ದಿನೇಶ್ ಕಾರ್ತಿಕ್ ಕೂಡ ಒಬ್ಬರು. ಈವರೆಗೆ ಅವರು ಒಟ್ಟು 17 ಐಪಿಎಲ್ ಸೀಸನ್‌ಗಳಲ್ಲಿ ಒಟ್ಟು 6 ತಂಡಗಳಲ್ಲಿ ಆಡಿದ್ದಾರೆ. ಆದರೆ ಅವರು ಆರ್‌ಸಿಬಿ ತನ್ನ ಫೇವರಿಟ್ ತಂಡ, ಆರ್‌ಸಿಬಿ ಫ್ಯಾನ್ಸ್ ನಿಜಕ್ಕೂ ಅತ್ಯಮೋಘ ಎಂದು ಇತ್ತೀಚೆಗೆ ಹೇಳಿದ್ದರು.